suddivijayanews19/08/2024
ಸುದ್ದಿವಿಜಯ, ಜಗಳೂರು: ಆಹಾರದಲ್ಲಿ ಉತ್ತಮವಾದ ಪೋಷಕಾಂಶಗಳುಳ್ಳ ತರಕಾರಿಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೆಂದ್ರದ ತೋಟಗಾರಿಕಾ ವಿಜ್ಞಾನಿಗಳಾದ ಎಂ.ಜಿ.ಬಸವನಗೌಡ ಅಭಿಪ್ರಾಯಪಟ್ಟರು.
ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ತಾಲೂಕಿನ ಬಸಪ್ಪನಹಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡ ಪೌಷ್ಠಿಕ ಕೈತೋಟ ತರಬೇತಿಯಲ್ಲಿ ಮಾತನಾಡಿ, ಬಹು ವಾರ್ಷಿಕ ತರಕಾರಿಗಳಾದ ನುಗ್ಗೆ ಮತ್ತು ತರಕಾರಿಗಳನ್ನು ಮನೆಯ ಕೈತೋಟದಲ್ಲಿ ಬೆಳೆಯುವುದರಿಂದ ವರ್ಷಪೂರ್ತಿ ಸೊಪ್ಪು ದೊರೆಯಲಿದೆ.
ಜೊತೆಗೆ ನುಗ್ಗೆಯ ಸೊಪ್ಪಿನಲ್ಲಿನ ಕಬ್ಬಿಣದ ಅಂಶ ಮತ್ತು ಹಿಮೋಗ್ಲೋಬಿನ್ ಹೆಚ್ಚು ಮಾಡುವ ಗುಣದಿಂದ ನಮ್ಮ ಆರೋಗ್ಯದಲ್ಲಿ ನಿರೋಧಕತೆ ಹೆಚ್ಚುವುದಲ್ಲದೆ ಮಾನಸಿಕವಾಗಿ ನಮ್ಮನ್ನು ಸದೃಢವಾಗಿರಲು ಸಹಾಯವಾಗುತ್ತದೆ ಎಂದು ತಿಳಿಸಿದರು. ಬಳಿಕ ವೈಜ್ಞಾನಿಕವಾಗಿ ನುಗ್ಗೆ ಬೆಳೆಯ ಬೇಸಾಯ ಕ್ರಮಗಳ ಬಗ್ಗೆ ತರಬೇತಿಯನ್ನು ನೀಡಲಾಯಿತು.
ಗೃಹ ವಿಜ್ಞಾನಿಗಳಾದ ಡಾ. ಸುಪ್ರಿಯಾ ಪಿ ಪಾಟೀಲ್ ಮಾತನಾಡಿ ಆಹಾರದಿಂದ ಆರೋಗ್ಯ, ಆರೋಗ್ಯವೇ ಆದಾಯವೆಂಬುದನ್ನು ತಾವೆಲ್ಲರೂ ತಿಳಿಯಬೇಕು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಅಪೌಷ್ಠಿಕತೆ ಪ್ರಮಾಣ ಹೆಚ್ಚಾಗುತ್ತಿದ್ದು ಇದರಿಂದ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದರು.
ನುಗ್ಗೆಕಾಯಿ ಮತ್ತು ಸೊಪ್ಪು ಅತಿ ಹೆಚ್ಚು ಪೋಷಕಾಂಶಗಳನ್ನು ಹೊಂದಿದ್ದು, ಇವುಗಳನ್ನು ಸೇವಿಸುವುದರಿಂದ ಆರೋಗ್ಯದಲ್ಲಿ ವ್ಯತ್ಯಾಸವಾಗುವುದಿಲ್ಲ ಎಂದರು.
ಕೇಂದ್ರದ ಸಸ್ಯ ಸಂರಕ್ಷಣಾ ವಿಜ್ಞಾನಿಗಳಾದ ಡಾ.ಅವಿನಾಶ್ ಟಿ.ಜಿ, ನಮ್ಮ ಮತ್ತು ನಮ್ಮ ಮನೆಯವರ ಆರೋಗ್ಯ ಕಾಪಾಡಿಕೊಳ್ಳುವುದರಲ್ಲಿ ಆಹಾರ ಎಷ್ಟು ಮುಖ್ಯವೋ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ಅಷ್ಟೇ ಮುಖ್ಯ ಎಂದು ತಿಳಿಸಿದರು.
ಸ್ವಚ್ಚತೆಯನ್ನು ಕಾಪಾಡುವುದು ನಿರಂತರವಾಗಿದ್ದು ಇದಕ್ಕೆ ಪ್ರತಿಯೊಬ್ಬರು ಕೈಜೋಡಿಸಿದಲ್ಲಿ ಅನೇಕ ತೊಂದರೆಗಳನ್ನು ತಡೆಗಟ್ಟಲು ಸಹಕಾರಿಯಾಗಲಿದೆ ಹಾಗೂ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ 30 ರೈತ ಮಹಿಳೆಯರಿಗೆ ನುಗ್ಗೆ ಸಸಿಯನ್ನು ಪೌಷ್ಠಿಕ ಕೈತೋಟ ಯೋಜನೆಯಲ್ಲಿ ವಿತರಿಸಿ ಬಳಿಕ ಈಗಾಗಲೇ ಅಭಿವೃದ್ಧಿ ಪಡಿಸಿರುವ ಪೌಷ್ಠಿಕ ಕೈ ತೋಟ ತಾಕುಗಳಿಗೆ ಭೇಟಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಬಿದರಕೆರೆ ತರಳಬಾಳು ಎಫ್‍ಪಿಒ ನಿರ್ದೇಶಕ ಬಸಪ್ಪನಹಟ್ಟಿ ಗ್ರಾಮದ ಪ್ರಗತಿಪರ ರೈತರಾದ ಕೃಷ್ಣಮೂರ್ತಿ, ಶಶಿಕುಮಾರ ಹಾಗೂ ರೈತ ಮಹಿಳೆಯರು ಇದ್ದರು.