suddivijayanews31/07/2024
ಸುದ್ದಿವಿಜಯ, ಜಗಳೂರು: ಸಮಾಜದಲ್ಲಿ ಸತ್ಯ ಮತ್ತು ಅಸತ್ಯದ ಶೋಧನೆ ಮಾಡದೇ ಹೋದರೆ ನಿಜವಾದ ಸುಳ್ಳನ್ನು ಹೊರ ತರಲು ಸಾಧ್ಯವಿಲ್ಲ. ಹೀಗಾಗಿ ಸಂವಿಧಾನದ ನಾಲ್ಕನೇ ಅಂಗವಾಗಿರುವ ಪತ್ರಕರ್ತರು ಸತ್ಯಶೋಧನೆ ಮಾರ್ಗದಲ್ಲಿ ನಡೆದರೆ ಮಾತ್ರ ವೃತ್ತಿ ಬದ್ಧತೆಗೆ ಹೊರಬರುತ್ತದೆ ಎಂದು ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದ ಶ್ರೀ ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಕಣ್ವಕುಪ್ಪೆ ಗವಿಮಠದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿAದ ಪತ್ರಿಕಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶೂರ್ಪನಕಿ, ಶ್ರೀರಾಮನ ಆಕರ್ಷಣೆಗೆ ಒಳಗಾಗಿ ಶ್ರೀರಾಮನನ್ನು ವಿವಾಹವಾಗಲು ಇಲ್ಲಸಲ್ಲದ ಆರೋಪ ಮಾಡಿ ರಾವಣನಿಗೆ ದೂರು ನೀಡಿದಳು.
ಪರಿಶೀಲಿಸದ ರಾವಣಾಸುರನು ಸತ್ಯಶೋಧನೆ ಮಾಡದೇ ಸೈನಿಕರನ್ನು ಬಿಟ್ಟು ರಾಮನನ್ನು ಸೋಲಿಸಲು ಯತ್ನಿಸಿದ ಆದರೆ ಲಕ್ಷಾಂತರ ಸೈನಿಕರು ಸೋತು ಸತ್ತರು. ಕೊನೆಗೆ ರಾವಣನನು ಮಂಡೋದರಿಯ ಮಾತು ಕೇಳದೇ ಶ್ರೀರಾಮನ ಮೇಲೆ ಯುದ್ಧ ಮಾಡಿ ಸೋತು ಸುಣ್ಣವಾಗಿ ಹತನಾದ.
ರಾಮನ ಮೇಲೆ ಯುದ್ಧ ಮಾಡುವ ಮುನ್ನ ರಾವಣ ಸತ್ಯ ಶೋಧನೆ ಮಾಡಿದ್ದರೆ ಅಷ್ಟೊಂದು ರಾದ್ದಾಂತವೇ ಆಗುತ್ತಿರಲಿಲ್ಲ.ಅಹಂನಿಂದ ಸರ್ವನಾಶವಾದ. ಸತ್ಯಹರಿಶ್ಚಂದ್ರ ಎಂತಹ ಕಷ್ಟ ಬಂದರೂ ಸತ್ಯಬಿಡಲಿಲ್ಲ.
ಯಾರೋ ಹೇಳಿದರು ಎಂದು ಸುದ್ದಿ ಬರೆಯುವ ಮುನ್ನ ಸತ್ಯಶೋಧನೆ ಮಾಡದೇ ಬರೆಯಬೇಡಿ. ಕರ್ತವ್ಯದಲ್ಲಿ ಸದಾಚಾರ, ಕ್ರಿಯಾಶೀಲತೆ, ನಿಸ್ವಾರ್ಥತೆ ಇದ್ದರೆ ಭಗವಂತ ಕೊಟ್ಟೆಕೊಡುತ್ತಾನೆ. ಸದಾ ಸತ್ಕಾರ್ಯದಲ್ಲಿ ಭಾಗಿಯಾಗಿ ಸತ್ಯವನ್ನೇ ಬರೆಯಿರಿ ಎಂದು ಪತ್ರಕರ್ತರಿಗೆ ಕಿವಿ ಮಾತು ಹೇಳಿದರು.
ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್ ಮಾತನಾಡಿ, ಸಮಾಜ ವ್ಯಕ್ತಿಗಿಂತ ವ್ಯಕ್ತಿತ್ವಕ್ಕೆ ಹೆಚ್ಚು ಬೆಲೆ ಕೊಡುತ್ತದೆ. ತಾಲೂಕು ಮಟ್ಟದ ಪತ್ರಕರ್ತರು ಸಾಕಷ್ಟು ಶೋಷಣೆಗೆ ಒಳಗಾಗಿದ್ದಾರೆ.
ನಾನೂ ಸಹ ಸಾಕಷ್ಟು ನೋವನ್ನು ಅನುಭವಿಸಿದ್ದೇನೆ. ಸರಕಾರಿ ಸವಲತ್ತುಗಳಿಂದ ಪತ್ರಕರ್ತರು ವಂಚಿತರಾಗಿದ್ದಾರೆ. ಕುಟುಂಬ ಜೊತೆಗೆ ಸಾಲು ಸಾಲು ಸಮಸ್ಯೆಗಳಿವೆ. ಹಾವು ಏಣಿ ಆಟದಂತೆ ಪತ್ರಕರ್ತರ ಜೀವನವಾಗಿದೆ. ಆದರೆ ಬರೆಯುವ ಪೆನ್ನಿನ ಮಸಿ ಕೈಗೆ ಅಂಟದಂತೆ ಇರುವುದೇ ಪತ್ರಕರ್ತರ ನಿಜವಾದ ಬದ್ಧತೆ ಎಂದರು.
ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ್ ಮಾತನಾಡಿ, ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ನಿವೇಶನ ಪಡೆಯಬೇಕಾದರೆ ಸ್ಥಳೀಯ ಜನಪ್ರತಿನಿಧಿಗಳು ಮನಸ್ಸು ಮಾಡಬೇಕು. ನಿಮ್ಮ ಎಲ್ಲ ಕಷ್ಟ-ಸುಖದಲ್ಲಿ ಸಂಘ ಜೊತೆಗಿರುತ್ತದೆ ಎಂದರು.
ಜಿಲ್ಲಾ ಕಾರ್ಯದರ್ಶಿ ಎ.ಪಕೃದ್ಧೀನ್, ತಾಲೂಕು ಅಧ್ಯಕ್ಷ ಜಿ.ಎಸ್.ಚಿದಾನಂದ, ಡಿ.ಶ್ರೀನಿವಾಸ್, ಅಣಬೂರು ಮಠದ ಕೊಟ್ರೇಶ್, ಸಾಹಿತಿ ಎನ್.ಟಿ.ರ‍್ರಿಸ್ವಾಮಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ ಐಹೊಳೆ,
ಖಜಾಂಚಿ ಕೆ.ಎಂ.ಜಗದೀಶ್, ಪತ್ರಕರ್ತರ ಸಂಘದ ಜಿಲ್ಲಾ ಸದಸ್ಯ ರುದ್ರೇಶ್ ಪತ್ರಿಕಾ ವಿತರಕ ಕೃಷ್ಣ, ಸಿದ್ದೇಶ್, ರೈತಮುಖಂಡರಾದ ಚಿರಂಜೀವಿ, ರಾಜು, ಮಧು, ಡಿಎಸ್‌ಎಸ್ ಮುಖಂಡ ಮಲೆಮಾಚಿಕೆರೆ ಸತೀಶ್, ಧನ್ಯಕುಮಾರ್, ಎಸ್.ಎಂ.ಸೋಮನಗೌಡ, ಶಿವಲಿಂಗಪ್ಪ, ಬಸವರಾಜ್, ಪಿ.ರವಿಕುಮಾರ್, ವಾಸೀಂ, ಎಸ್‌ಎಫ್‌ಐ ಮಹಲಿಂಗಪ್ಪ ಸೇರಿದಂತೆ ಅನೇಕರು ಇದ್ದರು.