ಸುದ್ದಿವಿಜಯ: ಆಕೆ ಸೌಂದರ್ಯವತಿ. ಆಗಷ್ಟೇ ಬಿಎಸ್ಸಿ ಸೇರಿದ್ದ ಆಕೆಗೆ ಹುಡುಗರ ಕಣ್ಮನಗಳನ್ನು ಸೂಜಿಗಲ್ಲಿನಂತೆ ಸೆಳೆಯುವ ಅಂದಗಾತಿ. ಅಪ್ಪ ಡಿ-ದರ್ಜೆಯ ಸರಕಾರಿ ನೌಕರ. ಕಷ್ಟಪಟ್ಟು ಇದ್ದೊಬ್ಬ ಮಗಳನ್ನು ಓದಿಸಬೇಕು. ಸರಕಾರಿ ನೌಕರಿಗೆ ಸೇರಿಸಬೇಕು ಸೈಂಟಿಸ್ಟ್ ಮಾಡಬೇಕು ಎಂಬ ಮಹಾದಾಸೆ ಹೊಂದಿದ್ದರು…
ಅರೆ ಅಕೆಯ ಹೆಸರು ಯಾಕೆ ಹೇಳಲಿಲ್ಲ ಅನ್ಕೋಬೇಡಿ. ಆ ಅಂದಗಾತಿಯ ಹೆಸರು ಸುಚಿತ್ರ. ಅಮ್ಮ ಅಪ್ಪನ ಮುದ್ದಿನ ಏಕೈಕ ಮಗಳು. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡ ಸೊಬಗನ್ನು, ಕಾಫಿ ತೋಟದ ಘಮಲಿನ ಮಧ್ಯೆ ಬೆಳೆದ ಬೆಡಗಿ. ಪಿಯುಸಿಯಲ್ಲಿ ಟಾಪರ್.
ಆದ್ರೆ ಪ್ಯೂರ್ ಸೈನ್ಸ್ ಮಾಡಬೇಕು. ಸೈನ್ಸ್ ಪ್ರೊಫೇಸರ್ ಆಗಬೇಕು ಎಂಬ ಉತ್ಕಟ ಆಸೆಯೊಂದಿಗೆ ಎಂಜಿನಯರ್, ಎಂಬಿಬಿಎಸ್ ಆಸೆ ಬಿಟ್ಟು ಕಲ್ಯಾಣಿ ವಿಜ್ಞಾನ ಕಾಲೇಜು ಸೇರಿದಳು.
ಆಕೆ ಮೊದಲ ದಿನ ಕಾಲೇಜಿಗೆ ಬರುತ್ತಿದ್ದಂತೆ ಪಡ್ಡೆ ಹುಡುಗರ ಪುಂಡಾಟ ಆಕೆಯ ಸೌಂದರ್ಯದ ತೂಕವನ್ನು ಹೆಚ್ಚಿಸಿತ್ತು. ಹದಿ ಹರೆಯದ ಆಕೆಯನ್ನು ನೋಡದ ವಿದ್ಯಾರ್ಥಿಗಳಿಲ್ಲ. ಮಾತನಾಡಿಸಬೇಕು ಎಂಬ ಉತ್ಕಟ ಬಯಕೆಯಿಂದ ಅದೆಷ್ಟೋ ಹುಡುಗರು ಮುಂದೆ ಬಂದು ಬೆವರುತ್ತಿದ್ದರು. ತೊದಲುತ್ತಿದ್ದರು.
ಅವರನ್ನೆಲ್ಲ ಲೆಕ್ಕಿಸದೇ ಓದಿನಲ್ಲಿ ಮುಂದೆ ಇದ್ದ ಆಕೆ ಅಂತೂ ಇಂತು ಎರಡು ವರ್ಷದ ಬಿಎಸ್ಸಿ ಮುಗಿಸಿದಳು. ಯೌವ್ವನ ಆಸೆ ಆಕೆಗೂ ಚಿಗುರೊಡೆದಿತ್ತು. ಎಷ್ಟು ದಿನ ನನ್ನ ಪಾಡಿಗೆ ನಾನು ಇರಬೇಕು ಎಂಬ ಅವಳ ಚಂಚಲ ಮನ ಬುಟ್ಟಿಯೊಳಗಿನ ಹೆಡೆ ಬಿಚ್ಚಿದ ಸರ್ಪದಂತೆ ಬುಸುಗುಟ್ಟಿತು. ಮನ ಜೇನು ದುಂಬಿಯಂತೆ, ಹೆಣ್ ನವಿಲಿನಂತೆ ಪ್ರೀತಿ, ಪ್ರೇಮ ಪ್ರಣಯಕ್ಕಾಗಿ ಕಾಯುತ್ತಿತ್ತು.
ಕಾಲೇಜಿನಲ್ಲಿ ಅತ್ಯಂತ ಸ್ಪುರದ್ರೂಪಿ ಯುವಕ ಶಶಾಂಕನ ಪ್ರೇಪ ಪಾಷಕ್ಕೆ ಬಲಿಯಾದಳು. ಓದಿನಲ್ಲಿ ಮುಂದಿದ್ದ ಆಕೆಯ ವಿದ್ಯಾರ್ಥಿ ಜೀವನ ಯೂ ಟರ್ನ್ ಹೊಡೆಯಿತು. ಪಾಠ ಕೇಳುವುದು ಬಿಟ್ಟು ಹಣವಂತ ಶಶಾಂಕನ ಪ್ರೇಮ ಪಾಶಕ್ಕೆ ಬಲಿಯಾಗಿ ಪಾರ್ಕು, ಥಿಯೇಟರ್ ಎಂದು ಸುತ್ತಿದರು.
ಒಮ್ಮೆ ಶಶಾಂಕನ ಕಾಮ ಬಯಕೆಯ ಮೋಹದ ಸೂತ್ರಕ್ಕೆ ಸುಚಿತ್ರ ಸಿಲುಕಿದಳು. ಚಂದ್ರಗಿರಿಯ ಬೆಟ್ಟದ ಗೆಸ್ಟ್‍ಹೌಸ್‍ನಲ್ಲಿ ಮೈಮರೆತ ಪ್ರೇಮಿಗಳು ಆ ರಾತ್ರಿ ನಾಗ, ನಾಗಿಣಿಯರಾದರು… ಪ್ರಾಕೃತಿಕ ಕಾಮನೆಗಳ ಬಲಿಗೆ ಶಶಾಂಕ್, ಸುಚಿತ್ರ ಧುಮ್ಮಿಕ್ಕಿ ಮೈಮರೆತರು.
ಕಾಮತೃಷೆಯ ಈಡೇರಿದ ಮೇಲೆ ಒಂದಷ್ಟು ದಿನ ಮೌನವಾಗಿದ್ದ ಇಬ್ಬರಿಗೂ ನಾವೆಲ್ಲೋ ತಪ್ಪು ಮಾಡಿದೆವು ಅಂದು ಕೊಂಡು ಒಬ್ಬರನ್ನೊಬ್ಬರು ಮಾತನಾಡಿಸಲೇ ಇಲ್ಲ. ವಿರಹ ಪ್ರೇಮಿಗಳಂತೆ ನಾನೋಂದು ತೀರ, ನೀನೊಂದು ತೀರವಾದರು.
ಕಾಲೇಜಿನ ಅನೇಕ ವಿದ್ಯಾರ್ಥಿಗಳಿಗೆ ಈ ಇಬ್ಬರ ಪ್ರೇಮ ವಿರಹ ವಿಷಯ ಜಗಜ್ಜಾಹೀರಾಗಿತ್ತು. ಖಿನ್ನತೆಗೆ ಒಳಗಾಗಿದ್ದ ಸುಚಿತ್ರಳಿಗೆ ಇದ್ದಕ್ಕಿದ್ದಂತೆ ಹೊಟ್ಟೆಯಲ್ಲಿ ಅದೇನೋ ತಳ ಮಳ. ಗಾಬರಿ. ಊಟ ಸೇರುತ್ತಿರಲಿಲ್ಲ. ಅನ್ನ ಕಂಡೆ ವಾಂತಿ. ವೈದ್ಯರ ಬಳಿ ಅಪ್ಪ ಅಮ್ಮ ಕರೆದೊಯ್ದು ಪರೀಕ್ಷಿಸಿದಾಗ ವೈದ್ಯರಿಂದ ಬಂದ ಉತ್ತರ ನಿಮ್ಮ ಮಗಳು ಗರ್ಭಿಣಿ!
ತಂದೆ ಚಂದ್ರೋದಯ ಗುಪ್ತ, ತಾಯಿ ಸಾವಿತ್ರಮ್ಮನಿಗೆ ಸಿಡಿಲು ಬಡಿದಂತಾಯಿತು. ಮಗಳು ಎಲ್ಲೆ ಮೇರಿದ ವಿಷಯ ತಿಳಿದು ವಾಚಾಮಾಚ ಬೈದರು, ಹೊಡೆದರು. ಸತ್ತು ಹೋಗು, ನೀನು ಹುಟ್ಟಬಾರದಿತ್ತು ಎಂದರು. ನಿನ್ನ ಹೊಟ್ಟೆಯೊಳಗಿನ ಪಾಪದ ಪಿಂಡವನ್ನು ತೆಗೆಸು ಎಂದರು. ವೈದ್ಯರು ಅಸಾಧ್ಯ. ಕಾನೂನಿನಲ್ಲಿ ಇದಕ್ಕೆಲ್ಲ ಅವಕಾಶವಿಲ್ಲ ಎಂದರು.
ಮತ್ತೇನು ಗತಿ..! ಎಂದು ತಂದೆ ತಾಯಿ ಆಕಾಶ ಮೇಲೆ ಬಿದ್ದವರಂತೆ ಕುಳಿತರು. ಇಲ್ಲ ಇಬ್ಬರಿಗೂ ಮದುವೆ ಮಾಡೋಣ ಎಂದು ನಿಶ್ಚಯಿಸಿದರು. ಶಶಾಂಕನ ತಂದೆ ಚನ್ನಪ್ಪ ಕೋಟ್ಯಾಧಿಪತಿ, ತಾಯಿ ಸೌಮ್ಯಾ ಬಡ್ಡಿ ಬಂಗಾರಮ್ಮ.
ಈ ವಿಷಯ ತಿಳಿಯುತ್ತಿದ್ದಂತೆ ಅವರಿಗೇನೂ ಆಶ್ಚರ್ಯವಾಗಲಿಲ್ಲ. ಅವರಿಬ್ಬರ ಕಾಲಿಗೆ ಬಿದ್ದ ಸುಚಿತ್ರಳ ತಂದೆ ಚಂದ್ರೋದಯ ಗುಪ್ತ ‘ನಮ್ಮ ಮಗಳಿಗೆ ಅನ್ಯಾಯ ಮಾಡಬೇಡಿ’ ಎಂದು ಗೋಗರೆದರು. ಆದರೂ ಕೇಳದೇ ಇದ್ದಾಗ ಪೊಲೀಸ್, ಕಾನೂನು ಮೆಟ್ಟಿಲು ಹತ್ತಿದರು. ಮರ್ಯಾದೆ ಹೋಗುತ್ತೆ ಅನ್ನುವ ಕಾರಣಕ್ಕೆ ಹುಡುಗನ ತಂದೆ-ತಾಯಿ ಒಪ್ಪಿ ಸರಳ ವಿವಾಹ ಮಾಡಿದರು.
ಇತ್ತ ಮೊದಲಿನ ಪ್ರೀತಿ ಪ್ರೇಮ ತೋರದ ಶಶಾಂಕ ಆಕೆಗೆ ಚಿತ್ರಹಿಂಸೆ ನೀಡಲು ಆರಂಭಿಸಿದ. ಅವನಿಗೆ ಇತರೆ ಹುಡುಗಿಯರ ಮೋಹ. ಇದೇ ರೀತಿ ಹತ್ತಾರು ಹೆಣ್ಣಿನ ಸಹವಾಸ ಮಾಡಿದರೂ ಮಗನ ಉದ್ದಟತನಗಳಿಗೆ ಬೀಗ ಹಾಕದ ತಂದೆ ತಾಯಿಗಳಿಗೆ ಮಗನ ಹುಚ್ಚಾಟಕ್ಕೆ ಕುಮ್ಮಕ್ಕು ನೀಡುವಂತಿತ್ತು.
ಇತ್ತ ಖಿನ್ನತೆಗೆ ಒಳಗಾಗಿದ್ದ ಸುಚಿತ್ರಾಳ ಹೊಟ್ಟೆಯಲ್ಲಿ 7 ತಿಂಗಳು. ಪಾಪಿ ಅನಿಷ್ಠ ಹೊತ್ತು ನಮ್ಮ ಮನೆಯ ಮರ್ಯಾದೆ ತೆಗೆದ ನಿನಗೆ ಈ ಮನೆಯಲ್ಲಿ ಜಾಗವಿಲ್ಲ ಎಂದು ಅತ್ತೆ ಮಾವ ನಿಂದಿಸುತ್ತಿದ್ದರು. ಪತಿ ಎನ್ನಿಸಿಕೊಂಡ ಶಶಾಂಕನ ಕಾಟಕ್ಕೆ ಸೊರಗಿದ ಆಕೆಗೆ ಬದುಕು ವಿಚಿತ್ರವೆನ್ನಿಸಿತು. ಆತ್ಮಹತ್ಯೆ ಒಂದೇ ದಾರಿ ಎಂದು ತೀರ್ಮಾನ ಮಾಡಿದಳು. ಆದರೆ ಹೊಟ್ಟೆಯೊಳಗಿನ ಮಗುವಿನ ಗತಿ? ಎಂದು ದುಃಖವನ್ನೆಲ್ಲ ತಡೆದು ಕೊಂಡಳು.
ಇತ್ತ ಗಂಡ ಶಶಾಂಕನ ಗುಂಡು ಪಾರ್ಟಿಗಳು, ಪಬ್‍ಗಳಲ್ಲಿ ಕಾಮ ಪುರಣಾಗಳು ಹೆಚ್ಚಾದವು. ಪ್ರೀತಿಸಿದ್ದ ಸುಚಿತ್ರಳಿಗೆ ತೆರೆ ಎಳೆಯಬೇಕು. ಅವಳಿಂದ ನನಗೆ ನೆಮ್ಮದಿಯಿಲ್ಲವಾಗಿದೆ ಎಂದು ತೀರ್ಮಾನಿಸಿದ. ಮನೆಗೆ ಬಂದು ಬೆಡ್ ರೂಂನಲ್ಲಿ ಮಲಗಿದ ಸುಚಿತ್ರಾಳ ಪ್ರಾಣ ತೆಗೆದ. ಒಂದು ಜೀವಕ್ಕಾಗಿ ಒಡಲೊಳಗಿದ್ದ ತನ್ನ ಮಗುವಿನ ಪ್ರಾಣವೂ ಹೋಯ್ತು.
ಬೆಳಗ್ಗೆ ಇಡೀ ಚಿಕ್ಕಮಗಳೂರು ಜಿಲ್ಲೆಯಲ್ಲೇ ದೊಡ್ಡ ಸುದ್ದಿ ಹರಿದಾಡಿತು. ಪ್ರೀತಿ ಪ್ರೇಮದ ಬಲೆಗೆ ಸಿಕ್ಕು ಕಾಮತೃಷೆಗಾಗಿ ಪ್ರೀತಿಮಾಡಿದ ಪತ್ನಿಯನ್ನೇ ಕೊಂದ. ಅವನಿಗೆ ಪಶ್ಚಾತಾಪವಿರಲಿಲ್ಲ. ಕೊಲೆ ಆರೋಪದಲ್ಲಿ ಶಶಾಂಕನನ್ನು ಪೊಲೀಸರು ಬಂಧಿಸಿದರು. ಕೋರ್ಟ್ ಶಿಕ್ಷೆಯನ್ನು ವಿಧಿಸಿತು. ಆದರೆ ಹಣದ ಮದದಲ್ಲಿ ಮೆರೆಯುತ್ತಿದ್ದ ಅವರ ತಂದೆ ತಾಯಿಗೆ ಮಗನನ್ನು ಜೈಲಿನಿಂದ ಬಂಧ ಮುಕ್ತಗೊಳಿಸಿದ್ದು ಯಾವ ಲೆಕ್ಕ?
ಪ್ರೀತಿಯ ವಿದ್ಯಾರ್ಥಿಗಳಿಗೆ… ಸೌಜನ್ಯದಿಂದ ಒಂದು ಮಾತು. ಇದೊಂದು ಕಾಲ್ಪನೀಕ ಕತೆಯಾದರೂ ಇದರಲ್ಲಿರುವ ಪ್ರೀತಿ, ಕಾಮ, ಪ್ರೇಮಗಳ ಎಲ್ಲೆ ಮೀರಿದರೆ ಆಗುವ ತೊಂದರೆಗಳ ಬಗ್ಗೆ ಗಮನವಿರಲಿ. ಯಾವಗ ಏನು ಮಾಡಿದರೆ ನಮ್ಮ ಜೀವನ ಚನ್ನಾಗಿರುತ್ತೆ ಎಂಬ ಎಚ್ಚರಿಕೆಯೇ ಸುದ್ದಿವಿಜಯ ವೆಬ್ ನ್ಯೂಸ್‍ನ ಕಾಲ್ಪನೀಕತೆಯ ಉದ್ದೇಶವಷ್ಟೇ… ಓದಿ ಮರೆತು ಬಿಡಿ ಅನುಸರಿಸಬೇಡಿ..