ಸುದ್ದಿವಿಜಯ, ಜಗಳೂರು:(ವಿಶೇಷ) ಪ್ರಸ್ತುತ ವರ್ಷ ಕುಂಭದ್ರೋಣ ಮಳೆಯಿಂದ ಜಗಳೂರು ತಾಲೂಕಿನ ಹಳ್ಳ ಕೊಳ್ಳಗಳು, ಚಕ್‍ಡ್ಯಾಮ್‍ಗಳು, ದೊಡ್ಡದೊಡ್ಡ ಕೆರೆಗಳು ಭರ್ತಿಯಾಗಿದ್ದು ಗ್ರಾಮೀಣ ಪ್ರದೇಶದ ಜನರು ಹಳ್ಳಗಳ ಮೂಲಕ ಹರಿಯುವ ಮೀನು ಮತ್ತು ಏಡಿಗಳನ್ನು ಹಿಡಿದು ತಿನ್ನುವವರ ಸಂಖ್ಯೆ ಹೆಚ್ಚಾಗಿದ್ದು ಇದರಿಂದ ಕೋಳಿ ಉದ್ಯಮಕ್ಕೆ ಆರ್ಥಿಕವಾಗಿ ಪೆಟ್ಟುಬಿದ್ದಂತಾಗಿದೆ.
ಜಗತ್ತಿನಲ್ಲೇ ಎಲ್ಲಾ ಜೀವಿಗಳಲ್ಲಿ ಅತಿ ಹೆಚ್ಚು ಕೊಲ್ಲಲ್ಪಟ್ಟ ಜೀವಿ ಎಂದರೆ ಕೋಳಿ. ಅಂತಹ ಕೋಳಿಗಳ ಜೀವಿತ ಅವ ಮಳೆಯಿಂದ ಸ್ವಲ್ಪ ಹೆಚ್ಚಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಜೊತೆಗೆ ಕುರಿಮಾಂಸ ಬೆಲೆ ಗಗನಕ್ಕೇರಿದ್ದು ಪುಕ್ಕಟೆಯಾಗಿ ದೊರಕುತ್ತಿರುವ ಮೀನು-ಏಡಿಗಳನ್ನು ಹಿಡಿಯಲು ಗ್ರಾಮೀಣ ಪ್ರದೇಶದ ಜನರು ಪೈಪೋಟಿಗೆ ಬಿದ್ದಿದ್ದಾರೆ. ಜೊತೆಗೆ ದೊಡ್ಡದೊಡ್ಡ ಕೆರೆಗಳಲ್ಲಿ ಮೀನುಗಳ ಸಂಖ್ಯೆ ದ್ವಿಗುಣವಾಗಿದ್ದು ಕೋಳಿ ಮಾಂಸಕ್ಕೆ ಬೇಡಿಕೆ ಕುಸಿದಿದೆ.
ಹರಿಯುವ ನೀರಿನಲ್ಲಿ ಸೊಳ್ಳೆ ಪರದೆಗಳನ್ನು ಅಡ್ಡಗಟ್ಟಿ ಸಿಗುವ ಮರಿ ಮೀನುಗಳನ್ನು ಹಿಡಿಯುವ ಹಳ್ಳಿ ಜನರು ಈಗ ಮೀನು ಮಾಂಸ ಸವಿಯುವಲ್ಲಿ ಬ್ಯೂಸಿಯಾಗಿದ್ದಾರೆ. ಇದರಿಂದ ಕೋಳಿಯ ಚಿಕನ್‍ಗೆ ಬೇಡಿಕೆ ಕುಸಿದಿದೆ. ಹೀಗಾಗಿ ಕೋಳಿ ಸಾಕಾಣಿಕೆದಾರರು, ಕುಕ್ಕುಟೋದ್ಯಮಿಗಳಿಗೆ ಮತ್ತು ಚಿಕನ್ ಸೆಂಟರ್‍ಗಳಲ್ಲಿ ಕೋಳಿ ಸೇಲ್ ಕಡಿಮೆಯಾಗಿದ್ದು ಆರ್ಥಿಕವಾಗಿ ಸ್ವಲ್ಪಮಟ್ಟಿಗೆ ಪೆಟ್ಟು ಬಿದ್ದಂತಾಗಿದೆ.

ಉದಾಹರಣೆಗೆ ಜಗಳೂರು ಪಟ್ಟಣದಲ್ಲಿ 13ಕ್ಕೂ ಹೆಚ್ಚು ಚಿಕನ್ ಸೆಂಟರ್‍ಗಳಿವೆ. ಗ್ರಾಮೀಣ ಪ್ರದೇಶದಲ್ಲಿ ಅಂದಾಜು 500ಕ್ಕೂ ಹೆಚ್ಚು ಕೋಳಿ ಮಾಂಸ ಮಾರಾಟದ ಅಂಗಡಿಗಳಿವೆ. ಮಳೆಗೂ ಮುನ್ನ ಪಟ್ಟಣದಲ್ಲಿ ಪ್ರತಿನಿತ್ಯ 2 ಕ್ವಿಂಟಾಲ್‍ಗೂ ಹೆಚ್ಚು ಚಿಕನ್ ಮಾಂಸ ಮಾರಾಟವಾಗುತ್ತಿತ್ತು.
ಭಾನುವಾರ ಮತ್ತು ರಜಾದಿನಗಳಲ್ಲಿ ನಾಲ್ಕು ಕ್ವಿಂಟಾಲ್‍ಗೂ ಹೆಚ್ಚು ಸೇಲ್ ಆಗುತ್ತಿತ್ತು. ವರುಣ ಅಬ್ಬರದಿಂದ ಹೋಟೆಲ್‍ಗಳಲ್ಲಿ, ಡಾಬಾಗಳಲ್ಲಿ ಪ್ರಸ್ತುತ ಸ್ಥಳೀಯವಾಗಿ ಸಿಗುವ ಕೆರೆ ಮೀನುಗಳ ಖಾದ್ಯ ದೊರಕುತ್ತಿದ್ದು, ಕೆಜಿಗೆ 120 ರಿಂದ 130 ರೂಗೆ ಮೀನು ಸಿಗುತ್ತಿದೆ. ಕೋಳಿ ಮಾಂಸ ಕೆಜಿಗೆ 200 ರೂ ದರವಿದ್ದು ಮೀನು ತಿನ್ನುವವರ ಅಬ್ಬರ ಜೋರಾಗಿದೆ. ಇದರಿಂದ ಕೋಳಿ ಮಾಂಸಕ್ಕೆ ಬೇಡಿಕೆ ಕುಸಿದಿದೆ.
ತಾಲೂಕಿನ ಜಮ್ಮಾಪುರ ಕೆರೆ, ಜಗಳೂರು ಕೆರೆ, ಸಂಗೇನಹಳ್ಳಿ, ತುಪ್ಪದಹಳ್ಳಿ, ಬಿಳಿಚೋಡು, ಕೆಳಗೋಟೆ, ಚಿಕ್ಕಹರಕೆರೆ, ಮಾಚಿಕೆರೆ, ಹಾಲೇಕಲ್ಲು ಮತ್ತು ಚದರಗೊಳ್ಳ ಕೆರೆಗಳಲ್ಲಿ ಗಾಳಹಾಕಿ ಮೀನು ಹಿಡಿದು ತಿನ್ನುವ ಮಂದಿ ಹೆಚ್ಚಾಗಿದ್ದಾರೆ.
ಹೆಚ್ಚು ಮೀನು ಸಿಕ್ಕೆರೆ ಸ್ಥಳೀಯವಾಗಿ ಕಡಿಮೆ ದರಕ್ಕೆ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಶಾಲೆ ಬಿಟ್ಟ ನಂತರ ಮಕ್ಕಳು, ಕೃಷಿ ಕೆಲಸ ಮುಗಿಸಿದ ನಂತರ ವಯಸ್ಕರರು ಮತ್ತು ಕೂಲಿ ಕೆಲಸ ಮುಗಿಸಿದ ನಂತರ ಕಾರ್ಮಿಕರು ಹಾಗೂ ಮಾಂಸಪ್ರಿಯರು ಹಳ್ಳಗಳಲ್ಲಿ ಹರಿಯುವ ನೀರಿಗೆ ಸೊಳ್ಳೆಪರದೆಯನ್ನು ಅಡ್ಡಲಾಗಿ ಹಿಡಿದು ಮೀನು, ಏಡಿ ಬೇಟೆ ಮಾಡುವ ದೃಶ್ಯಗಳು ನಿತ್ಯ ಕಣ್ಣಿಗೆ ನೋಡಬಹುದಾಗಿದೆ.

ಮೊದಲೆಲ್ಲ ಭಾನುವಾರ ಬಂದರೆ ಕಾರ್ಮಿಕರು, ರೈತರು ಪಟ್ಟಣಕ್ಕೆ ಬಂದು ಚಿಕನ್ ಕೊಂಡು ಹೋಗುತ್ತಿದ್ದರು. ಆದರೆ ಈಗ ಅವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದು ಹಳ್ಳದ ಸಾಲು, ಕೆರೆಗಳಲ್ಲಿ ಮೀನು ಹಿಡಿಯುವುದರಲ್ಲಿ ನಿರತರಾಗಿದ್ದಾರೆ.
ಅಲ್ಲದೇ ಕೋಳಿಗೆ ಮೆಕ್ಕೆಜೋಳದ(ಕ್ಯಾಟಲ್ ಫೀಡ್) ಫುಡ್ ಕೊರತೆ ಕಾಡುತ್ತಿದೆ. ಹೀಗಾಗಿ ಕೋಳಿ ಸಾಕಾಣಿಕೆ ಉದ್ಯಮಿಗಳು ಹಿಂದೆ ಸರಿದು ಮರಿ ಸಾಕಾಣಿಕೆ ಮಾಡಲು ಮುಂದೆ ಬರುತ್ತಿಲ್ಲ. ಅಲ್ಲದೇ ಮೀನುಗಳ ಸಂಖ್ಯೆ ಕೆರೆಗಳಲ್ಲಿ ದುಪ್ಪಟ್ಟಾಗಿದ್ದು ಮೀನು ತಿನ್ನುವವರು ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದೆ ಎನ್ನುತ್ತಾರೆ ಚಿಕನ್‍ಸೆಂಟರ್ ಮಾಲೀಕರು.
ಕುಕ್ಕುಟೋದ್ಯಮಕ್ಕೆ ಹೊಡೆತ ಬೀಳುವ ಸಾಧ್ಯತೆ!
ಮಳೆಗೂ ಮುನ್ನ ತಾಲೂಕಿನಲ್ಲಿ ಪ್ರತಿನಿತ್ಯ 5000ಕ್ಕೂ ಹೆಚ್ಚು ಕೋಳಿಗಳು ಮಾರಾಟವಾಗುತ್ತಿದ್ದವು. ಭಾನುವಾರ ಅದರ ಸಂಖ್ಯೆ ಹತ್ತು ಸಾವಿರ ದಾಟುತ್ತಿತ್ತು. ಆದರೆ ಈಗ ಅರ್ಧಕ್ಕೆ ಕುಸಿದಿದ್ದು ಬೇಸಿಗೆ ಬಂದಂತೆಲ್ಲ ಕೆರೆಯಲ್ಲಿರುವ ಮೀನು ಮರಿಗಳು ದೊಡ್ಡದಾಗಿ ಮತ್ತು ದ್ವಿಗುಣವಾದರೆ ಕುಕ್ಕುಟೋದ್ಯಮಕ್ಕೆ ಹೊಡೆತ ಬೀಳುವ ಸಾಧ್ಯತೆಯಿದೆ. ಜಿಲ್ಲೆಯಲ್ಲಿ ದಿನಕ್ಕೆ 20 ಸಾವಿರಕ್ಕೂ ಹೆಚ್ಚು ಕೋಳಿಗಳು ಬೇಕಾಗುತ್ತದೆ. ಭಾನುವಾರ 40 ಸಾವಿರಕ್ಕೂ ಹೆಚ್ಚು ಕೋಳಿಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಆದರೆ ಮಳೆಯಿಂದ ಮೀನು, ಏಡಿಗಳನ್ನು ಹಿಡಿದು ತಿನ್ನುವ ಮಂದಿ ಜಾಸ್ತಿಯಾಗಿದ್ದು ಕೋಳಿ ಸೇಲ್ ಕಡಿಮೆಯಾಗಿದೆ.
-ಓ.ಬಿ.ಗುರುಮೂರ್ತಿ, ಜಿಲ್ಲಾ ಕೋಳಿ ಸಕಾಣಿಕೆದಾರರ ಸಂಘದ ಅಧ್ಯಕ್ಷರು ದಾವಣಗೆರೆ
ಅಂಗಡಿಗಳ ಮಾಲೀಕರು ನಷ್ಟದಲ್ಲಿದ್ದೇವೆ!
ಜಗಳೂರು ಪಟ್ಟಣದಲ್ಲಿ ಮೊದಲು ಕೋಳಿ ಚಿಕನ್ ಹೆಚ್ಚು ಸೇಲ್ ಆಗುತ್ತಿತ್ತು. ಹಳ್ಳಿಜನ ಚಿಕನ್ ಕೊಂಡು ಹೋಗುತ್ತಿದ್ದರು. ಮಳೆಯಿಂದ ಮೀನುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಕೋಳಿ ಮಾಂಸ ಪ್ರಿಯರು ಕೋಳಿ ಬದಲಿಗೆ ಮೀನು ಮಾಂಸದ ಕಡೆ ವಾಲಿದ್ದಾರೆ. ನಿತ್ಯ 50ಕೆಜಿಗೆ ಕೋಳಿ ಮಾರಾಟ ಮಾತ್ರ ಸೀಮಿತವಾಗಿದ್ದು ಕೋಳಿ ಅಂಗಡಿಗಳ ಮಾಲೀಕರು ನಷ್ಟದಲ್ಲಿದ್ದೇವೆ.
ಎಂ.ಎಸ್.ನಜೀರ್ ಅಹಮ್ಮದ್, ಕೋಳಿ ಅಂಗಡಿ ವ್ಯಾಪಾರಿ, ಜಗಳೂರು.
ಮಳೆ ಮಾಂಸಪ್ರಿಯರಿಗೆ ವರದಾನ
ಉಚಿತವಾಗಿ ಹಳ್ಳದಲ್ಲಿ ಮೀನು ಏಡಿ ಸಿಗುತ್ತಿದ್ದು ಕೋಳಿ ಅಂಗಡಿಗಳ ಕಡೆ ನಾವು ಕಳೆದ ಒಂದು ತಿಂಗಳಿಂದ ಹೋಗಿಲ್ಲ. ಮೀನು ಮತ್ತು ಏಡಿಗಳನ್ನು ಹಿಡಿದು ತಿನ್ನುತ್ತಿದ್ದೇವೆ. ಮಳೆ ಮಾಂಸಪ್ರಿಯರಿಗೆ ವರದಾನವಾಗಿದೆ.
-ಹನುಮಂತ ಮತ್ತು ರಾಜು, ಮೀನು ಹಿಡಿಯುತ್ತಿರುವ ಕಾರ್ಮಿಕರು. ಕಟ್ಟಿಗೆಹಳ್ಳಿ