suddivijayanews27/07/2024
ಸುದ್ದಿವಿಜಯ, ಜಗಳೂರು: ರೈತರು ಬೆಳೆ ಇಲ್ಲದೆ ಅನುಭವಿಸಿದ ನಷ್ಟಕ್ಕೆ ವಿಮೆ ಕಂಪನಿ ಬೆಳೆ ವಿಮೆ ಬಿಡುಗಡೆ ಮಾಡಿರುವುದು ಸ್ವಲ್ಪ ನಿಟ್ಟುಸಿರುವ ಬಿಡುವಂತೆ ಮಾಡಿದೆ. ಸರಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ರೈತರಿಗೆ ಸಿಗುವಂತೆ ಮಾಡಬೇಕು ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.
ಬೆಳೆ ವಿಮೆ ಬಿಡುಗಡೆಯಾದ ಹಿನ್ನೆಲೆ ಶನಿವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಭೆಯಲ್ಲಿ ಅವರಿಗೆ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ರಾಜ್ಯ ಸರಕಾರ ಜಗಳೂರನ್ನು ಬರಪೀಡಿತ ಪಟ್ಟಿಗೆ ಸೇರಿಸಿದ ಮೇಲೆಕೇಂದ್ರದಿಂದ ಬಂದ ಬರ ಅಧ್ಯಾಯನ ತಂಡಕ್ಕೆ ಇಲ್ಲಿನ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲಾಗಿತ್ತು. ಅದರ ಫಲವಾಗಿ ರೈತರಿಗೆ ಬೆಳೆ ಪರಿಹಾರ ಶೇ.80 ಬೆಳೆ ಪರಿಹಾರ ಸಿಕ್ಕಿದೆ ಎಂದರು.
ಕುಡಿಯುವ ನೀರಿಗಾಗಿ ಪಟ್ಟಣ ಪಂಚಾಯಿತಿಗೆ ಬೆಂಕಿ ಹಚ್ಚಲಾಗಿತ್ತು. ಆದರೆ ಇದೀಗ ಸಿರಿಗೆರೆಯ ಡಾ. ಶಿವಮೂರ್ತಿ ಶ್ರೀಗಳ ಆಶೀರ್ವಾದಿಂದ 57 ಕೆರೆಗಳಿಗೆ ನೀರು ಬರುತ್ತಿದ್ದು, ರೈತರ ಮುಖದಲ್ಲಿ ಸಂತಸ ತಂದಿದೆ. ಈಗಾಗಲೇ ಎಲ್ಲ ಕೆರೆಗಳಿಗೂ ನೀರು ಹರಿಯುತ್ತಿದೆ.
ಇನ್ನು ಒಂದೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಆದ್ದರಿಂದ ಶೀಘ್ರವೇ ಶ್ರೀಗಳಿಂದ ಕೆರೆಗಳಿಗೆ ಪ್ರವಾಸಿ ಹಮ್ಮಿಕೊಳ್ಳಲಿದ್ದಾರೆ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಹೇಳಿದರು.
ಕೇಂದ್ರ ಸರಕಾರ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟಯ ಯೋಜನೆಯನ್ನಾಗಿ ಘೋಷಣೆ ಮಾಡಿ 5400ಕೋಟಿ ಹಣ ಮೀಸಲಿಡಲಾಗುವುದು ಎಂದು ಭರವಸೆ ನೀಡಿ ದೊಡ್ಡದಾಗಿ ಪ್ರಚಾರ ಪಡೆದಿತ್ತು.
ಅಂದು ರಾಜ್ಯ ಬಿಜೆಪಿ ಸರಕಾರ ಎಲ್ಲ ತಾಲೂಕು ಕೇಂದ್ರಗಳಲ್ಲಿ ಶಾಸಕರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಆದರೆ ಕೇಂದ್ರ ಸಕರಾರದ ಬಜೆಟ್‌ನಲ್ಲಿ ಭದ್ರಾ ಯೋಜನೆಯನ್ನು ಕೈ ಬಿಟ್ಟು ನುಣಿಚಿಕೊಂಡಿದೆ.
ಇದರಿಂದ ಕರ್ನಾಟಕಕ್ಕೆ ತುಂಬ ಅನ್ಯಾಯವಾಗಿದೆ. ಅದರಲ್ಲೂ ಜಗಳೂರು ತಾಲೂಕಿಗೆ ಮೋಸ ಮಾಡಿದೆ ಕೇಂದ್ರದ ವಿರುದ್ದ ಹರಿಹಾಯ್ದರು.ಜಗಳೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಬೆಳೆ ವಿಮೆ ಬಿಡುಗಡೆಯಾಗದ ಹಿನ್ನೆಲೆ ಹಮ್ಮಿಕೊಂಡಿದ್ದ ಅಭಿನಂದನಾ ಸಭೆಯಲ್ಲಿ ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಅವರಿಗೆ ರೈತರು ಸನ್ಮಾನಿಸಿದರು.
ಕೃಷಿ ಜಂಟಿ ನಿರ್ದೇಶಕ ಶ್ರಿನಿವಾಸ್ ಚಿಂತಾಲ್ ಮಾತನಾಡಿ, ಜಗಳೂರು ತಾಲೂಕಿನಲ್ಲಿ 16065 ರೈತರು ಸುಮಾರು 1.81 ಕೋಟಿ ಬೆಳೆ ವಿಮೆಗೆ ಪ್ರಿಮಿಯಂ ಕಟ್ಟಿದ್ದರು, ರಾಜ್ಯ ಸರಕಾರ 3.58 ಕೋಟಿ, ಕೇಂದ್ರ ಸರ್ಕಾರ 3.58 ಕೋ ಸೇರಿದಂತೆ ಒಟ್ಟು ವಿಮಾ ಕಂತು 8.97 ಕೋಟಿ ಕಟ್ಟಲಾಗಿತ್ತು.
ಇದರಲ್ಲಿ 15789 ಮಂದಿ ರೈತರಿಗೆ 70.48 ಕೋಟಿ ರೂ ಬೆಳೆ ವಿಮೆ ಈವರೆಗೂ ಪಾವತಿಯಾಗಿದೆ. ಇನ್ನು ಕೆಲವೇ ರೈತರಿಗೆ ದಾಖಲಾತಿ, ತಾಂತ್ರಿಕ ತೊಂದರೆಯಿAದ ಪಾವತಿಯಾಗಿಲ್ಲ ಎಂದು ಮಾಹಿತಿ ನೀಡಿದರು.
ಜಿ.ಪಂ ಮಾಜಿ ಸದಸ್ಯ ಕೆ.ಪಿ ಪಾಲಯ್ಯ ಮಾತನಾಡಿ, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ನರೇಗಾ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಅದರಿಂದ ಲಕ್ಷಾಂತರ ಕುಟುಂಬಗಳ ಜೀವನಕ್ಕೆ ದಾರಿಯಾಗಿತ್ತು.
ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹಂತ ಹಂತವಾಗಿ ಅದನ್ನು ಮೊಟಕುಗೊಳಿಸಿ ವಿವಿಧ ಕಾನೂನು ಕಟ್ಟಳೆಗಳನ್ನು ಜಾರಿಗೆ ತಂದು ಕೆಲಸ ಮಾಡದಂತೆ ನಿರ್ಬಂಧಗಳನ್ನು ಹಾಕಿದ್ದಾರೆ.
ಅಲ್ಲದೇ ಜಗಳೂರು ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳು ನರೇಗಾದಿಂದ ಆಗಿದೆ. ಇಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಸಣ್ಣಪುಟ್ಟ ತಪ್ಪುಗಳಿದ್ದರ ಸರಿಪಡಿಸಿ ನರೇಗಾ ಕೆಲಸಕ್ಕೆ ಒತ್ತು ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಕೃಷಿ ಸಹಾಯಕ ನಿರ್ದೇಶಕಿ ಶ್ವೇತಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್, ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಬಿ.ಮಹೇಶ್ವರಪ್ಪ, ಕುರುಬ ಸಮಾಜದ ಅಧ್ಯಕ್ಷ ಹೋಮಣ್ಣ,
ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಶೇಖರಪ್ಪ ಪಲ್ಲಾಗಟ್ಟೆ, ಮಾಳಮ್ಮನಹಟ್ಟಿ ವೆಂಟಕೇಶ್, ಸಿ,ಎಂ ಹೊಳೆ ಮಾರುತಿ ಸೇರಿದಂತೆ ಮತ್ತಿತರರಿದ್ದರು.