ಸುದ್ದಿವಿಜಯ, ಭರಮಸಾಗರ: ಪಕ್ಕದ ಶ್ರೀಲಂಕಾ ರಾಷ್ಟ್ರದಲ್ಲಿ ಒಂದು ಕೆಜಿ ಅಕ್ಕಿ ಬೆಲೆ 480 ರೂ ಆದರೆ ಕೋವಿಡ್ ಬಂದ ನಂತರ ದೇಶದ 100 ಕೋಟಿ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಉಚಿತವಾಗಿ ಪಡಿತರ ಅಕ್ಕಿ ನೀಡುವ ಮೂಲಕ ಅಭಿವೃದ್ಧಿಗೆ ಆದ್ಯತೆ ನೀಡುತ್ತಿರುವ ಸಣ್ಣ ಸಾಧನೆ ಅಲ್ಲ ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಹೇಳಿದರು.
ಭರಮಸಾಗರ ಹೋಬಳಿಯ ಯಳಗೋಡು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ 2 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ವಿದ್ಯುತ್ ದೀಪ ಅಲಕೃತ ರಸ್ತೆ ಉದ್ಘಾಟನೆ, ಸ.ಪ.ಪೂರ್ವ ಕಾಲೇಜಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ 96 ಲಕ್ಷ ವೆಚ್ಚದ 3 ಕೊಠಡಿಗಳ ಉದ್ಘಾಟನೆ, 22 ಲಕ್ಷ ರೂ ವೆಚ್ಚದ 3 ಸ.ಕಿ.ಪ್ರಾ ಶಾಲೆಯ ಕೊಠಡಿಗಳ ಉದ್ಘಾಟನೆ ಹಾಗೂ ಮಾರಮ್ಮ ದೇವಸ್ಥಾನದ ಶಿಖರ ಪೂಜೆ ನೆರವೇರಿಸಿ ಮಾತನಾಡಿದರು.
ಈ ದೇಶ ಕಂಡ ಅತ್ಯುತಮ್ಮ ಪ್ರಧಾನಿ ಮೊದಿ ಅವರು 130 ಕೋಟಿ ಜನರಿಗೆ ಉಚಿತ ಕೋವಿಡ್ ಲಸಿಕೆ ಹಾಕಿಸಿದ್ದು ವಿಶ್ವವೇ ಇತ್ತ ಕಡೆ ನೋಡುವಂತ ಸಾಧನೆ ಮಾಡಿದ್ದಾರೆ.

ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಆಶೀರ್ವಾದದಿಂದ 43 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಮ್ಮ ಬಜೆಟ್‍ನಲ್ಲಿ ಮೀಸಲಿಟ್ಟಿದ್ದರ ಪರಿಣಾಮ ಇಂದು ಈ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ. ರಾಜಕಾರಣಿಗಳಿಗೆ ದೂರದೃಷ್ಟಿ ಇರಬೇಕು ಆಗ ಮಾತ ಗ್ರಾಮಗಳ ಅಭಿವೃದ್ಧಿ ಆಗುತ್ತದೆ ಎಂದರು.
1994ರಿಂದ ರಾಜಕಾರಣದಲ್ಲಿದ್ದು 24 ವರ್ಷಗಳ ಕಾಲ ಶಾಸಕನಾಗಿ ಕೆಲಸ ಮಾಡಿದ್ದೇನೆ ಕಳೆದ ನಾಲ್ಕು ವರ್ಷಗಳಲ್ಲಿ ಕ್ಷೇತ್ರದ 194 ಹಳ್ಳಿಗಳಿಗೆ 2380 ಕೋಟಿ ಅನುದಾನ ತಂದು ರಸ್ತೆ, ಶಾಲೆಗಳ ನಿರ್ಮಾಣ, ಶೌಚಾಲಯ, ವಸತಿ, ಕೆರೆಗಳ ಅಭಿವೃದ್ಧಿ ಮಾಡಿದ್ದೇನೆ.
ಈ ಹಿಂದೆ ಯಾರೂ ಮಾಡದಂತ ಅಭಿವೃದ್ಧಿ ಮಾಡಿದ್ದೇನೆ. ನೀವು ನನ್ನನ್ನು ಏನೂ ಕೇಳದಿದ್ದರೂ ಜನರಿಗೆ ಏನು ಬೇಕು ಎಂದು ಅರಿತು ಕೆಲಸ ಮಾಡುತ್ತಿದ್ದೇನೆ. ಯಳಗೋಡು ಗ್ರಾಮ ನನ್ನ ನೆಚ್ಚಿನ ಗ್ರಾಮ ಕಳೆದ ಬಾರಿ ನನ್ನನ್ನು 48 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದರಿಂದ ನಿಮ್ಮ ಋಣ ತೀರಿಸುವ ಜವಾಬ್ದಾರಿ ನನ್ನ ಮೇಲಿದ್ದು ಮುಂದಿನ ಬಾರಿಯೂ ಶಾಸಕನಾಗಿ ಆಯ್ಕೆಯಾದರೆ ಮತ್ತೆ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜು ಉಪ ನಿರ್ದೇಶಕ ಎನ್.ರಾಜು, ಪ್ರಾಂಶುಪಾಲ ವಿಜಯ್ ಮಾತನಾಡಿದರು.
ಈ ವೇಳೆ ಗ್ರಾಪಂ ಅಧ್ಯಕ್ಷೆ ಬಸಮ್ಮ, ಪಿಡಬ್ಲ್ಯೂಡಿ ಎಇಇ ಜಿ.ಕೃಷ್ಣಪ್ಪ, ಜೆಇ ಸಿ.ಚಂದ್ರಪ್ಪ, ಎಚ್.ಪಿ.ತಿಪ್ಪೇಸ್ವಾಮಿ, ಕಾಂಟ್ರ್ಯಾಕ್ಟರ್ ಪಂಪಾಪತಿ, ಗ್ರಾಪಂ ಸದಸ್ಯರಾದ ಅನಿತಾ, ತಿಪ್ಪೇಸ್ವಾಮಿ, ಪಾರ್ವತಮ್ಮ, ನಾಗರಾಜಪ್ಪ ಗ್ರಾಮಸ್ಥರಾದ ಮುರಿಗೆಪ್ಪ, ಕರಿಬಸಯ್ಯ, ಸೂರಲಿಂಗಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ತಿಪ್ಪೇಸ್ವಾಮಿ, ಪಿಡಿಒ ಪ್ರಹ್ಲಾದ್, ಪಣಿಯಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಉಚಿತ ಬಸ್ ವ್ಯವಸ್ಥೆ!
ಸರಕಾರಿ ಶಾಲೆ, ಕಾಲೇಜಿನಲ್ಲಿ ಓದುತ್ತಿರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಾಸಕರ ಅನುದಾನದಲ್ಲಿ ಮುಂದಿನ ಶೈಕ್ಷೀಣಕ ವರ್ಷದಿಂದ ಉಚಿತವಾಗಿ ಬಸ್ ವ್ಯವಸ್ಥೆ ಮಾಡುತ್ತೇನೆ. ಈಗಾಗಲೇ ಯಳಗೋಡು ಶಾಲೆಗೆ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ ಮಾಡಿದ್ದು ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಿದ್ದೇನೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಕಲಿತು ಐಎಎಎಸ್ ಕೆಎಎಸ್ ಪರೀಕ್ಷೆಗಳಲ್ಲಿ ತೇರ್ಗಡೆಯಾಗಬೇಕು ಎಂದು ಶಾಸಕ ಎಂ.ಚಂದ್ರಪ್ಪ ಕರೆ ನೀಡಿದರು.