ದೇವರ, ಜನರ ಅಪೇಕ್ಷೆಯಂತೆ ಡಿಕೆಶಿಗೆ ಸಿಎಂ ಭಾಗ್ಯ: ನೊಣವಿನಕೆರೆ ಶ್ರೀ ಭವಿಷ್ಯ

Suddivijaya
Suddivijaya July 21, 2024
Updated 2024/07/21 at 11:26 AM

suddivijayanews21/07/2024
ಸುದ್ದಿವಿಜಯ, ಜಗಳೂರು: ಉಪ ಮುಖ್ಯಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಾರೋ ಇಲ್ಲವೋ ಎಂದು ನಾವು ಹೇಳಲು ಸಾಧ್ಯವಿಲ್ಲ.  ‘ನಂಬು ನಂಬದಿರು ಮನವೆ ಹಂಬಲಿಸದಿರು’ ಎಂಬಂತೆ ಗುರುವನ್ನು ಡಿ.ಕೆ.ಶಿವಕುಮಾರ್ ಅವರು ನಂಬಿದ್ದಾರೆ.

ಅವರಿಗೆ ದೇವರ, ಜನರ ಆಶೀರ್ವಾದ ಸದಾ ಇರುತ್ತದೆ ಎಂದು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆಯ ಡಾ.ಕರಿವೃಷಭ ದೇಶೀಕೇಂದ್ರ ಶಿವಯೋಗೇಶ್ವರ ಮಹಾಸ್ವಾಮೀಜಿ ಆಶೀರ್ವದಿಸಿದರು.

ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಪ್ರೊ.ತಿಪ್ಪೇಸ್ವಾಮಿ ನಿರ್ಮಾಣ ಮಾಡಿರುವ ಸಿರಡಿ ಶ್ರೀ ಸತ್ಯ ಸಾಯಿಬಾಬಾ ದೇವಸ್ಥಾನದಲ್ಲಿ ಭಾನುವಾರ ಗುರುಪೂರ್ಣಿಮೆ ಹಿನ್ನೆಲೆ ದೇವಸ್ಥಾನದಲ್ಲಿ ಗಣಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಆಶೀರ್ವಚನ ನೀಡಿದರು.ಡಿ.ಕೆ.ಶಿವಕುಮಾರ್ ಅವರು ಇತ್ತೀಚೆಗೆ ನಮ್ಮ ಮಠಕ್ಕೆ ಬಂದಿದ್ದರು. ಗುರು ಕರುಣೆ ಅವರ ಮೇಲಿದೆ. ಈಗ ಶ್ರೀ ಸತ್ಯಸಾಯಿಬಾಬಾ ದೇವಸ್ಥಾನದಲ್ಲಿದ್ದೇವೆ. ಜನರೂ ಸಹ ಅಪೇಕ್ಷೆ ಪಟ್ಟಿದ್ದಾರೆ. ದೇವರು ಅವರು ಕೇಳಿದ್ದನ್ನು ಕರುಣಿಸಲಿ ಎಂದು ಆಶೀರ್ವಾದಿಸಿದರು.

ಸತ್ಯ ಸಾಯಿ ಬಾಬಾ ದೇವಸ್ಥಾನ ನಿರ್ಮಾಣವಾದ ಮೇಲೆ ಈ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಮುಂದಿನ ವರ್ಷ ಶ್ರೀ ಸತ್ಯ ಸಾಯಿಬಾಬಾ ಹೆಸರಿನಲ್ಲಿ ಕಲ್ಯಾಣ ಬಂದಿರವಾಗಲಿ.

ಬಡವರು ಕಲ್ಯಾಣ ಕಾರ್ಯ ಮಾಡಲು ಅನುಕೂಲವಾಗಲಿ. ಎಲ್ಲರೂ ಸಂಕಲ್ಪ ಮಾಡಿ. ಪ್ರೊ.ತಿಪ್ಪೇಸ್ವಾಮಿ ಅವರು ಸಾಮಾಜಿಕ ದೃಷ್ಟಿಯಿಂದ ಮಂಗಲ ಭವನ ಮಾಡಲು ಸಂಕಲ್ಪ ಮಾಡಿದ್ದಾರೆ.

ಎಲ್ಲರೂ ಅವರ ಕೈ ಬಲಪಡಿಸಿ. ಸತ್ಯಾ ಸಾಯಿಬಾಬಾ ಹೆಸರಿನಲ್ಲಿ ಒಂದು ವಿದ್ಯಾ ಸಂಸ್ಥೆ ಮಾಡಿ. ಅನ್ನದಾಸೋಹ, ವಿದ್ಯಾದಾಸೋಹ ಮಾಡುವ ಮೂಲಕ ಬಡವರ ಏಳ್ಗೆಗೆ ಇನ್ನೂ ಹೆಚ್ಚಿನ ಶಕ್ತಿ ಕೊಡಲಿ ಎಂದು ಆಶೀರ್ವಾದ ಮಾಡಿದರು.

ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಆರಾಧ್ಯ ಗುರುಗಳಾಗಿರುವ ನೊಣವಿನಕೆರೆ ಅಜ್ಜಯ್ಯ ಎಂದೇ ಹೆಸರಾಗಿರುವ ಡಾ.ಕರಿವೃಷಭ ದೇಶೀಕೇಂದ್ರ ಶಿವಯೋಗೇಶ್ವರ ಮಹಾಸ್ವಾಮೀಜಿ ಆರಾಧ್ಯ ದೈವರಾಗಿದ್ದಾರೆ.

ಹರ ಮುನಿದರೂ ಗುರುಕಾಯುತ್ತಾನೆ ಎಂಬಂತೆ ಕತ್ತಲೆಯಿಂದ ಬೆಳಕಿನ ಕಡೆಗೆ ಕರೆದೊಯ್ಯುವುದು ಗುರುವಿನ ಅನುಗ್ರಹವಾಗಿದೆ. ಸಿರಿಗೆರೆಯ ಡಾ.ಶ್ರೀಶಿವಮೂರ್ತಿ ಶಿವಾಚಾರ್ಯ ಜಗದ್ಗುರುಗಳ ಆಶೀರ್ವಾದಿಂದ 57 ಕೆರೆಗೆ ನೀರು ಬರುತ್ತಿದೆ.

ತಿಪ್ಪೇಸ್ವಾಮಿ ಅವರು ಪ್ರಭಾವಿ ಸಚಿವ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಅವರು ಕೈ ಜೋಡಿಸುತ್ತಿದ್ದಾರೆ.

ಬಡವರು ಸಾಯಿಬಾಬಾ ದರ್ಶನ ಪಡೆಯಲು ಸಿರಡಿಗೆ ಹೋಗಲು ಆಗದವರಿಗೆ ಇಲ್ಲೇ ಸಾಯಿಬಾಬಾರನ್ನು ಪ್ರತಿಷ್ಠಾಪಿಸಿ ಜನರಿಗೆ ದರ್ಶನ ಭಾಗ್ಯ ಕಲ್ಪಿಸಿದ್ದಾರೆ ಎಂದು ಸ್ಮರಿಸಿದರು.

ನಿರಂತರ ದಾಸೋಹ ನಡೆಯಲಿ

ಅನ್ನದಾಸೋಹ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಶ್ರೀಗಳು, ಇಲ್ಲಿ ನಿತ್ಯ ದಾಸೋಹ ನೆಡೆಯಲಿ. ಪರಿಪೂರ್ಣವಾದ ಮಂದಿರ ನಿರ್ಮಾಣವಾಗಿದೆ. ಆದರೆ ದಾಸೋಹವಾದರೆ ಭಕ್ತರಿಗೆ ಅನುಕೂಲವಾಗುತ್ತದೆ.

ಶ್ರೀ ಸತ್ಯ ಸಾಯಿ ಬಾಬಾ ಗುರುವನ್ನು ನಂಬಿರುವ ತಿಪ್ಪೇಸ್ವಾಮಿ ಕುಟುಂಬ ಸಾಮಾಜಿಕ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಸಂತೋಷವಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರೊ.ತಿಪ್ಪೇಸ್ವಾಮಿ, ದಿಶಾ ಕಮಿಟಿ ಸದಸ್ಯೆ ಸ್ವಾತಿ ತಿಪ್ಪೇಸ್ವಾಮಿ, ಜಯಲಕ್ಷ್ಮಿ ತಿಪ್ಪೇಸ್ವಾಮಿ, ಗ್ರಾಪಂ ಅಧ್ಯಕ್ಷ ತಿರುಮಲೇಶ್, ಸಿದ್ದೇಶ್, ಸೊಕ್ಕೆ ನಾಗರಾಜ್ ಸೇರಿದಂತೆ ಅನೇಕರು ಇದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!