ಸುದ್ದಿವಿಜಯ, ಜಗಳೂರು: ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಏನು? ಎಂಬುದನ್ನೇ ಅಸ್ತ್ರವಾಗಿಟ್ಟುಕೊಂಡು ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿಗಳು ಮತಯಾಚನೆ ಮತದಾರರ ಪರಿವರ್ತನೆ ಮಾಡುವಲ್ಲಿ ತಲ್ಲೀನರಾಗಿದ್ದಾರೆ.
ಕಳೆದ 5 ವರ್ಷಗಳಲ್ಲಿ ಆಡಳಿತ ನಡೆಸಿದ ಬಿಜೆಪಿ ಶಾಸಕರು ಮತ್ತು ಆ ಪಕ್ಷದ ಅಭ್ಯರ್ಥಿ 3500 ಕೋಟಿ ರೂ ಅನುದಾನ ಬಳಕೆ ಮಾಡಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದೇವೆ ಎಂದು ಹೇಳುತ್ತಾರೆ.
2018 ರಲ್ಲಿ ಆರಂಭವಾದ 57 ಕೆರೆ ತುಂಬಿಸುವ ಯೋಜನೆ ಕೇವಲ ತುಪ್ಪದಹಳ್ಳಿ ಕೆರೆ ಮಾತ್ರ ಸೀಮಿತವಾಗಿದೆ. ಎಲ್ಲ ಕೆರೆಗಳಿಗೆ ನೀರು ಬಂದಿದ್ದರೆ ಅಂತರ್ಜಲ ಅಭಿವೃದ್ಧಿಯಾಗಿ ಎಲ್ಲ ರೈತರು ಅಡಕೆ ತೋಟಗಳ ಮಾಲೀಕರಾಗುತ್ತಿದ್ದರು.
ಆದರೆ ಒಂದು ಕೆರೆಗೆ ನೀರು ತಂದು ರೈತರ ಮೊಣಕೈಗೆ ಬೆಣ್ಣೆ ಹಚ್ಚಿ ಅಭಿವೃದ್ಧಿ ಮಾಡಿದ್ದೇವೆ ಎಂದು ಬಿಂಬಿಸುವ ಬಿಜೆಪಿ ಅಭ್ಯರ್ಥಿ ಯಾವ ಮಾನದಂಡದ ಆಧಾರದ ಮೇಲೆ ಮತ ಕೇಳುತ್ತಾರೆ ಎಂಬುದು ಕಾಂಗ್ರೆಸ್ ಅಭ್ಯರ್ಥಿ ಮತ್ತು ಪಕ್ಷೇತರ ಅಭ್ಯರ್ಥಿಗಳ ವಾದವಾಗಿದೆ.
ಇನ್ನು ಅಪ್ಪರ್ ಭದ್ರಾ ಯೋಜನೆ ಇತ್ತೀಚೆಗೆ ಕೇಂದ್ರ ಸರಕಾರ 1336 ಕೋಟಿ ಬಿಡುಗಡೆ ಮಾಡಿದ್ದು, ಅದು ಯಾವ ದಿಕ್ಕಿನಿಂದ ಕ್ಷೇತ್ರದ ನೆಲ ಪ್ರವೇಶಿಸುತ್ತದೆ ಎಂಬ ನೀಲ ನಕ್ಷೆಯೂ ಸರಿಯಾಗಿಲ್ಲ.
ಈ ಯೋಜನೆ ಜಗಳೂರು ಕ್ಷೇತ್ರಕ್ಕೆ ಬರಬೇಕಾದರೆ ಕನಿಷ್ಠ ಮೂರು ವರ್ಷಗಳೇ ಬೇಕು. ಅಷ್ಟೊತ್ತಿಗೆ ಕ್ಷೇತ್ರ 10 ವರ್ಷ ಹಿನ್ನಡೆ ಸಾಧಿಸುವುದರಲ್ಲಿ ಅನುಮಾನವೇಯಿಲ್ಲ.
ಇನ್ನು 165 ಹಳ್ಳಿಗಳಿಗೆ ತುಂಗಭದ್ರಾ ನದಿಯಿಂದ ಮನೆ ಮನೆಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಆರಂಭವಾಗಲು ಕನಿಷ್ಠ ಮೂರು ವರ್ಷಗಳಾದರೂ ಬೇಕು. ಈ ಎಲ್ಲಾ ಯೋಜನೆಗಳು ‘ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ’ ಎಂಬ ಗಾದೆಯಂತೆ.
ಅಂತರ್ಜಲದ ನೀರಿನಲ್ಲಿ ಫ್ಲೋರೈಡ್ ಸೇವನೆ, ಜಗಳೂರು ಪಟ್ಟಣದ ಕೊಳಚೆ ನೀರು ಕೆರೆ ಸೇರಿ ಮಳೆತುಂದ ತುಂಬಿದ್ದ ಶುದ್ದ ನೀರು ನೀಚು ವಾಸನೆ ಬರುತ್ತಿದೆ.
ದೂರದೃಷ್ಟಿಯಿಲ್ಲದೇ ಇರುವ ಕಾರಣದಲ್ಲಿ ಇದುವರೆಗೂ ಅಂಡರ್ ಗೌಂಡ್ ಚರಂಡಿ (UGD)ಇಲ್ಲದೇ ಗೃಹ ಬಳಕೆಯ ನೀರು ನದಿಯಂತೆ ರಸ್ತೆಯಲ್ಲಿ ರಾಜಾರೋಷವಾಗಿ ಹರಿಯುತ್ತದೆ.
ಖಾಲಿ ನಿವೇಶನಗಳು ಕಪ್ಪು ಸಮುದ್ರವಾಗಿ ಮಾರ್ಪಟ್ಟಿವೆ. ಸೊಳ್ಳೆಗಳ ಝೇಂಕಾರ ಆರೋಗ್ಯದ ಮೇಲೆ ಪರಿಣಾಮ ಬೀರಿರುತ್ತದೆ.
ಇತ್ತ ಗ್ರಾಮೀಣ ಪ್ರದೇಶಗಳಲ್ಲಿ ನೈರ್ಮಲ್ಯ ಬಗ್ಗೆ ವರ್ಣಿಸಲು ಅಸಾಧ್ಯ. ಕಟ್ಟಿಕೊಂಡ ಚರಂಡಿಗಳನ್ನು ಸ್ವಚ್ಛಗೊಳಿಸಲು ಆಗದಷ್ಟು ಅಶಕ್ತವಾದ ಗ್ರಾಪಗಳ ಅಸೆಡ್ಡೆಯಿಂದ ಇತ್ತೀಚೆಗೆ ಬಸವನಕೋಟೆ ಗ್ರಾಪಂ ಇಬ್ಬರು ಕೂಲಿ ಕಾರ್ಮಿಕರ ಸಾವು ಅಭಿವೃದ್ಧಿ ನಿರ್ಲಕ್ಷ್ಯಕ್ಕೆ ‘ಅಂಗೈ ಹುಣ್ಣಿಗೆ ಕನ್ನಡಿ’ ಹಿಡಿದಿದೆ.
ಉದ್ಯೋಗವಿಲ್ಲದೇ ಗುಳೆ ಗೋಳು ಇನ್ನೂ ನಿಂತಿಲ್ಲ. ಮನೆಗಳಿಲ್ಲದೇ ಗುಡಿಸಲುಗಳ ವಾಸ ಇನ್ನೂ ಜೀವಂತವಾಗಿದೆ.
ವ್ಯವಸ್ಥಿತ ಮಾರುಕಟ್ಟೆಯಿಲ್ಲ. ಭ್ರಷ್ಟಾಚಾರ ಎಲ್ಲ ಇಲಾಖೆಗಳಲ್ಲಿ ತಾಂಡವಾಡುತ್ತಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಫಿಜಿಷಿಯನ್ ಕೊರತೆ, ಡಯಾಲಿಸಿಸ್ ಸರಿಯಾದ ವ್ಯವಸ್ಥೆ ಇಲ್ಲದೇ ದಾವಣಗೆರೆ, ಮಣಿಪಾಲ, ಬೆಂಗಳೂರು ಆಸ್ಪತ್ರೆ ನೆಚ್ಚಿಕೊಂಡಿರುವ ರೋಗಿಗಳಿಗೆ ಸಾವು ಬೇಡುವ ಪರಿಸ್ಥಿತಿ.
ಸಮಸ್ಯೆಗಳು ಸಾವಿರ ಇದ್ದರೂ ಅಭಿವೃದ್ಧಿ ಮಾನದಂಡದ ಅಡಿ ವೋಟು ಕೇಳುವ ನೈತಿಕ ಹಕ್ಕು ಕಳೆದುಕೊಂಡಿರುವ ಆಡಳಿತ ಪಕ್ಷಕ್ಕೆ ಜಾತಿ, ಧರ್ಮದ ಭೇದವಿಲ್ಲದೆ ಮತ ತಿರಸ್ಕಾರಕ್ಕೆ ಈ ಚುನಾವಣೆಗೆ ಸಜ್ಜಾಗಿದ್ದೇವೆ ಎನ್ನುತ್ತಾರೆ ಅನೇಕ ಮತದಾರರು.
ಈ ಎಲ್ಲ ವೈಫಲ್ಯಗಳನ್ನು ಮತದಾರರ ಮುಂದಿಟ್ಟು ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುತ್ತಲೇ ಮತ ಭಿಕ್ಷೆ ಕೇಳುತ್ತಿದ್ದಾರೆ ಕಾಂಗ್ರೆಸ್ ಅಭ್ಯರ್ಥಿ.
ಇನ್ನು ಸ್ವಾಭಿಮಾನದ ದೀಪ ಹಿಡಿದು, ಶಾಸಕರಾಗಿದ್ದಾಗ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಜನರ ಮನದಲ್ಲಿ ಬಿತ್ತುತ್ತಾ, ಆಡಳಿತ ಪಕ್ಷದ ವೈಪಲ್ಯ ಮತ್ತು ಅಭಿವೃದ್ಧಿ ದೂರ ದೃಷ್ಟಿ ಹಾಗೂ ತಮಗಾದ ಅನ್ಯಾಯದ ಬಗ್ಗೆ ಮತದಾರರಿಗೆ ತಿಳಿಸುತ್ತ ಮತ ಪ್ರಚಾರದಲ್ಲಿ ಕ್ಷೇತರ ಅಭ್ಯರ್ಥಿ ತಲ್ಲೀನರಾಗಿದ್ದಾರೆ.
ಜಾಣ ಮತದಾರ ಯಾರ ಕೈ ಹಿಡಿಯುತ್ತಾನೋ ಕಾದು ನೋಡಬೇಕು. ಮತದಾರರಿಗೆ ಸುದ್ದಿವಿಜಯ ನ್ಯೂಸ್ ನಿಂದ ಒಂದು ಮನವಿ. ಹಣ ಪಡೆದು ಮತ ಮಾರಿಕೊಂದು ಮತ ಹಾಕಿದರೆ ನಮ್ಮ ಕ್ಷೇತ್ರ ಅಭಿವೃದ್ಧಿಯಲ್ಲಿ ಮತ್ತೆ ಹತ್ತು ವರ್ಷಗಳಷ್ಟು ಹಿಂದಕ್ಕೆ ಹೋಗುತ್ತದೆ ಎಂಬ ಅರಿವಿರಲಿ. ಮತ ಮಾರಿಕೊಳ್ಳದೇ ಯೋಗ್ಯ ವ್ಯಕ್ತಿಗೆ ಮತದಾನ ಮಾಡಿ.