ಸುದ್ದಿವಿಜಯ, ಜಗಳೂರು: ತಾಲೂಕಿನ ಹೊಸಕೆರೆ ಗ್ರಾಮದ ಶಕ್ತಿ ದೇವತೆ ಆದಿಶಕ್ತಿ ಸತ್ಯಮ್ಮ ದೇವಿಯ ರಥೋತ್ಸವ ನಂತರ ಗ್ರಾಮೀಣ ದೇಸಿ ಕ್ರೀಡೆ ಕುಸ್ತಿಯನ್ನು ಆಯೋಜನೆ ಮಾಡಲಾಗಿತ್ತು.
ಮಾ.16 ಗುರುವಾರ ಮತ್ತು ಮಾ.17 ಶುಕ್ರವಾರ ನಡೆದ ಕುಸ್ತಿಯಲ್ಲಿ ಕುಸ್ತಿಪಟುಗಳ ಪಟ್ಟುಗಳು, ಸಾಮ್ ಮಾಡಿ ಎದುರಾಳಿಯನ್ನು ಮಣ್ಣುಮುಕ್ಕಿಸುವ ತಂತ್ರಕ್ಕೆ ಜನ ಮಾರು ಹೋಗಿದ್ದರು. ಉರಿ ಬಿಸಿಲನ್ನೂ ಲೆಕ್ಕಿಸದೇ ಜನ ಕೇಕೆ, ಶಿಳ್ಳೆ, ಚಪ್ಪಾಳೆಗಳನ್ನು ಹೊಡೆಯುವ ಮೂಲಕ ಕುಸ್ತಿಪಟುಗಳನ್ನು ಉರಿದುಂಬಿಸಿದರು.
ಶಿವಮೊಗ್ಗ, ದಾವಣಗೆರೆ, ಕೂಡ್ಲಿಗಿ, ಬಳ್ಳಾರಿ, ಹರಪನಹಳ್ಳಿ, ಉಜ್ಜಿನಿ,ಕೊಟ್ಟೂರು ಭಾಗಗಳಿಂದ ನೂರಾರು ಕುಸ್ತಿಪಟುಗಳ ಪಟ್ಟುಗಳು ನೋಡುಗರ ಮನಸೆಳೆದವು.ಈ ವರ್ಷದ ಕುಸ್ತಿ ಪಂದ್ಯದಲ್ಲಿ ದಾವಣಗೆರೆ ಪೈಲ್ವಾನ್ ಭೀಮಣ್ಣನಿಗೆ ಪ್ರಥಮ ಬಹುಮಾನ 5001 ರೂ ಮತ್ತು ಬೆಳ್ಳಿಗಧೆ, ಎಲೆಬೇತೂರು ಸತ್ಯರಾಜು ದ್ವಿತೀಯ ಬಹುಮಾನ 3001 ರೂ ಮತ್ತು ಸಾರಬಳೆ, ತೃತೀಯ ಬಹುಮಾನ ಬೆಳಗಾವಿಯ ಪರಶುರಾಮ 2001ರೂ ನಗದು ಬೆಳ್ಳಿಯ ಸಾರಬಳೆ ಪಡೆದರು.
ಪ್ರತಿ ವರ್ಷ ಸತ್ಯಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಈ ದೇಶಿ ಕ್ರೀಡೆಯಾದ ಕುಸ್ತಿಯನ್ನು ಆಯೋಜನೆ ಮಾಡಲಾಗುತ್ತದೆ. ಸಾವಿರಾರು ಭಕ್ತರು ಬಂದು ಹೋಗುವ ಈ ಪುಣ್ಯ ಕ್ಷೇತ್ರದಲ್ಲಿ ಗ್ರಾಮೀಣ ಕ್ರೀಡೆ ಮುಂದಿನ ಪೀಳಿಗೆಗೂ ಮುಂದುವರೆಯಲಿ ಎಂಬ ಸದುದ್ದೇಶದಿಂದ ದೇವಸ್ಥಾನ ಮಂಡಳಿ ಮತ್ತು ಗ್ರಾಮಸ್ಥರು ಕುಸ್ತಿ ಪಂದ್ಯಾವಳಿ ಆಯೋಜನೆ ಮಾಡಿ ಮನರಂಜೆ ನೀಡುವ ಮೂಲಕ ಭಕ್ತರನ್ನು ಆಕರ್ಷಿಲಾಗುತ್ತದೆ.
ಹೊಸಕೆರೆ ಗ್ರಾಮದ ಹಿರಿಯ ಪೈಲ್ವಾನ್ ಹನುಮಂತಪ್ಪ, ದಾನಪ್ಪ, ಬಣಕಾರ್ ರುದ್ರಪ್ಪ, ಗೌಡರ ಬಸವರಾಜ, ಗ್ರಾಪಂ ಅಧ್ಯಕ್ಷರಾದ ಲಕ್ಷ್ಮೀ ಸತೀಶ್, ಗ್ರಾಪಂ ಕಾರ್ಯದರ್ಶಿ ಎಚ್.ಸಿ.ಸತೀಶ್ ಸೇರಿದಂತೆ ಅನೇಕರು ಕುಸ್ತಿಪಂದ್ಯಾವಳಿಯ ನೇತೃತ್ವ ವಹಿಸಿದ್ದರು.