suddivijayanews27/08/2024
ಸುದ್ದಿವಿಜಯ, ಜಗಳೂರು: ರೈತರು ಈ ದೇಶದ ಬೆನ್ನೆಲುಬು. ರೈತರ ಬಾಳು ಅಸನಾಗಲು ಪ್ರಕೃತಿಯ ಕೊಡುಗೆ ಅನನ್ಯವಾಗಿದೆ ಎಂದು ಶ್ರೀ ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ತಾಲೂಕಿನ ಗಡಿಮಾಕುಂಟೆ ಗ್ರಾಮದ ಕೆರೆಗೆ ನೀರು ಬಂದ ಹಿನ್ನೆಲೆ ಮಂಗಳವಾರ ಗ್ರಾಮಸ್ಥರು ಹಮ್ಮಿಕೊಂಡಿದ್ದ ಗಂಗಾಪೂಜೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯವಹಿಸಿ ಮಾತನಾಡಿದರು.
ಜಗತ್ತಿನಲ್ಲಿ ಮೊದಲು ಸೃಷ್ಟಿಯಾದ ಧಾತು ನೀರಾಗಿದ್ದು, ನೀರಿನಿಂದ ಪೃಥ್ವಿ, ಪೃಥ್ವಿಯಿಂದ ಅನ್ನ, ಅನ್ನದಿಂದ ಜೀವವಾಗಿದೆ. ಪ್ರಸ್ತುತದಲ್ಲಿ ಜಗತ್ತಿನ ಅನೇಕ ದೇಶಗಳು ನೀರಿಲ್ಲದೇ ಯಾತನೆಯನ್ನು ಅನುಭವಿಸುತ್ತಿವೆ.
ಭಾರತದಲ್ಲಿ ಹೆಚ್ಚು ಜಲ ಮೂಲ ಹಾಗೂ ಪ್ರಾಕೃತಿಕ ಸಂಪತ್ತನ್ನು ಹೊಂದಿದ್ದೇವೆ. ನೀರು ಶೇಖರಣೆ ಮಾಡಿ ಎಲ್ಲ ಋತುಮಾನಗಳಲ್ಲಿ ನೀರನ್ನು ಒದಗಿಸುವುದೇ ಕೆರೆಗಳು ಹಾಗಾಗು ಅವುಗಳ ಉಳಿವಿಗಾಗಿ ನಿಂತುಕೊಳ್ಳಬೇಕು ಎಂದು ಸಲಹೆ ನೀಡಿದರು.ಜಗಳೂರು ತಾಲೂಕಿನ ಗಡಿಮಾಕುಂಟೆ ಗ್ರಾಮದ ಕೆರೆಗೆ ನೀರು ಬಂದ ಹಿನ್ನೆಲೆ ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ಶಿವಾಚಾರ್ಯ ಭಗವತ್ಪಾದರು, ಶಾಸಕ ಬಿ.ದೇವೇಂದ್ರಪ್ಪ ಗಂಗಾಪೂಜೆ ನೆರವೇರಿಸಿದರು.
ಶಾಸಕ ದೇವೇಂದ್ರಪ್ಪ ಅವರ ಅಭಿವೃದ್ದಿಯ ಚಿಂತನೆ ಮತ್ತು ಶ್ರೀಗಳ ಇಚ್ಚಾಶಕ್ತಿಯ ಫಲವಾದ ನೀರಾವರಿ ಯೋಜನೆಗಳು ಇಂದು ಕಾರ್ಯಗತಗೊಂಡಿದೆ.
ದೂರದೃಷ್ಟಿಯ ಅಭಿವೃದ್ದಿ ಚಿಂತನೆ ಹೊಂದಿದ ಇಮಾಂ ಸಾಹೇಬರ ಕಟ್ಟಿಸಿದ ಗಡಿಮಾಕುಂಟೆ ಕೆರೆ ಐತಿಹಾಸಿಕ ಹಿನ್ನೆಲೆ ಹೊಂದಿದೆ. ನಾವೆಲ್ಲರು ಜಾತ್ಯತೀತ, ಧರ್ಮತೀತವಾಗಿ ಬಾಳಬೇಕಾಗಿದೆ ಎಂದರು.
ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಮಾತನಾಡಿ, 57 ಕೆರೆಗಳ ನೀರಾವರಿ ಯೋಜನೆಗೆ ಸಿ.ಎಂ ಸಿದ್ದರಾಮಯ್ಯ, ಮಾಜಿ ಶಾಸಕರಾದ ಎಚ್.ಪಿ ರಾಜೇಶ್ ಅವರ ಶ್ರಮ ಅಪಾರವಾಗಿದೆ.
ಪ್ರತಿ ತರಳಬಾಳು ಹುಣ್ಣಿಮೆಯ ಕಡೇ ದಿನ ಆಯಾ ಪ್ರದೇಶಕ್ಕೆ ಅಭಿವೃದ್ಧಿಯ ಗುರುತು ಬಿಟ್ಟು ಹೋಗುವುದು ಸಂಪ್ರದಾಯ. ಸಿರಿಗೆರೆ ಶ್ರೀಗಳ ದೂರದೃಷ್ಟಿಯಿಂದ ಈ ಕೆರೆ ಅನೇಕ ವರ್ಷಗಳ ನಂತರ ಭರ್ತಿಯಾಗುತ್ತಿರುವುದುಕ್ಕೆ 57 ಕೆರೆ ತುಂಬಿಸುವ ಯೋಜನೆ ಯಶಸ್ವಿಯೇ ಕಾರಣ ಎಂದು ಕೊಂಡಾಡಿದರು.ಇಮಾಂ ಸಾಹೇಬರ ಕನಸ್ಸಿನ ಕೂಸಾದ ಗಡಿಮಾಕುಂಟೆ ಕೆರೆ ಯನ್ನು ನಾವೆಲ್ಲರು ಸಂರಕ್ಷಣೆ ಮಾಡಬೇಕಾಗಿದೆ ಎಂದರು.
ಮಾಜಿ ಶಾಸಕ ಎಚ್.ಪಿ ರಾಜೇಶ್ ಮಾತನಾಡಿ, ಕ್ಷೇತ್ರ ಬರಪೀಡಿತ ಹಿಂದುಳಿದ ಪ್ರದೇಶವಾಗಿದ್ದು, ಶಾಸಕನಾಗಿದ್ದವೇಳೆ ಮಾಜಿ ಸಚಿವ ಆಂಜನೇಯ ಅವರ ಜತೆಗೂಡಿ ಸಿರಿಗೆರೆ ಶ್ರೀಗಳ ಮಾರ್ಗದರ್ಶನದಂತೆ ಡಿಪಿಆರ್ ಮಾಡಿಸಲಾಗಿತ್ತು.
ನೀರಾವರಿ ಹೋರಾಟ ಸಮಿತಿಗಳು ಅಂದಿನ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂಗಳಾದ ಯಡಿಯೂರಪ್ಪ, ಎಚ್.ಡಿ ಕುಮಾರಸ್ವಾಮಿ ಇಚ್ಚಾಶಕ್ತಿಯಿಂದ ಇಂದು ಜಗಳೂರು ಕೆರೆಗಳಿಗೆ ತುಂಗಾಭದ್ರ ನೀರು ಹರಿದುಬಂದಿದೆ.
1050 ಕೋಟಿಯ ಈ ಯೋಜನೆ ಸಕಾರಣಗೊಳ್ಳಲು ಸಿರಿಗೆರೆ ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಒತ್ತಾಯದಿಂದ ಯಶಸ್ಸು ಕಂಡಿದೆ. ತಾಲೂಕಿನ ಮೂರನೇ ದೊಡ್ಡ ಕೆರೆಯಾದ ಗಡಿಮಾಕುಂಟೆ ಕೆರೆಯೂ ಜಗಳೂರು ತಾಲೂಕಿನ ರೈತರ ಜೀವನಾಡಿಯಾಗಿದೆ ಎಂದರು.
ಮಾಜಿ ಜಿ.ಪಂ ಸದಸ್ಯ ಕೆ.ಪಿ ಪಾಲಯ್ಯ ಮಾತನಾಡಿದರು. ಈ ಸಂದರ್ಭದಲ್ಲಿ ತಾ.ಪಂ ಮಾಜಿ ಅಧ್ಯಕ್ಷ ಯು.ಜಿ ಶಿವಕುಮಾರ್, ತಾ.ಪಂ ಮಾಜಿ ಸದಸ್ಯ ಸಿದ್ದೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್, ಹೊಸಕೆರೆ ಗ್ರಾ.ಪಂ ಅಧ್ಯಕ್ಷೆ ರೂಪ ಗುರುಮೂರ್ತಿ,
ಜೆಡಿಎಸ್ ರಾಜ್ಯ ಕಾರ್ಯದರ್ಶಿ ಕಲ್ಲೇರುದ್ರೇಶ್, ನಿವೃತ್ತ ಅಧಿಕಾರಿ ಬಿ. ಮಹೇಶ್ವರಪ್ಪ, ಪ.ಪಂ ಮಾಜಿ ಅಧ್ಯಕ್ಷ ಮಂಜುನಾಥ್ ಮುಖಂಡರಾದ ಬಿಸ್ತುವಳ್ಳಿ ಬಾಬು, ಪ್ರಕಾಶ್‍ರೆಡ್ಡಿ, ಹಟ್ಟಿ ತಿಪ್ಪೇಸ್ವಾಮಿ, ಪ.ಪಂ ಮಾಜಿ ಅಧ್ಯಕ್ಷ ಮಂಜುನಾಥ್, ಎಸ್.ಕೆ ರಾಮರೆಡ್ಡಿ, ಗ್ರಾ.ಪಂ ಸದಸ್ಯ ಕುಮಾರ್, ಗುರುಮೂರ್ತಿ ಸೇರಿದಂತೆ ಮತ್ತಿತರರಿದ್ದರು.