ಸುದ್ದಿವಿಜಯ, ಭರಮಸಾಗರ: ಕನ್ನಡ ನಾಡು ಕಲೆಗಳ ತವರೂರು. ಇಲ್ಲಿ ಕಲೆಯನ್ನು ಇಂತಹವರೇ ಕಲಿಯಬೇಕು. ಇಂತಹ ಜನಾಂಗದವರೇ ಬೆಳೆಸಬೇಕು ಎಂಬ ಎಲ್ಲೆಯಿಲ್ಲ. ಪ್ರತಿಭೆಯಿರುವ ಎಲ್ಲರೂ ಕಲೆಯನ್ನು ಆರಾಧಿಸಲು ಅವಕಾಶವಿದೆ. ಗಡಿ, ಪ್ರಾಂತ್ಯ ಮೀರಿ ಕಲೆಯನ್ನು ಎಲ್ಲರೂ ಬೆಳೆಸಬೇಕು. ಕಲೆ ಯಾರಪ್ಪನ ಸೊತ್ತಲ್ಲ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.
ಭರಮಸಾಗರ ಹೋಬಳಿಯ ನೆಲ್ಲಿಕಟ್ಟೆ ಗ್ರಾಮದಲ್ಲಿ ಶನಿವಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಜನಪರ ಉತ್ಸವ -2022 ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಟಿವಿ ಮಾಧ್ಯಮಗಳು ಬರುವ ಮುಂಚೆ ಹಳ್ಳಿಗಳಲ್ಲಿ ನಾಟಕ, ದೊಡ್ಡಾಟ, ಬಯಲಾಟ, ಸೋಬಾನೆ, ಗೀಗಿ ಪದಗಳು ಜಾನಪದ ನೃತ್ಯಗಳು, ಕೋಲಾಟಗಳೇ ಮನರಂಜನೆಯಾಗಿದ್ದವು. ಆದರೆ ನವ ಮಾಧ್ಯಮಗಳು ಬಂದ ಮೇಲೆ ಪ್ರಭಾವ ಕ್ಷೀಣಿಸುತ್ತಿದೆ. ಹೀಗಾಗಿ ಕಲಾವಿದರನ್ನು ಪ್ರೋತ್ಸಾಹಿಸುವ ಸಲುವಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಕಲಾವಿದರನ್ನು ಗುರುತಿಸಿ ಪ್ರತಿ ತಿಂಗಳು 2 ಸಾವಿರ ಮಾಸಾಶನ ನೀಡುತ್ತಿದೆ. ಕಲಾವಿದರು ಅರ್ಜಿ ಸಲ್ಲಿಸಿ ಸರಕಾರದ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.
ಕಲೆ ಪೀಳಿಗೆಯಿಂದ ಪೀಳಿಗೆಗೆ ಬೆಳೆಯಬೇಕಾದರೆ ಕಲಾವಿದರು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ನವೆಂಬರ್ ತಿಂಗಳು ಬಂದರೆ ಕನ್ನಡ ರಾಜ್ಯೋತ್ಸವದಲ್ಲಿ ಕಲಾ ರಸಿಕರ ಕಲಾಪ್ರದರ್ಶನ ನೋಡುವುದೇ ಚಂದ. ಏಕೀಕರಣ ಸಂದರ್ಭದಲ್ಲಿ ಕನ್ನಡ ಕಟ್ಟುವ ಕೆಲಸಗಳಾದವು.
ಕುವೆಂಪು ಅವರ ಜಯಭಾರತ ಜನನಿಯ ತನುಜಾತೆ, ರೈತ ಗೀತೆ ಜನ ಮಾನಸದಲ್ಲಿ ಅಚ್ಚಳಿಯದೇ ಉಳಿಯುವಂತೆ ಒಗ್ಗೂಡಿಸುವ ಕಾವಿತೆಗಳಾದವು ಎಂದರು. ನೆಲ್ಲಿಕಟ್ಟೆ ಗ್ರಾಮದ ಅಭಿವೃದ್ಧಿಗೆ ಕಾಂಕ್ರೀಟ್ ರಸ್ತೆ, ಶುದ್ಧ ನೀರಿನ ಸೌಲಭ್ಯ ಸೇರಿ ಅನೇಕ ಮೂಲ ಸೌಕರ್ಯ ನೀಡಿದ್ದೇನೆ. ನನ್ನ ಕ್ಷೇತ್ರದ ಗಡಿ ಗ್ರಾಮ ಎಂದು ಬೇಧ ಮಾಡಿಲ್ಲ ಎಂದು ಶಾಸಕರು ಹೇಳಿದರು.
ಕಲಾವಿದರನ್ನು ಗುರುತಿಸುವ ಸರಕಾರ ನೇಮಿಸಿದ ಸಮಿತಿಯ ಸದಸ್ಯ ಮುರಾರ್ಜಿ ಮಾತನಾಡಿ, ಕನ್ನಡ ಸಂಸ್ಕøತಿ ಸಚಿವ ಸುನಿಲ್ ಕುಮಾರ್ ಅವರು ಕನ್ನಡ ಭಾಷಾ ಬೆಳವಣಿಗೆಗೆ ಅನೇಕ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಕೋಟಿ ಕಂಠ ಗಾಯನ ವಿಶ್ವದ ಬೇರೆ ಬೇರೆ ದೇಶಗಳಲ್ಲಿ ನೆಲಸಿದ ಕನ್ನಡಿಗರನ್ನು ಒಗ್ಗೂಡಿಸುವ ಕೆಲಸ ಮಾಡಿತು. ಕಲಾವಿದರ ಮಾಸಾಶನಕ್ಕೆ ಹೆಸರು ನೊಂದಾಯಿಸಿಕೊಳ್ಳಿ, ಅನಾರೋಗ್ಯ ಪೀಡಿತ ಕಲಾವಿದರ ಆಸ್ಪತ್ರೆಗೆ ಖರ್ಚುಗಳನ್ನು ಸರಕಾರವೇ ಭರಿಸಲಿದೆ. ಅದನ್ನು ಸದುಪಯೋಗ ಪಡೆದುಕೊಳ್ಳಿ ಎಂದರು.
ಕಂಠೇಶ್ ಮತ್ತು ತಂಡ ಕ್ರಾಂತಿ ಗೀತೆಗಳನ್ನು ಹಾಡಿದರು, ಮುರಾರ್ಜಿ ಮತ್ತು ತಂಡ ಸುಗಮ ಸಂಗೀತ, ಚಂದ್ರಪ್ಪ ಮತ್ತು ತಂಡ ವಚನ ಗಾಯನ, ಲೋಕೇಶ್ ಪಲ್ಲವಿ ತಂಡ ಜಾನಪದ ಗೀತೆ, ಶಿವಣ್ಣ ಸಂಗಡಿಗರಿಂದ ಕನ್ನಡ ಗೀತೆ ಗಾಯನ, ರಂಗಸ್ವಾಮಿ ತಂಡ ಭಾವಗೀತೆ, ನಿರ್ಮಲಾ ತಂಡದವರಿಂದ ಸಮೂಹ ನೃತ್ಯ, ಡಿ.ರಾಜಣ್ಣ ಸಂಗಡಿಗರಿಂದ ರಂಗ ಗೀತೆ, ಗಂಗಾಧರ್ ತಂಡ ವಚನ ಸಂಗೀತ, ಹಿಮಂತರಾಜ್ ತಂಡ ಜಾನಪದ ಸಂಗೀತ ಪ್ರಸ್ತುತ ಪಡಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಚಿತ್ರದುರ್ಗದ ಎಸ್.ಕೆ.ಮಲ್ಲಿಕಾರ್ಜುನ, ಗ್ರಾಪಂ ಅಧ್ಯಕ್ಷ ಗುರುಶಾಂತಪ್ಪ, ತಾಪಂ ಇಒ ಎಚ್ ಹನುಮಂತಪ್ಪ, ಪಿಡಿಒ ರಾಮಪ್ಪ, ಸದಸ್ಯರಾದ ಪುಟ್ಟಮ್ಮ, ಸಾವಿತ್ರಮ್ಮ, ಷಣ್ಮುಖಪ್ಪ, ಜಯಪ್ಪ, ಮಂಡಲ್ ಬಿಜೆಪಿ ಅಧ್ಯಕ್ಷ ಶೈಲೇಶ್ ಸೇರಿದಂತೆ ಅನೇಕರು ಇದ್ದರು.