ಸಂದೇಶ್ ಯಾರು ನಮಗೆ ಗೊತ್ತಿಲ್ಲ ಬಹಿರಂಗ ಚರ್ಚೆಗೆ ಬರಲಿ ಎಂದು ಆಹ್ವಾನ ನೀಡಿದ ದಲಿತ ಮುಖಂಡರು

Suddivijaya
Suddivijaya October 9, 2023
Updated 2023/10/09 at 2:40 PM

ಸುದ್ದಿವಿಜಯ, ಜಗಳೂರು: ಸರಕಾರ ಅತ್ಯಂತ ಹಿಂದುಳಿದ ತಾಲೂಕನ್ನು ಗುರುತಿಸಿ ಅದರಲ್ಲೂ ಅತ್ಯಂತ ಹಿಂದುಳಿದ ದಲಿತರೇ ಹೆಚ್ಚಿರುವ ತೊರೆಸಿದ್ದಿಹಳ್ಳಿ ಗ್ರಾಮದಲ್ಲಿ 2ಕೋಟಿ ರೂ ವೆಚ್ಚದಲ್ಲಿ ಚರ್ಮೋದ್ಯಮ ಭವನಕ್ಕೆ ಅವಕಾಶ ನೀಡಿದ್ದು ಕೆಲವರು ಮಾಡುತ್ತಿರುವ ಗೊಂದಲಗಳಿಂದ ಕಟ್ಟಡ ನಿರ್ಮಾಣ ವಿಳಂಬವಾಗುತ್ತಿದೆ ಎಂದು ಜಿಲ್ಲಾ ಮಾದಿಗ ದಂಡೋರಾ ಜಿಲ್ಲಾಧ್ಯಕ್ಷ ಗೌರಿಪುರ ಕುಬೇರಪ್ಪ ನೋವು ತೋಡಿಕೊಂಡರು.

ಪಟ್ಟಣದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಮ್ಮವರೇ ನಮಗೆ ಸಮಸ್ಯೆ ಮಾಡುತ್ತಿದ್ದಾರೆ.

ತೊರೆಸಿದ್ದಿಹಳ್ಳಿ ಗ್ರಾಮಕ್ಕೆ 2021-22 ಸಾಲಿನಲ್ಲಿ ಅಂದು ಮಾಯಕೊಂಡ ಶಾಸಕರಾಗಿದ್ದ ಪ್ರೊ.ಲಿಂಗಪ್ಪ, ಎಸ್.ವಿ.ರಾಮಚಂದ್ರ, ಸಂಸದ ಜಿ.ಎಂ.ಸಿದ್ದೇಶ್ವರ, ಕೇಂದ್ರ ಸಚಿವರಾದ ನಾರಾಯಣಸ್ವಾಮಿ, ನಿಗಮದ ಎಂಡಿ ನಟರಾಜು ಸಹಕಾರದಿಂದ ಬಾಬು ಜಗಜೀವನ್ ಅಭಿವೃದ್ಧಿ ನಿಗಮದ ವತಿಯಿಂದ ಭವನ, ಶಕ್ತಿ ಸೌಧ ನಿರ್ಮಾಣ ಕ್ಕೆ ಅಂದಾಜು 2 ಕೋಟಿ ರೂ. ಅನುಧಾನ ನೀಡಿದ್ದು, ನಮ್ಮ ಜನಾಂಗದ ಕೆಲವರು ಬೇಕು, ಕೆಲವರು ಬೇಡ ಅನ್ನುತ್ತಿದ್ದರು.

ಗ್ರಾಮದಲ್ಲಿ ಎರಡು ಬಾರಿ ಶಾಂತಿ ಸಭೆ ನಡೆಸಲಾಗಿದೆ. ಚುನಾವಣೆ ಹಿನ್ನಲೆಯಲ್ಲಿ ತಟಸ್ಥವಾಗಿದ್ದ ವಿಚಾರ ಈಗ ಮುನ್ನಲೆಗೆ ಬಂದಿದೆ.

ಅನುಧಾನದ ಈ ವಿಷಯಕ್ಕೆ ಸಂಬಂಧಿಸಿದಂತೆ ಸಂದೇಶ್ ಎಂಬುವವರು ಅಂಬೇಡ್ಕರ್ ಸೇನಾ ಸಮಿತಿ ಅನ್ನುವ ಹೆಸರಿನಲ್ಲಿ ಗ್ರಾಮದಲ್ಲಿನ ನಮ್ಮ ದಲಿತ ಹಿರಿಯ ಮುಖಂಡರುಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಶ್ಲೀಲವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡಿದ್ದಾರೆ. ಗೊಂದಲಗಳಿದ್ದರೆ ನಮ್ಮ ಮುಂದೆ ಬಂದು ಹೇಳಲಿ.

ಅದು ಬಿಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಸಮಸ್ಯೆ ಬಗ್ಗೆ ಮಾತನಾಡಿದರೆ ಹೇಗೆ?

ಅವರು ಸಿದ್ದಿಹಳ್ಳಿ ಗ್ರಾಮದಿಂದ ದಲಿತರ ಉದ್ದಾರಕ್ಕೆ ಹತ್ತು ಸಾವಿರ ಜನ ಸೇರಿಸಿ ಪಾದಯಾತ್ರೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಸಂದೇಶ್ ಎನ್ನುವ ವ್ಯಕ್ತಿ ಯಾರು ಎಂಬುದು ಗೊತ್ತಿಲ್ಲ.

ಅವರಿಗೆ ಗೊಂದಲಗಳಿದ್ದರೆ ನಮ್ಮ ಸಮುದಾಯದ ಮುಖಂಡರ ಜೊತೆ ಚರ್ಚಿಸಲಿ ಎಂದರು.

ಹಿರಿಯ ದಲಿತ ಮುಖಂಡ ಜಿ.ಹೆಚ್.ಶಂಭುಲಿಂಗಪ್ಪ ಮಾತನಾಡಿ, ನಮ್ಮ ತಾಲ್ಲೂಕಿನ ಮಾದಿಗ ಸಮಾಜದವರು ಇತರೇ ಎಲ್ಲಾ ಜನಾಂಗದವರೊಂದಿಗೆ ಅಣ್ಣ ತಮ್ಮಂದಿರಂತೆ ಇದ್ದೇವೆ.

ಇಂತಹ ಸಂದರ್ಭದಲ್ಲಿ ಸಂದೇಶ್ ಎಂಬುವವರು ತೊರೆ ಸಿದ್ದಿಹಳ್ಳಿ ಗ್ರಾಮದಲ್ಲಿ ಇತರೇ ಜನಾಂಗದ ಮೇಲೆ ವೃತಾ ಆರೋಪ ಮಾಡುವುದಲ್ಲದೇ ನಮ್ಮ ಮಾದಿಗ ಸಮಾಜದ ಹಿರಿಯರು ಬೇರೆ ಜನಾಂಗದವರಿಗೆ ಹುಟ್ಟಿದ್ದಾರೆ ಎಂಬ ಅಪಪ್ರಚಾರ ಮಾಡುತ್ತಾ ದ್ವೇಷ ಭಾವನೆಯನ್ನು ವ್ಯಾಟ್ಸಪ್ ಗ್ರೂಪ್‍ನಲ್ಲಿ ಹರಿ ಬಿಟ್ಟಿರುವುದು ಒಳ್ಳೆಯ ಲಕ್ಷಣವಲ್ಲ.

ಅಂತಹ ವ್ಯಕ್ತಿ ಜಗಳೂರು ಪಟ್ಟಣದ ಅಂಬೇಡ್ಕರ್ ಸರ್ಕಲ್‍ಗೆ ಬಂದು ನಮ್ಮ ಸಮಾಜದೊಂದಿಗೆ ಬಹಿರಂಗವಾಗಿ ಚರ್ಚಿಸಬಹುದಿತ್ತು.

ಈಗಲೂ ಸಂದೇಶ್ ಅವರಿಗೆ ಆಹ್ವಾನ ನೀಡುತ್ತಿದ್ದೇವೆ. ಜಾತಿ ಜಾತಿ ಮಧ್ಯೆ ಘರ್ಷಣೆಗೆ ಅವಕಾಶ ನೀಡಿದರೆ ಅದರ ಪರಿಣಾಮ ಅವರೇ ಅನುಭವಿಸುತ್ತಾರೆ ಎಂದು ಎಚ್ಚರಿಸಿದರು.

ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ಮಲೇಮಾಚಿಕೆರೆ ಸತೀಶ್, ದಲಿತ ಮುಖಂಡ ಹಟ್ಟಿತಿಪ್ಪೇಸ್ವಾಮಿ ಸೇರಿದಂತೆ ಅನೇಕರು ಇದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!