ಸುದ್ದಿವಿಜಯ, ಜಗಳೂರು: ದಾವಣಗೆರೆ ಜಗಳೂರು ಸಂಪರ್ಕ ಕಲ್ಪಿಸುವ ನೇರ ಮಾರ್ಗವಾಗಿರುವ ಮಲ್ಪೆ, ಮೊಳಕಾಲ್ಮೂರು ರಾಜ್ಯ ಹೆದ್ದಾರಿಯ ಅಣಜಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ಭಾರಿ ಪ್ರಮಾಣದ ನೀರು ತುಪ್ಪದಹಳ್ಳಿ ಕೆರೆ ಸೇರುತ್ತಿದೆ.
ಹೀಗಾಗಿ ದಾವಣಗೆರೆಯಿಂದ ಜಗಳೂರಿಗೆ ಮತ್ತು ಜಗಳೂರಿನಿಂದ ದಾಣವಣೆರೆಗೆ ಹೋಗುವ ಮಾರ್ಗದಲ್ಲಿ ಅಡಚಣೆ ಉಂಟಾಗಿದೆ. ಭಾರಿ ವಾಹನಗಳಾದ ಬಸ್, ಲಾರಿ, ಹೆವಿ ವೆಹಿಕಲ್‍ಗಳಷ್ಟೇ ಸಾರ್ವಜನಿಕರು ಪ್ರಯಾಣ ಬೆಳಸಬಹುದಾಗಿದೆ.
ಕಾರ್, ಬೈಕ್ ಮತ್ತಿತರ ವಾಹನಗಳಲ್ಲಿ ಪ್ರಯಾಣ ಬೆಳೆಸುವ ನಾಗರಿಕರಿಗೆ ನೀರಿನ ಸೆಳೆತ ಜಾಸ್ತಿಯಿದ್ದು ವಾಹನ ಓಡಾಟ ಅಸಾಧ್ಯವಾಗಿದೆ. ಸಾರ್ವಜನಿಕರು ಎಚ್ಚರಿಕೆಯಿಂದ ಪ್ರಯಾಣ ಮಾಡಬೇಕು ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಭಾರಿ ಪ್ರಮಾಣದ ನೀರು ಹೊಲಗಳಿಗೆ ನುಗ್ಗಿ ಮೆಕ್ಕೆಜೋಳ, ಅಡಕೆ ಸೇರಿದಂತೆ ಬಹುತೇಕ ಬೆಳೆಗಳು ಜಲಾವೃತವಾಗಿವೆ. ಇನ್ನು ಎರಡು ದಿನ ಭಾರಿ ಮಳೆಯಾಗುವ ಸಾಧ್ಯತೆಯನ್ನು ಹವಮಾನ ಇಲಾಖೆ ಅಧಿಕಾರಿ ತಿಳಿಸಿದ್ದು ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ.
40 ವರ್ಷಗಳ ನಂತರ ನೀರು ಹೊರಕ್ಕೆ:
ಕನಿಷ್ಠ ನಾಲ್ಕು ದಶಕಗಳ ನಂತರ ಅಣಜಿ ಕೆರೆ ಭರ್ತಿಯಾಗಿದ್ದು ಕೆರೆಯಲ್ಲಿರುವ ಮೀನುಗಳು ರಸ್ತೆಯಲ್ಲಿ ನೀರಿನ ಮೂಲಕ ಹರಿದು ಹೋಗುತ್ತಿದ್ದು ಸಾಗರದಂತೆ ಕೆರೆ ಭಾಸವಾಗುತ್ತಿದೆ. ಹೀಗಾಗಿ ನೀರನ್ನು ನೋಡಲು ಸುತ್ತಮುತ್ತಲ ಗ್ರಾಮಸ್ಥರು ಮತ್ತು ವಾಹನ ಸವಾರರು ಕ್ಷಣ ಕಾಲ ನಿಂತು ನೋಡಿಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿದೆ.

ಕೆರೆಯಿಂದ ಭಾರಿ ಪ್ರಮಾಣದ ನೀರು ಹೊರ ಹೋಗುತ್ತಿದ್ದು ರಸ್ತೆ ಮೇಲೆ ಸಂಚರಿಸುವ ನಾಗರಿಕರು ಜಾಗರೂಕರಾಗಿ ಸಂಚಿರಸಬೇಕು. ಕಾರು, ಬೈಕ್ ಸಣ್ಣ ವಾಹನಗಳನ್ನು ಬಳಸದೇ ಬಸ್ ಸಂಚಾರ ಮಾಡಿದರೆ ಉತ್ತಮ. ಕೆರೆ ತೂಬು ಮತ್ತು ಏರಿ ಲೀಕೇಜ್ ಆಗದಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಎಚ್ಚರ ವಹಿಸಿದ್ದೇವೆ.
-ಶಿವಮೂರ್ತಿ, ಸಣ್ಣ ನೀರಾವರಿ ಇಲಾಖೆಯ ಎಇಇ