ಸುದ್ದಿವಿಜಯ ಜಗಳೂರು.ಶೈಕ್ಷಣಿಕ ಹಂತದಲ್ಲಿ ಮಕ್ಕಳಲ್ಲಿ ಇರುವ ಕ್ರೀಡಾ ಪ್ರತಿಭೆ ಗುರುತಿಸಿ ಶಿಕ್ಷಕರು ಅಂತಹ ವಿದ್ಯಾರ್ಥಿಯ ಕ್ರೀಡಾ ಬೆಳವಣಿಗೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಶಾಸಕ ಎಸ್.ವಿ ರಾಮಚಂದ್ರ ಹೇಳಿದರು.
ಇಲ್ಲಿನ ಬಯಲು ರಂಗಮಂದಿರದ ಆವರಣದಲ್ಲಿ ಶನಿವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿ ಹಾಗೂ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಇವರ ಸಹಾಯೋಗದೊಂದಿಗೆ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಕ್ರೀಡಾಕೂಟದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಯೊಂದು ಮಾನವನ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ. ಕ್ರೀಡಾಪಟುಗಳು ಯಾವಾಗಲು ಕ್ರಿಯಾಶೀಲರಾಗಿ ಕೆಲಸ ಮಾಡಲು ಸಹಕರಿಸುತ್ತದೆ. ಆಟವೆಂದ ಮೇಲೆ ಸೋಲು-ಗೆಲುವು ಸಹಜ ಆದರೆ ಕ್ರೀಡೆಯಲ್ಲಿ ಭಾಗವಹಿಸಿ ಸ್ಪರ್ಧಿಸುವುದು ತುಂಬ ಮುಖ್ಯವಾಗಿದೆ ಎಂದರು.
ನಾನು ಕೂಡ ಹಾಕಿ ಮತ್ತು ಕಬಡ್ಡಿ ಕ್ರೀಡಾಪಟುವಾಗಿ ಆಟವಾಡಿದ್ದೇನೆ, ಹಾಕಿ ತಂಡವನ್ನು ಪ್ರತಿನಿದಿಸಿದ್ದೇನೆ ಹಾಗಾಗಿ ಕ್ರೀಡೆ ನನಗೆ ತುಂಬ ಆಸಕ್ತಿಯಾಗಿದೆ. ಕ್ರೀಡೆಯ ಜತೆಯಲ್ಲಿ ಶಿಕ್ಷಣಕ್ಕೂ ಒತ್ತು ನೀಡುವುದರಿಂದ ಮುಂದಿನ ಗುರಿಮುಟ್ಟಲು ಸಾದ್ಯವಾಗುತ್ತದೆ ಎಂದು ಸಲಹೆ ನೀಡಿದರು.
ತಾಲೂಕು ಮಟ್ಟಕ್ರೀಡಾ ಕೂಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಟೀ ಶರ್ಟ್ ನೀಡಲಾಗುವುದು ಹಾಗೂ ಜಿಲ್ಲಾ ಮಟ್ಟದಲ್ಲಿ ಜಯಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದವರಿಗೆ ಶೂ ವಿತರಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಸಂತೋಷ್ ಕುಮಾರ್,ಪ.ಪಂ ಅಧ್ಯಕ್ಷೆ ವಿಶಾಲಾಕ್ಷಿ ಸ.ನೌ.ಸಂಘದ ಅಧ್ಯಕ್ಷ ಬಿ.ಆರ್ ಚಂದ್ರಪ್ಪ, ಪ.ಪಂ ಉಪಾಧ್ಯಕ್ಷೆ ನಿರ್ಮಲಕುಮಾರಿ, ಬಿಇಒ ಉಮಾದೇವಿ, ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಕ್ಷೇತ್ರ ಸಮನ್ವಯಾಧಿಕಾರಿ ಡಿ.ಡಿ ಹಾಲಪ್ಪ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ .ಎಸ್ .ಎನ್ ಬಾಬುರೆಡ್ಡಿಗ್ರಾ.ಪಂ ಸದಸ್ಯರಾದ ಆರ್.ತಿಪ್ಪೇಸ್ವಾಮಿ,ಪಾಪಲಿಂಗಪ್ಪ, ನವೀನ್ ಕುಮಾರ್,ಓಬಳೇಶ್, ಪ್ರಾ. ಶಾ.ಶಿ ಸಂಘದ ಅಧ್ಯಕ್ಷ ಹನುಮಂತೇಶ್, ಪ್ರ.ಕಾರ್ಯದರ್ಶಿ ಆಂಜನೇಯ ನಾಯ್ಕ, ಆನಂದಪ್ಪ, ವೀರೇಶ್ ಸೇರಿದಂತೆ ಮತ್ತಿತರಿದ್ದರು.
ರಾಜ್ಯಮಟ್ಟದ ಕ್ರೀಡಾಕೂಟ ಆಯೋಜನೆ:
“ಜಗಳೂರಿನಲ್ಲಿ ಎರಡ್ಮೂರು ಬಾರಿ ಕ್ರೀಡಾಕೂಟ ನಡೆಸಿ ಜನರಿಗೆ ಮನರಂಜನೆ ನೀಡಿದ್ದೇನೆ, ಹಾಗಾಗಿ ಡಿಸೆಂಬರ್ ತಿಂಗಳಲ್ಲಿ ರಾಜ್ಯಮಟ್ಟದ ಹೊನಲು -ಬೆಳಕು ಕಬಡ್ಡಿ ಕ್ರೀಡಾಕೂಟ ನಡೆಸಲಾಗುವುದು. ಮಕ್ಕಳು ಹೆಚ್ಚು ಕ್ರೀಡೆಯನ್ನು ಆಡಿ ಆರೋಗ್ಯ ಸದೃಢ ಮಾಡಿಕೊಳ್ಳಿ”
– ಎಸ್.ವಿ ರಾಮಚಂದ್ರ, ಶಾಸಕರು.
” ಕ್ರೀಡೆ ಮುಖ್ಯವೇ ಹೊರತು ಸೋಲು,ಗೆಲುವು ಅಲ್ಲ. ಎಲ್ಲರು ಸಹೋದರತೆಯಿಂದ ಆಟವಾಡಿ, ತೀರ್ಪುಗಾರರು ನ್ಯಾಯಯುತವಾಗಿ ತೀರ್ಪು ನೀಡಬೇಕು ಮಕ್ಕಳಿಗೆ ಮಾದರಿಯಾಗಬೇಕು”
–ಉಮಾದೇವಿ ಬಿಇಒ ಜಗಳೂರು.