ಸುದ್ದಿವಿಜಯ,ಜಗಳೂರು: ತಾಲೂಕು ಬಿಡಿ ವರದಿಗಾರರೂ ಸೇರಿದಂತೆ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಎಲ್ಲ ಪತ್ರಕರ್ತರು ಸಂಕಷ್ಟದಲ್ಲಿದ್ದು ಅವರ ನೋವುಗಳಿಗೆ ಧ್ವನಿಯಾಗಿ ಕೆಲಸ ಮಾಡೋಣ ಎಂದು ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇ.ಎಂ.ಮಂಜುನಾಥ್ ಪತ್ರಕರ್ತರಿಗೆ ಅಭಯ ನೀಡಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಜಿಲ್ಲಾ ಮಟ್ಟದ ಸರ್ವ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಬಹುತೇಕ ಪರ್ತಕರ್ತರು ಆರೋಗ್ಯ ವಿಮೆಯಿಂದ ವಂಚಿತರಾಗಿದ್ದಾರೆ. ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪನೆ ಮಾಡುವ ಮೂಲಕ ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ನಾವೆಲ್ಲ ಚಿಂತನೆ ಮಾಡಬೇಕು.

ತಾಲೂಕಿನಲ್ಲಿ ಪತ್ರಿಕಾಭವನಗಳ ಸ್ಥಾಪನೆ ಜೊತೆಗೆ ಉತ್ತಮ ವರದಿಗಾರರಿಗೆ ಮತ್ತು ಗ್ರಾಮೀಣ ಸಮಸ್ಯೆಗಳ ಬಗ್ಗೆ ವಿಶೇಷ ವರದಿ ಮಾಡುವ ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿಗಳಿಗೆ ಪಾರದರ್ಶಕವಾಗಿ ಆಯ್ಕೆ ಮಾಡಲು ಕಮಿಟಿ ರಚನೆ ಮಾಡಲಾಗುವುದು. ಪತ್ರಕರ್ತರಿಗೆ ನಿವೇಶನ ಮತ್ತು ಸರಕಾರದ ಸೌಲಭ್ಯಗಳ ಬಗ್ಗೆ ಮುಂದಿನ ದಿನಗಳಲ್ಲಿ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಜೊತೆ ಚರ್ಚೆ ಮಾಡಿ ಅರ್ಹ ಪತ್ರಕರ್ತರಿಗೆ ಸೌಲಭ್ಯಗಳ ಕಲ್ಪಿಸುವ ಬಗ್ಗೆ ಚರ್ಚೆ ಮಾಡೋಣ ಎಂದರು.
ಪ್ರಧಾನ ಕಾರ್ಯದರ್ಶಿ ಎ.ಫಕೃದ್ದೀನ್ ಮಾತನಾಡಿ, ದಿಢೀರನೆ ಪರ್ತಕರ್ತರಿಗೆ ಸಂಕಷ್ಟಗಳಿಗೆ ಎದುರಾದರೆ ಅಂತಹವರಿಗೆ ಆರ್ಥಿಕವಾಗಿ ಸಹಾಯ ಮಾಡಲು ಆರ್ಥಿಕ ಕ್ರೂಢೀಕರಣ ಮಾಡಬೇಕಿದೆ. ಸಂಘದ ಬಲ ವರ್ದನೆಗೆ ತನು, ಮನ, ಧನ ಸಹಾಯ ಅಗತ್ಯವಿದೆ. ಸಂಘದ ಹೆಸರಿನಲ್ಲಿ ಕ್ಯಾಲೆಂಡರ್ ಮಾಡುವ ಚಿಂತನೆ ಮಾಡುತ್ತಿದ್ದೇವೆ. ತಾಲೂಕು ಪತ್ರಕರ್ತರು ಆರ್ಥಿಕ ನೆರವು ನೀಡಬೇಕು. ಲೆಕ್ಕಪತ್ರ ಪಾರದರ್ಶಕವಾಗಿರುತ್ತದೆ ಎಂದು ಹೇಳಿದರು.
ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಡಿ.ಶ್ರೀನಿವಾಸ್ ಮಾತನಾಡಿ, ತಾಲೂಕು ಪತ್ರಕರ್ತರು ತೀವ್ರ ಸಂಕಷ್ಟದಲ್ಲಿದ್ದಾರೆ. ಸ್ವಂತ ಖರ್ಚಿನಲ್ಲಿ ವರದಿಗಾರಿಕೆ ಮಾಡುತ್ತಿದ್ದಾರೆ. ಸರಕಾರದ ನಿವೇಶನ ಮತ್ತು ಸೌಲಭ್ಯಗಳು ತಾಲೂಕು ಪತ್ರಕರ್ತರಿಗೂ ಪ್ರಾಮಾಣಿಕವಾಗಿ ಒದಗಿಸಿ ಎಂದು ಸಲಹೆ ನೀಡಿದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಸ್.ಚಿದಾನಂದ ಮಾತನಾಡಿ, ಜಗಳೂರು ತಾಲೂಕಿನಲ್ಲಿ ಪತ್ರಕರ್ತರಿಗೆ ಸ್ವಂತ ಭವನವಿರಲಿಲ್ಲ. ಇತ್ತೀಚೆಗೆ ಶಾಸಕರು ಮತ್ತು ಕೆಲ ರಾಜಕಾರಣಿಗಳು ಆರ್ಥಿಕ ನೆರವಿನಿಂದ ಭವನ ನಿರ್ಮಾಣವಾಗುತ್ತಿದೆ. ಎಲ್ಲ ಲೆಕ್ಕಪತ್ರಗಳು ಪಾರದರ್ಶಕವಾಗಿವೆ ಎಂದರು.
ಸಭೆಯಲ್ಲಿ ಖಜಾಂಚಿ ಬದರಿನಾಥ್, ರಾಷ್ಟ್ರೀಯ ಪತ್ರಿಕಾ ಮಂಡಳಿ ಒಕ್ಕೂಟದ ಸದಸ್ಯ ಅಣಬೂರು ಮಠದ ಕೊಟ್ರೇಶ್, ಉಪಾಧ್ಯಕ್ಷರಾದ ತಿಪ್ಪೇಸ್ವಾಮಿ, ಸುಧಾಕರ್, ಚಂದ್ರಶೇಖರ್, ಕೀರ್ತಿಕುಮಾರ್, ವೀರೇಶ್, ಮುದ್ದಪ್ಪ, ಕೆ.ಸಿ.ಮಂಜುನಾಥ್, ವೇದಮೂರ್ತಿ, ಚಂದ್ರಶೇಖರ್, ಎನ್.ಆರ್.ರವಿ, ಗುರುಮೂರ್ತಿ, ಶಾಂಭವಿ, ಬಿ.ಪಿ.ಸುಭಾನ್, ತಾಲೂಕು ಪ್ರಧಾನ ಕಾರ್ಯದರ್ಶಿ ಲೋಕೇಶ್, ಖಜಾಂಚಿ ಜಗದೀಶ್, ಪದಾಧಿಕಾರಿಗಳಾದ ಬಾಬು, ರಾಜಪ್ಪ, ರವಿಕುಮಾರ್, ಧನ್ಯಕುಮಾರ್ ಸೇರಿದಂತೆ ಅನೇಕ ಪತ್ರಕರ್ತರು ಉಪಸ್ಥಿತರಿದ್ದರು.