Suddivijayanews10/6/2024
ಸುದ್ದಿವಿಜಯ,ಜಗಳೂರು: ದಾವಣಗೆರೆ, ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಒಟ್ಟು 12ಕ್ಕೂ ಹೆಚ್ಚು ಬಿತ್ತನೆ ಬೀಜಗಳ ವಿತರಕರಿಗೆ 3 ಕೋಟಿ ರೂ ಅಧಿಕ ಮೋಸ ಮಾಡಿ ತಲೆ ಮರೆಸಿಕೊಂಡಿರುವ ಕುಮಾರ ಗೌಡ ಅಲಿಯಸ್ ವೀರೇಶ್‍ಗೌಡ ಎಂಬ ಹೆಸರಿನ ವ್ಯಕ್ತಿ ತಾನು ಶ್ರೀಮಂತ ವ್ಯಕ್ತಿಯಂತೆ ಬಿಂಬಿಸಿ ಪಟ್ಟಣದ ಲೇವಾದೇವಿ ವ್ಯವಹಾರಸ್ಥರಿಗೂ ಮೋಸ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಕಳೆದ ಬುಧವಾರ ಆ ವ್ಯಕ್ತಿಯ ಮೋಸದ ಮಾದರಿಗಳು ಹೊರ ಬರುತ್ತಿದ್ದಂತೆ ಆತನಿಗೆ ಹೆಚ್ಚು ಬಡ್ಡಿಗೆ ಸಾಲ ಕೊಟ್ಟವರ ಸಂಖ್ಯೆಯೂ ದಿನಸಿ ಅಂಗಡಿಯ ದರಪಟ್ಟಯಂತೆ ಹೊರ ಬರುತ್ತಿದೆ.
ಶ್ರೀಮಂತನಂತೆ ಬಿಂಬಿಸಿಕೊಂಡ: ಜಗಳೂರು ಪಟ್ಟಣದ ರಾಮಾಲಯ ರಸ್ತೆಯಲ್ಲಿ ಕುಮಾರಗೌಡನ ಅಣ್ಣ (ಹೆಸರು ಗೊತ್ತಿಲ್ಲ) ಕಳೆದ ಎರಡು ವರ್ಷಗಳ ಮಯೂರ ಹೆಸರಿನ ಖಾನಾವಳಿ ನಡೆಸುತ್ತಿದ್ದ.
ಊಟಕ್ಕೆ ಬಂದ ಅಧಿಕಾರಿಗಳು ಮತ್ತು ಲೇವಾದೇವಿ ವ್ಯವಹಾರಸ್ಥರನ್ನು ಗುರುತಿಸಿ ತಮ್ಮನಿಗೆ ಪರಿಚಯಿಸುತ್ತಿದ್ದ.
ಹಣ ಇದ್ದವರು ಪರಿಚಯವಾದ ನಂತರ ಮಯೂರ ಹೋಟೆಲ್ ನಡೆಸುತ್ತಿದ್ದ ಕುಮಾರಗೌಡನ ಅಣ್ಣ ಹೋಟೆಲ್ ನಷ್ಟ ಆಗುತ್ತಿದೆ ಎಂದು ಬಂದ್ ಮಾಡಿ ಕಾಲುಕಿತ್ತ.
ನಂತರ ಕುಮಾರಗೌಡ ಖಾಸಗಿ ಲೇವಾದೇವಿ ವ್ಯವಹಾರಸ್ಥರಿಗೆ ತಾನು ಶ್ರೀಮಂತ ವ್ಯಕ್ತಿ ಎಂದು ಗುರುತಿಸಿಕೊಳ್ಳಲು ನಕಲಿ ಬಂಗಾರದಲ್ಲಿ ಎಲ್ಲ ಬೆರಳಿಗೂ ಉಂಗುರಗಳನ್ನು ಮತ್ತು ಕೊರಳಿಗೆ ದೊಡ್ಡ ಬಂಗಾರದ ಸರ ಹಾಕಿಕೊಂಡು ಕೃಷಿ ಆಗ್ರೋ ಕೇಂದ್ರದಲ್ಲಿ ಕುಳಿತ ಶ್ರೀಮಂತಿಕೆಯನ್ನು ಪ್ರದರ್ಶಿಸುತ್ತಿದ್ದ.
ಮೋಸದ ಬಲೆಗೆ ಬಿದ್ದ ವ್ಯವಹಾರಸ್ಥರು: ಕುಮಾರಗೌಡ, ಆಗ್ರೋ ಕೇಂದ್ರದಲ್ಲಿ ಕುಳಿತು ವ್ಯವಹಾರ ಮಾಡುತ್ತಿದ್ದ ಚತುರತೆ ಮತ್ತು ಹಣ ವರ್ಗಾವಣೆಯನ್ನು ಸೂಕ್ಷ್ಮವಾಗಿ ಗಮನಿಸಿದ ಪಟ್ಟಣವೂ ಸೇರಿದಂತೆ ತಾಲೂಕಿನ ಹಳ್ಳಿಗಳಲ್ಲಿರುವ ಖಾಸಗಿ ಲೇವಾದೇವಿ ವ್ಯವಹಾರಸ್ಥರೂ ಅವನ ಮೋಸದ ಬಲೆಗೆ ಬಿದ್ದಿದ್ದಾರೆ.
ಆರಂಭದಲ್ಲಿ ತಿಂಗಳು ಮುಗಿಯುತ್ತಿದ್ದಂತೆ ತಾನು ತೆಗೆದುಕೊಂಡ ಹಣಕ್ಕೆ ಶೇ.5 ರಷ್ಟು ಬಡ್ಡಿಯನ್ನು ಪಾವತಿಸುತ್ತಿದ್ದ.
ಇದರಿಂದ ಖುಷಿಗೊಂಡ 15 ರಿಂದ 20 ಜನ ಲೇವಾದೇವಿಗಾರರು ಕೇಳಿದಷ್ಟು ಹಣವನ್ನು ಯಾವುದೇ ಆಧಾರವಿಲ್ಲದೇ ಹಣ ಕೊಟ್ಟರು.
ಎಲ್ಲರಿಗೂ ತಿಂಗಳು ಮುಗಿಯುತ್ತದ್ದಂತೆ ಬಡ್ಡಿಯನ್ನು ಪಾವತಿಸುತ್ತಿದ್ದ.
ಸಾಲ ಕೊಟ್ಟವರಿಗೂ ಉದ್ದಗಟ್ಟ ಗ್ರಾಮದ ರುದ್ರೇಶ್ ಎಂಬ ವ್ಯಕ್ತಿಯ ಹೆಸರಿನಲ್ಲಿ ಚಕ್ ನೀಡಿದ್ದಾನೆ ಎನ್ನಲಾಗಿದೆ.
ಹೀಗಾಗಿ ಸಾಲಕೊಟ್ಟವರು ರುದ್ರೇಶ್‍ಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ.
ಆದರೆ ಓದು ಬರಹ ಬಾರದ ರುದ್ರೇಶ್‍ಗೆ ಕನ್ನಡದಲ್ಲೇ ಸಹಿ ಮಾಡಲು ಬರುವುದಿಲ್ಲ.
ಆದರೆಕುಮಾರ್ ಗೌಡ, ರುದ್ರೇಶ್ ಹೆಸರಿನಲ್ಲಿ ಮತ್ತು ತನ್ನ ಹೆಸರಿನಲ್ಲೂ ಇಂಗ್ಲಿಷ್‍ನಲ್ಲಿ ಸಹಿಯನ್ನು ಫೋರ್ಜರಿ ಮಾಡಿ ಚಕ್‍ಗಳನ್ನು ಲೇವಾದೇವಿ ವ್ಯವಹಾರಸ್ಥರಿಗೆ ಕೊಟ್ಟು ಅಂದಾಜು 3 ಕೋಟಿ ರೂಗೂ ಅದಿಕ ಹಣವನ್ನು ಎಗರಿಸಿಕೊಂಡು ಪರಾರಿಯಾಗಿದ್ದಾನೆ.
ಮೋಸ ಬಯಲಾಗಿದ್ದು ಹೀಗೆ: ಈ ಹಿಂದೆ ಗಂಗಾವತಿ ಪಟ್ಟಣದಲ್ಲಿ ಇದೇ ರೀತಿ ಮೋಸ ಮಾಡಿ ಕಳೆದ ಎರಡು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಕುಮಾರ ಗೌಡ ಅಲ್ಲಿಯೂ ಬೇರೆ ಬೇರೆ ಹೆಸರುಗಳ ಆಧಾರ್ ಕಾರ್ಡ್ ಮಾಡಿಸಿ ಕೋಟ್ಯಾಂತರ ರೂ ನಾಮಹಾಕಿ ಬಂದಿದ್ದ.
ಇತ್ತೀಚೆಗೆ ಬಿತ್ತನೆ ಬೀಜಗಳ ವ್ಯವಹಾರಸ್ಥರ ಶುಭ ಕಾರ್ಯಕ್ರಮಕ್ಕೆ ಹೋದಾಗ ಸಮಾರಂಭದ ಫೋಟೋಗಳನ್ನು ಸಮಾರಂಭಕ್ಕೆ ಆಹ್ವಾನಿಸಿದವರು ತಮ್ಮ ಮೊಬೈಲ್ ಡಿಪಿಗೆ ಹಾಕಿದ್ದರು.
ಅದರಲ್ಲಿ ಕುಮಾರ ಗೌಡ ಇರುವುದನ್ನು ಗಂಗಾವತಿ ಮೂಲದ ಬಿತ್ತನೆ ಬೀಜದ ಡೀಲರ್‍ವೊಬ್ಬರು ಪತ್ತೆ ಹಚ್ಚಿದ್ದಾರೆ.
ತಕ್ಷಣವೇ ಅವರು ಕುಮಾರ ಗೌಡ ವಿಳಾಸ ಪತ್ತೆಹಚ್ಚಿದ್ದಾರೆ. ಕಳೆದ ಸೋಮವಾರ ಪಟ್ಟಣಕ್ಕೆ ಬಂದು ಕೃಷಿ ಆಗ್ರೋ ಎದುರು ಇರುವ ಕಲ್ಲೇಶ್ವರ ಲಾಡ್ಜ್ ನಲ್ಲಿ ರೂಂ ನಲ್ಲಿ ಇದ್ದು ಎರಡು ದಿನ ಕುಮಾರಗೌಡನ ವ್ಯವಹಾರ, ಚತುರತೆ ಪತ್ತೆಹಚ್ಚಿದ್ದಾರೆ.
ಗಂಗಾವತಿಯವರು ಬಂದಿರುವ ಸುಳಿವು ಸಿಗುತ್ತಿದ್ದಂತೆ ಅವರಿಗೆ ಒಂದು ದಿನ ಕಾಲಾವಕಾಶ ಕೋರಿ ತನ್ನ ಮೋಸ ಬಯಲಾಗುತ್ತದೆ ಎಂದು ಅರಿತು ಬುಧವಾರ ನಸುಕಿನಲ್ಲೇ ತನ್ನ ಲಗೇಜ್ ಸಮೇತ ಜಗಳೂರು ಪಟ್ಟಣ ಬಿಟ್ಟು ಪರಾರಿಯಾಗಿದ್ದಾನೆ.
ಸಾಲ ಕೊಟ್ಟ ಬಿತ್ತನೆ ಬೀಜಗಳ ಡಿಸ್ಟ್ರಿಬ್ಯೂಟರ್‍ಗಳಿಗೆ ಈ ವಿಷಯ ತಿಳಿದು ಓಡೋಡಿ ಬಂದರೂ ಏನೂ ಪ್ರಯೋಜನವಾಗಿಲ್ಲ.
ಒಟ್ಟಿನಲ್ಲಿ ಸಾಲಕೊಟ್ಟ ಲೇವಾದೇವಿ ವ್ಯವಹಾರಸ್ಥರಿಗೆ ತಾವು ಸಾಲ ಕೊಟ್ಟಿರುವುದಕ್ಕೆ ಸೂಕ್ತದಾಖಲೆಗಳಿಲ್ಲ. ಹೀಗಾಗಿ ಪೊಲೀಸ್ ಠಾಣೆಗೆ ದೂರು ಕೊಡಲು ಆಗದೇ ಹಣ ಕಳೆದುಕೊಂಡು ಪರಿತಪಿಸುತ್ತಿದ್ದಾರೆ.