suddivijayanew15/08/2024
ಸುದ್ದಿವಿಜಯ, ಜಗಳೂರು: ಡಾ.ನಂಜುಂಡಪ್ಪ ವರದಿ ಅನುಸಾರ ರಾಜ್ಯದಲ್ಲೇ ಜಗಳೂರು ಅತ್ಯಂತ ಹಿಂದುಳಿದ ತಾಲೂಕಿನಲ್ಲೇ 2ನೇ ಸ್ಥಾನದಲ್ಲಿದೆ. ತಾಲೂಕಿನ ಅಭಿವೃದ್ಧಿಗೆ ನನ್ನ ಅವಧಿಯಲ್ಲಿ ನಿರೀಕ್ಷೆ ಮೀರಿ ಶ್ರಮಿಸುತ್ತೇನೆ. ಕ್ಷೇತ್ರದ ಏಳ್ಗೆಗಾಗಿ ಯಾವ ತ್ಯಾಗಕ್ಕೂ ಸಿದ್ಧ ಎಂದು ಶಾಸಕ ಬಿ.ದೇವೇಂದ್ರಪ್ಪ ಪ್ರತಿಪಾದಿಸಿದರು.
ಪಟ್ಟಣದ ಬಯಲು ರಂಗ ಮಂದಿರದಲ್ಲಿ ಗುರುವಾರ 78ನೇ ಸ್ವಾಂತ್ರ್ಯೋತ್ಸವ ಹಿನ್ನೆಲೆ ಧ್ವಜಾರೋಹಣ ನೆರವೇರಿಸಿದ ನಂತರ ಮಾತನಾಡಿದ ಅವರು, ಕಳೆದ ಎರಡು ದಿನಗಳಿಂದ ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದೆ.
ನಾಲ್ಕು ಕೆರೆಗಳು ಕೋಡಿ ಬಿದ್ದಿವೆ. ಸಿರಿಗೆರೆ ಜಗದ್ಗುರುಗಳ ಆಶೀರ್ವಾದದಿಂದ 57 ಕೆರೆ ತುಂಬಿಸುವ ಏತ ಕಾಮಗಾರಿ ಬಹುತೇಕ ಮುಗಿದು 30ಕ್ಕೂ ಹೆಚ್ಚು ಕೆರೆಗಳಿಗೆ ನಿರೀಕ್ಷೆ ಮೀರಿ ನೀರು ಹರಿಯುತ್ತಿದೆ. ರೈತರ ಮುಖದಲ್ಲಿ ಮಂದಹಾಸ ಮೂಡಿದೆ ಎಂದರು.
ಶುಕ್ರವಾರ ಪಟ್ಟಣಕ್ಕೆ ನೂತನ ಸಂಸದರಾದ ಪ್ರಭಾ ಮಲ್ಲಿಕಾರ್ಜುನ್ ಅವರು 452 ಕೋಟಿ ರೂ ಯೋಜನೆಯಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಉದ್ಘಾಟಿಸಲು ಬರಲಿದ್ದಾರೆ. ಈ ಯೋಜನೆಯಿಂದ 152 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರಿನ್ನು ಪೂರೈಕೆಯಾಗಲಿದೆ.ನನ್ನ ಮುಂದೆ ಅನೇಕ ಸವಾಲುಗಳಿವೆ. ನನ್ನ ಅವಧಿಯಲ್ಲಿ ಸಮಗ್ರ ನೀರಾವರಿ ಯೋಜನೆ ನಮ್ಮ ಉದ್ದೇಶವಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಗೊಳ್ಳಲಿದೆ. ಶಿಕ್ಷಣ, ಕುಡಿಯುವ ನೀರು, ಮೂಲಸೌಕರ್ಯಗಳ ಅಭಿವೃದ್ಧಿ ನನ್ನ ಮೊದಲ ಆದ್ಯತೆಯಾಗಿದೆ ಎಂದರು.
ತ್ಯಾಗ ಬಲಿದಾನಗಳಿಂದ ಬಂದ ಸ್ವಾತಂತ್ರ್ಯ ಸೇನಾನಿಗಳನ್ನು ನಾವು ನೆನೆಯಲೇ ಬೇಕು. ಇತಿಹಾಸ ಬಲ್ಲವನಿಗೆ ಮಾತ್ರ ಭವಿಷ್ಯವಿರುತ್ತದೆ. ವಿದ್ಯಾರ್ಥಿಗಳು ಮೊಬೈಲ್, ಸಾಮಾಜಿಕ ಜಾಲತಾಣಗಳ ಗೀಳಿಗೆ ಹೋಗದೇ ಪುಸ್ತಕಗಳನ್ನು ಓದಿ. ಹಿರಿಯರಿಗೆ ಗೌರವಕೊಡಿ ಎಂದು ಮಕ್ಕಳಿಗೆ ನೀತಿ ಪಾಠ ಹೇಳಿದರು.
ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಸ್ವಾತಂತ್ರೋತ್ಸವದ ಶುಭಾಶಯಕೋರಿದರು. ಕಾರ್ಯಕ್ರಮದಲ್ಲಿ ಇನ್‍ಸ್ಪೆಕ್ಟರ್ ಡಿ.ಶ್ರೀನಿವಾಸ್‍ರಾವ್, ಪಪಂ ಸದಸ್ಯ ರಮೇಶ್‍ರೆಡ್ಡಿ, ಮಾಜಿ ಅಧ್ಯಕ್ಷ ಎಂಎಲ್‍ಎ ತಿಪ್ಪೇಸ್ವಾಮಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಟ್ಟಣದ ಜೆ.ಎಂ.ಇಮಾಂ ಶಾಲೆ, ಬಾಲಭಾರತಿ ಶಾಲೆ, RVS, ಎನ್‍ಎಂಕೆ, ಸರಕಾರಿ ಶಾಲೆ, ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಥ ಸಂಚಲ ಮಾಡಿದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿಸಿದರು.
ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಈ.ಹಾಲಮೂರ್ತಿ, ಸಮನ್ವಯಾಧಿಕಾರಿ ಡಿಡಿ ಹಾಲಪ್ಪ, ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್, ತಾಪಂ ಪ್ರಭಾರ ಇಒ ಎನ್.ಕೆ.ಕೆಂಚಪ್ಪ, ನೂತನ ಆರ್ ಎಫ್‍ಒ ಜ್ಯೋತಿ ಮೆಣಸಿನಕಾಯಿ,
ವಲಯ ಅರಣಾಧಿಕಾರಿ ಶ್ರೀನಿವಾಸ್, ಕಾಂಗ್ರೆಸ್ ಮುಖಂಡ ಕಲ್ಲೇಶ್‍ರಾಜ್ ಪಟೇಲ್, ಬಿ.ಮಹೇಶ್ವರಪ್ಪ, ಪಲ್ಲಾಗಟ್ಟೆ ಶೇಖರಪ್ಪ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷರಾದ ವೀಣಾ ಗೋಗುದ್ದುರಾಜು ಸೇರಿದಂತೆ ಪಪಂ ಸದಸ್ಯರು ಇದ್ದರು.