ಸುದ್ದಿವಿಜಯ,ಜಗಳೂರು: ನಿನ್ನೆಗೆ (ಸೋಮವಾರ) ಸರಿಯಾಗಿ 5 ವರ್ಷಗಳ ಹಿಂದೆ ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ ತಮ್ಮ ತಾಯಿ ಉಜ್ವಲಾ ಪಡುಕೋಣೆ ಜೊತೆ ಜಗಳೂರು ತಾಲೂಕಿನ ಪಲ್ಲಾಗಟ್ಟೆ ಮತ್ತು ಬಿಳಿಚೋಡು ಗ್ರಾಮಗಳ ಮಾನಸಿಕ ಅಸ್ವಸ್ಥರ ಮನೆಗಳಿಗೆ ಭೇಟಿ ನೀಡಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದರ ಪರಿಣಾಮ ಇಂದು ಆ ಕುಟುಂಬ ಸಂತೋಷದಿಂದ ಬದುಕುತ್ತಿದೆ.
ಹೌದು, ಪ್ರತಿವರ್ಷ ಅಕ್ಟೋಬರ್ 10 ರಂದು ವಿಶ್ವ ಮಾನಸಿಕ ಅಸ್ವಸ್ಥರ ದಿನವನ್ನಾಗಿ ಆಚರಿಸಲಾಗುತ್ತದೆ. ಬಾಲಿವುಡ್‍ನ ಖ್ಯಾತ ನಟಿ ಹಾಗೂ ಕನ್ನಡತಿ ದೀಪಿಕಾ ಪಡುಕೋಣೆ ಜಗಳೂರು ತಾಲೂಕು ಪಲ್ಲಾಗಟ್ಟೆ, ಬಿಳಿಚೋಡು ಗ್ರಾಮಗಳಿಗೆ ಭೇಟಿ ನೀಡಿ (ಅ.10-2017) ನಿನ್ನೆಗೆ 5 ವರ್ಷಗಳೇ ಕಳೆದವು.
ಅದು ಮಂಗಳವಾರ. ಮಾನಸಿಕ ಅಸ್ವಸ್ಥರು ಮತ್ತು ಅವರ ಕುಟುಂಬದವರಿಗೆ ಮಾನಸಿಕ ಖಿನ್ನತೆಯಿಂದ ಹೊರಬರುವುದು ಹೇಗೆಂದು ಸ್ವತಃ ತಮ್ಮ ಕತೆಯನ್ನು ಹೇಳಿ ಅವರಿಗೆ ಸ್ಫೂರ್ತಿ ತುಂಬಿದರು ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ. ತಾವೇ ಹುಟ್ಟು ಹಾಕಿರುವ ಲೀವ್ ಲವ್ ಲಾಫ್ ಫೌಂಡೇಷನ್ (ಟಿಎಲ್‍ಎಲ್‍ಎಫ್)ನೇತೃತ್ವದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಪ್ರಯುಕ್ತ ಕುಗ್ರಾಮಕ್ಕೆ ಭೇಟಿ ನೀಡಿ ಎಂ.ಬಿ.ಆಶಾ ಹನುಮಂತಪ್ಪ ಹಾಗೂ ಮಹೇಶ್ವರಪ್ಪ ಎಂಬ ಮಾನಸಿಕ ಅಸ್ವಸ್ಥರಿಗೆ ಧೈರ್ಯ ತುಂಬಿ ಚಿಕಿತ್ಸೆ ಕೊಡಿಸಿದ್ದರ ಪರಿಣಾಮ ಆಶಾ ಹನುಮಂತಪ್ಪ ಅವರ ಕುಟುಂಬ ಇಂದು ನೆಮ್ಮದಿಯಿಂದ ಬದುಕುತ್ತಿದೆ.
‘ಎಲ್ಲ ಕಾಯಿಲೆಗಳಂತೆ ಮಾನಸಿಕ ಅಸ್ವಸ್ಥತೆಯೂ ಒಂದು ಕಾಯಿಲೆ. ಇದು ಗುಣಪಡಿಸಬಹುದಾದ ರೋಗವಾಗಿದೆ. ಮೂರು ವರ್ಷದ ಹಿಂದೆ ನಾನು ಮಾನಸಿಕ ಖಿನ್ನತೆಗೆ ಒಳಗಾಗಿ ಮುಂಬಯಿ ಮನೆಯಿಂದ ಹೊರಹೋಗಲು ಆಗದಂತ ಪರಿಸ್ಥಿತಿ ಎದುರಾಗಿತ್ತು. ಸಿನೆಮಾ ಶೂಟಿಂಗ್‍ಗೆ ಹೋಗಲು ಸಹ ತೊಂದರೆ ಆಯಿತು. ಮನೆಯಲ್ಲೆ ಒಬ್ಬಳೇ ವೇದನೆ ಅನುಭವಿಸುತ್ತಿದ್ದೆ.
ಒಂದು ದಿನ ನಮ್ಮಮ್ಮನಿಗೆ ಇದನ್ನು ಹೇಳಿದೆ. ಅಮ್ಮ ನನಗೆ ಧೈರ್ಯ ತುಂಬಿದರು. ಡಾಕ್ಟರ್‍ಗೆ ತೋರಿಸುವಂತೆ ಸಲಹೆ ನೀಡಿದರು. ಅದರಂತೆ ಹಾಲಿ ಟಿಎಲ್‍ಎಲ್‍ಎಫ್ ಟ್ರಸ್ಟಿನ ಚಾಂಡಿ ಅವರಲ್ಲಿ ಹೋಗಿ ಕೌನ್ಸಿಲಿಂಗ್‍ಗೆ ಒಳಗಾದೆ. ಡಾಕ್ಟರ್‍ನ ಸಂಪರ್ಕಿಸಿ, ಚಿಕಿತ್ಸೆ ಪಡೆಯಲು ಸಲಹೆ ನೀಡಿದರು.’
ಅದರಂತೆ ಅಲ್ಲಿಂದ ಬೆಂಗಳೂರಿಗೆ ಬಂದು ನನ್ನ ತಾಯಿ ಜತೆ ಮಾನಸಿಕ ತಜ್ಞ ಡಾ.ಶ್ಯಾಮ ಭಟ್ ಅವರನ್ನು ಭೇಟಿ ಮಾಡಿದೆ. ಡಾಕ್ಟರ್ ತಪಾಸಣೆ ಮಾಡಿ ಔಷಧಿ ನೀಡುವುದರ ಜತೆ ಏಕಾಂಗಿಯಾಗಿ ಇರದಂತೆ ಸಲಹೆ ನೀಡಿದರು. ಔಷಧಿ ತೆಗೆದುಕೊಳ್ಳಲೋ ಬೇಡವೋ ಎಂಬ ಗೊಂದಲದಲ್ಲಿ, ಕೆಲ ದಿನ ಪರ್ಸಿನಲ್ಲೇ ಮಾತ್ರೆಗಳು ಇದ್ದವು. ಕೊನೆಗೆ ನನ್ನ ತಾಯಿ ಜತೆಗಿದ್ದು ಔಷಧಿ ತೆಗೆದುಕೊಳ್ಳಲು ಹುರಿದುಂಬಿಸಿದರು. ತಪ್ಪದೇ ಔಷಧಿ ತೆಗೆದುಕೊಂಡು ಮಾನಸಿಕ ಖಿನ್ನತೆಯಿಂದ ಹೊರಬಂದೆ. ನನ್ನ ಈ ಬದಲಾವಣೆಗೆ ತಾಯಿ, ಕುಟುಂಬ ಕಾರಣ’ ಎಂದು ಪಲ್ಲಾಗಟ್ಟೆ ಗ್ರಾಮದ ಆಶಾ ಹನುಮಂತಪ್ಪ ಮತ್ತು ಮಹೇಶ್ವರಪ್ಪ ಅವರಿಗೆ ಧೈರ್ಯ ತುಂಬಿದ್ದರು.

ಆಶಾ ಅವರು ಪತಿ ಹನುಮಂತಪ್ಪ ಮತ್ತು ಮುದ್ದಾದ ಇಬ್ಬರು ಮಕ್ಕಳ ಜೊತೆ ಮಾತನಾಡದೇ ಒಬ್ಬರೇ ಯೋಚಿಸುತ್ತ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಿದ್ದರು. ಅವರಿಗೆ ದೀಪಿಕಾ ಪಡುಕೋಣೆ ಧೈರ್ಯದ ಮಾತುಗಳು ದೀವಿಗೆಯಾಯಿತು. ಹೀಗಾಗಿ ಅವರು ಚಿಕಿತ್ಸೆಯ ಜೊತೆಗೆ ದೀಪಿಕಾ ಅವರು ಸ್ಪೂರ್ತಿಯ ಮಾತುಗಳಿಂದ ಎಂದಿನಂತೆ ತಮ್ಮ ಜೀವನ ನಡೆಸುತ್ತಿದ್ದಾರೆ. ಪ್ರಸ್ತುತ ಲವಲವಿಕೆಯಿಂದಿದ್ದು ಬಡತನವಿದ್ದರೂ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
ಎಲ್ಲರಂತೆ ನಾನು ಆರೋಗ್ಯವಾಗಿದ್ದೇನೆ:
ನನಗೆ ಮೊದಲು ದೀಪಿಕಾ ಪಡುಕೋಣೆ ಯಾರೆಂದು ಗೊತ್ತಿಲ್ಲದಷ್ಟು ಮಾನಸಿಕ ಅಸ್ವಸ್ಥಳಾಗಿದ್ದೆ. ಅವರು ಬರುವುದು ಗೊತ್ತಿರಲಿಲ್ಲ. 5 ವರ್ಷಗಳ ಹಿಂದೆ ನಮ್ಮ ಮನೆಗೆ ಬಂದು ಅವರು ನನಗೆ ಸ್ಪೂರ್ತಿ ತುಂಬಿದರು. ಅವರು ಅನುಭವಿಸಿದ ನೋವನ್ನು ಹೇಳಿಕೊಂಡರು. ನಿಮ್ಮೊಂದಿಗೆ ನಾನಿದ್ದೇನೆ ಚಿಕಿತ್ಸೆಯ ವೆಚ್ಚವನ್ನು ನಮ್ಮ ಟ್ರಸ್ಟ್‍ನಿಂದಲೇ ಭರಿಸುತ್ತೇವೆ ಎಂದು ಹೇಳಿದರು. ಹೀಗಾಗಿ ನಿಮ್ಹಾನ್ಸ್‍ನ ವೈದ್ಯರಾದ ಡಾ.ಶಿವಕುಮಾರ್ ಮಾರ್ಗದರ್ಶನದಲ್ಲಿ ಚಿಕಿತ್ಸೆ ಕೊಡಿಸಿದ್ದರಿಂದ ಪ್ರಸ್ತುತ ಎರಡು ವರ್ಷಗಳಿಂದ ನಿತ್ಯ ಮಾತ್ರೆ ತೆಗೆದುಕೊಳ್ಳದೇ ಎಲ್ಲರಂತೆ ನಾನು ಆರೋಗ್ಯವಾಗಿದ್ದೇನೆ.
-ಎಂ.ಬಿ.ಆಶಾ, ಹನುಮಂತಪ್ಪ.
ದೀಪಿಕಾ ಸಮಾಜ ಸೇವೆ ನಿಜಕ್ಕೂ ಶ್ಲಾಘನೀಯ:
ಹಿಂದುಳಿದ ತಾಲೂಕು ಜಗಳೂರಿನ್ನು ಪರಿಗಣಿಸಿ ನಿಮ್ಹಾನ್ಸ್ ಮಾನಸೀಕ ತಜ್ಞರಾದ ಡಾ.ಶಿವಕುಮಾರ್ ಈಭಾಗದ ಮಾನಸಿಕ ಅಸ್ವಸ್ಥರಿಗೆ ಸೂಕ್ತ ಮಾರ್ಗದರ್ಶನದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಹೀಗಾಗಿ ಅನೇಕ ರೋಗಿಗಳು ಗುಣಮುಖರಾಗಿದ್ದಾರೆ. ನಟಿ ದೀಪಿಕಾ ಪಡುಕೋಣೆ ಅವರು ಗ್ರಾಮಕ್ಕೆ ಬಂದು ಹೋದ ಮೇಲೆ ಅವರು ವೈದ್ಯರ ಜೊತೆ ಚರ್ಚಿಸಿ ರೋಗಿಗಳಿಗೆ ಚಿಕಿತ್ಸಾ ವೆಚ್ಚವನ್ನು ಭರಿಸಿ ಮಾನಸಿಕ ರೋಗಿಗಳಿಗೆ ಧೈರ್ಯ ತುಂಬಿದ್ದರಿಂದ ಇಂದು ಅನೇಕ ರೋಗಿಗಳು ಗುಣಮುಖರಾಗಿ ಮಾನಸೀಕ ಖಿನ್ನತೆಯಿಂದ ಹೊರ ಬಂದಿದ್ದಾರೆ. ಅವರ ಈ ಸಮಾಜ ಸೇವೆಗೆ ನಿಜಕ್ಕೂ ಶ್ಲಾಘನೀಯ.
ಡಾ.ಬಸವಂತ್, ವೈದ್ಯಾಧಿಕಾರಿಗಳು ಪಲ್ಲಾಗಟ್ಟೆ ಆರೋಗ್ಯ ಕೇಂದ್ರ
ನಮ್ಮ ಬಡತನ ನಿವಾರಣೆಯಾಗಿಲ್ಲ:
ದೀಪಿಕಾ ಪಡುಕೋಣೆಯವರ ಧೈರ್ಯದ ಮಾತುಗಳಿಂದ ಮತ್ತು ನಿಮ್ಹಾನ್ಸ್ ವೈದ್ಯರ ಮಾರ್ಗದರ್ಶನದಲ್ಲಿ ನನ್ನ ಹೆಂಡತಿ ಗುಣಮುಖರಾದರು. ಆದರೆ ನಮ್ಮ ಬಡತನ ನಿವಾರಣೆಯಾಗಿಲ್ಲ. ಸೋರುವ ಗುಡಿಸಲಲ್ಲಿ ಜೀವಿಸುತ್ತಿದ್ದೇವೆ. ಸರಕಾರವಾಗಲಿ, ದಾನಿಗಳಾಗಲಿ ನೆರವಾದರೆ ನಮ್ಮ ಜೀವನ ಮಟ್ಟ ಸುಧಾರಿಸುತ್ತದೆ.
ಹನುಮಂತಪ್ಪ, ಆಶಾ ಪತಿ, ಪಲ್ಲಾಗಟ್ಟೆ.