76ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ನೂತನ ಶಾಸಕ ಬಿ.ದೇವೇಂದ್ರಪ್ಪರಿಂದ ಧ್ವಜಾರೋಹಣ

Suddivijaya
Suddivijaya August 15, 2023
Updated 2023/08/15 at 1:00 PM

ಸುದ್ದಿವಿಜಯ, ಜಗಳೂರು: ನೂರಾರು ಭಾಷೆ, ನಾಲ್ಕಾರು ಧರ್ಮಗಳ ನೆಲೆಬೀಡಾಗಿರುವ ಭಾರತವನ್ನು ಬ್ರಿಟೀಷರ ದಾಸ್ಯದಿಂದ ಮುಕ್ತಗೊಳಿಸಿ ಹರಿದು ಹಂಚಿ ಹೋಗಿದ್ದ ಭಾರತವನ್ನು ಒಗ್ಗೂಡಿಸಿ ಏಕ ಸಂವಿಧಾನದ ಅಡಿ ನಾವೆಲ್ಲ ಒಂದೇ ಎಂದು ಜೀವಿಸುವಂತಹ ಸ್ವಾತಂತ್ರ್ಯಕ್ಕಾಗಿ ಅನೇಕ ಮಹಾನ್ ನಾಯಕರ ತ್ಯಾಗಬಲಿದಾನಗಳನ್ನು ಸ್ಮರಿಸುವ ದಿನ ಸ್ವಾತಂತ್ರೋತ್ಸವ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಪಟ್ಟಣದ ಬಯಲು ರಂಗಮಂದಿರದಲ್ಲಿ ಮಂಗಳವಾರ 76ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭರತ ಭೂಮಿ ಪುಣ್ಯದ ನೆಲ. ನಮ್ಮೆಲ್ಲರ ಸ್ವರ್ಗ ಭೂಮಿ ಇದು. ಹಿಂದೂ ಮುಸ್ಲಿಂ ಭಾಯಿ ಭಾಯಿ ಭಾರತ ಮಾತೆ ನಮ್ಮೆಲ್ಲರ ತಾಯಿ ಎಂದರು.

76ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿದರು
76ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿದರು

1974-75ನೇ ಇಸವಿಯಲ್ಲಿ ಇದೇ ಬಯಲು ರಂಗಮಂದಿರದಲ್ಲಿ ಸರಕಾರಿ ಶಾಲೆಯಿತ್ತು. ನಾನು ಅದೇ ಶಾಲೆಯ ವಿದ್ಯಾರ್ಥಿ. ಇದೇ ಜಾಗದಲ್ಲಿ ಓದಿದ್ದೆ ಆದರೆ ನಾನು ಶಾಸಕನಾಗುತ್ತೇನೆ ಎಂದುಕೊಂಡಿರಲಿಲ್ಲ.

ಈಗ ಶಾಸಕನಾಗಿ ಇದೇ ಸ್ಥಳದಲ್ಲಿ 76ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡುತ್ತಿರುವುದು ನನ್ನ ಸೌಭಾಗ್ಯ ಎಂದರು.

ನನಗೆ ಜನ್ಮನೀಡಿದ್ದು ನನ್ನ ತಂದೆತಾಯಿ ಆದರೆ ಜೀವನಕೊಟ್ಟವರು ವಿದ್ಯಾರತ್ನ ಡಾ.ಟಿ.ತಿಪ್ಪೇಸ್ವಾಮಿ ಎಂದು ಸ್ಮರಿಸಿದರು. ಈ ದೇಶದ ಸ್ವಾಭಿಮಾನ, ಐಕ್ಯತೆ ಸಾರುವ ನೃತ್ಯ ರೂಪಕಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ನೆಮ್ಮದಿಯ ಜೀವನ ನಡೆಸಲು ಸಾಧ್ಯ. ಮಹಾತ್ಮಾಗಾಂಧೀ ಒಬ್ಬರಿಂದಲೇ ದೇಶಕ್ಕೆ ಸ್ವಾತಂತ್ರ್ಯ ಲಭಿಸಲಿಲ್ಲ.

ಭಗತ್‍ಸಿಂಗ್, ಸುಖದೇವ್ ರಂತಹ ಮಹಾನ್ ಹೋರಾಟಗಾರಿಂದಲೂ ಸ್ವಾತಂತ್ರ್ಯ ಲಭಿಸಿತು. ದೇಶದ ಉದ್ದಗಲಕ್ಕೂ ಹರಿದು ಹಂಚಿ ಹೋಗಿದ್ದ ನಮ್ಮ ಭರತ ಖಂಡವನ್ನು 1947ರ ನಂತರ ಅಖಂಡ ಭಾರತವನ್ನಾಗಿ ಮಾಡಿದ ಅನೇಕ ಮಹಾನ್ ವ್ಯಕ್ತಿಗಳನ್ನು ಈ ದಿನ ನೆನೆಯೆಲೇಬೇಕು.

ಆಹಾರ, ಉಡುಗೆಗಳಲ್ಲಿ ವಿಭನ್ನತೆಯಿರಬಹುದು ಆದರೆ ನಮ್ಮನ್ನೆಲ್ಲ ಹೊತ್ತ ಭಾರತ ಮಾತೆಯೇ ನಿಜವಾದ ತಾಯಿ. ತಾಯಿಯ ನೆಲದಲ್ಲಿ ಹುಟ್ಟಿರುವ ನಾವೇ ಧನ್ಯರು ಎಂದು ಸ್ಮರಿಸಿದರು.

 ಜಗಳೂರು ಪಟ್ಟಣದ ಬಯಲು ರಂಗಮಂದಿರದಲ್ಲಿ ಶಾಸಕ ಬಿ.ದೇವೇಂದ್ರಪ್ಪ ಧ್ವಜಾರೋಹಣ ನೆರವೇರಿಸಿದರು.
 ಜಗಳೂರು ಪಟ್ಟಣದ ಬಯಲು ರಂಗಮಂದಿರದಲ್ಲಿ ಶಾಸಕ ಬಿ.ದೇವೇಂದ್ರಪ್ಪ ಧ್ವಜಾರೋಹಣ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅರುಣ್ ಕಾರಗಿ ಸ್ವಾತಂತ್ರೋತ್ಸವದ ಶುಭಾಶಯ ಕೋರಿದರು. ಸಾಹಿತಿ ಎನ್.ಟಿ.ಎರ್ರಿಸ್ವಾಮಿ ವಿಶೇಷ ಉಪನ್ಯಾಸ ನೀಡಿದರು. ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಆರ್.ಚಂದ್ರಪ್ಪ, ಪಪಂ ಸದಸ್ಯರಾದ ನಿರ್ಮಲಾ ಕುಮಾರಿ ಹನುಮಂತಪ್ಪ, ರಮೇಶ್‍ರೆಡ್ಡಿ, ಇನ್‍ಸ್ಪೆಕ್ಟರ್ ಎಂ.ಶ್ರೀನಿವಾಸ್‍ರಾವ್ ಮಾತನಾಡಿದರು.

ಈ ವೇಳೆ ತಾಪಂ ಇಓ ಚಂದ್ರಶೇಖರ್, ಬಿಇಓ ಸುರೇಶ್‍ರೆಡ್ಡಿ, ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್, ಕೆ.ಪಿ.ಪಾಲಯ್ಯ, ಷಂಷೀರ್ ಅಹಮದ್, ಕೆಪಿಸಿಸಿ ಸದಸ್ಯ ಕಲ್ಲೇಶ್‍ರಾಜ್ ಪಟೇಲ್, ಪಲ್ಲಾಗಟ್ಟೆ ಶೇಖರಪ್ಪ ಸೇರಿದಂತೆ ಪಪಂ ಸದಸ್ಯರು ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.

ಹೃನ್ಮನ ಸೆಳೆದ 77ಮೀ ಉದ್ದದ ಧ್ವಜ

76ನೇ ಸ್ವಾತಂತ್ರೋತ್ಸವ ಹಿನ್ನೆಲೆ ಇದೇ ಮೊದಲ ಬಾರಿ 76 ಮೀಟರ್ ಉದ್ದದ ತ್ರಿವರ್ಣ ಧ್ವಜವನ್ನು ವಿದ್ಯಾರ್ಥಿಗಳು ಭುಜದ ಮೇಲೆ ಹೊತ್ತು ಸಾಗಿದರು. ಶಾಸಕ ಬಿ.ದೇವೇಂದ್ರಪ್ಪ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಚಾಲನೆ ನೀಡಿದರು.

ಬೃಹತ್ ತಿರಂಗ ಧ್ವಜವನ್ನು ಬಯಲುರಂಗ ಮಂದಿರದವರೆಗೆ ಸಾಗಿದ ಮೆರವಣಿಗೆಯಲ್ಲಿ ಬಾಲಭಾರತಿ, ನಲಂದ ಪದವಿಪೂರ್ವ ಕಾಲೇಜು, ಇಮಾಂ ಶಾಲೆ, ಎನ್‍ಎಂಕೆ ಶಾಲೆ, ಸರಕಾರಿ ಪದವಿಪೂರ್ವ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಜಗಳೂರು ಪಟ್ಟಣದ ಎಲ್ಲ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿ ತ್ರಿವರ್ಣ ಧ್ವಜ ಹೊತ್ತು ಸಾಗುವ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ದೇಶ ಪ್ರೇಮದ ಅನೇಕ ಗೀತೆಗಳಿಗೆ ವಿದ್ಯಾರ್ಥಿಗಳು ನೃತ್ಯ ಮಾಡಿದರು.

ಈ ವೇಳೆ ವಿಕಲಚೇತರಿಗೆ ತ್ರಿಚಕ್ರವಾಹನಗಳನ್ನು ವಿತರಿಸಲಾಯಿತು. ಎಸ್‍ಎಸ್‍ಎಲ್‍ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸ್ವಾತಂತ್ರೋತ್ಸವದ ವೇದಿಕೆಯಲ್ಲಿ ಗೌರವಿಸಲಾಯಿತು.

Share this Article
Leave a comment

Leave a Reply

Your email address will not be published. Required fields are marked *

error: Content is protected !!