ಸುದ್ದಿವಿಜಯ, ಜಗಳೂರು: ರೈತರ ಪಂಪ್‍ಸೆಟ್‍ಗಳಿಗೆ ನಿರಂತರ ಏಳು ಗಂಟೆ ಸಮರ್ಪಕ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಗುರುವಾರ ತಾಲೂಕಿನ ಬಿಳಿಚೋಡು, ಪಲ್ಲಾಗಟ್ಟೆ ವಿದ್ಯುತ್ ಸರಬರಾಜು ಸಬ್ ಸ್ಟೇಷನ್ ಕಚೇರಿಗಳಿಗೆ ಬೀಗ ಜಡಿದು ರೈತರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಬೆಸ್ಕಾಂ ವಿದ್ಯುತ್ ಪ್ರಸರಣಾ ಕೇಂದ್ರದ ಹತ್ತಿರ ಬೆಳಿಗ್ಗೆ 10ಕ್ಕೆ ಜಮಾಯಿಸಿದ ರೈತರು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನ ಪಲ್ಲಾಗಟ್ಟೆ, ದಿದ್ದಿಗೆ, ಐನಹಳ್ಳಿ, ಬಿಳಿಚೋಡು, ಗುಡ್ಡದನಿಂಗಣ್ಣನಹಳ್ಳಿ, ಗೋಡೆ ಮುಂದಾದ ಗ್ರಾಮಗಳ ನೂರಾರು ರೈತರು ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಳು ಮತ್ತು ಸರಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಎಇಇ ಸುಧಾಮಣಿ ಅವರಿಗೆ ಮನವಿ ಸಲ್ಲಿಸಿದರು.ಜಗಳೂರು ತಾಲೂಕಿನ ಪಲ್ಲಾಗಟ್ಟೆ ವಿದ್ಯುತ್ ಸರಬರಾಜು ಕಚೇರಿಗೆ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಮುಂಗಾರು ಸರಿಯಾಗಿ ಮಳೆಯಾಗಿಲ್ಲ. ರೈತರು ನೀರಿಲ್ಲದೇ ಕಂಗಾಲಾಗಿದ್ದಾರೆ. ತೋಟಗಳು ಒಣಗುತ್ತಿವೆ. ಹಿಂಗಾರು ಮಳೆಯೂ ಈವರೆಗೂ ಬಂದಿಲ್ಲ. ಜಗಳೂರು ತಾಲೂಕಿನಾದ್ಯಂತ ತೀವ್ರ ಬರ ವ್ಯಾಪಿಸಿದೆ. ಮೆಕ್ಕೆಜೋಳ ಕೈಕೊಟ್ಟಿದೆ. ಉಳಿದ ತೋಟಗಾರಿಕೆ ಬೆಳೆಗಳಿಗೆ ನೀರು ಬಿಟ್ಟು ಬದುಕಿಸೋಣ ಎಂದರೆ ಎರಡು ಗಂಟೆ ವಿದ್ಯುತ್ ಕೊಟ್ಟರೆ ಹೇಗೆ ಸಾಧ್ಯ. ತಾಂತ್ರಿಕ ನೆಪಹೇಳಿ ಎರಡು ಗಂಟೆಯಲ್ಲಿ ನಾಲ್ಕೈದು ಬಾರಿ ಪವರ್ ತೆಗೆದಯುತ್ತಾರೆ. ಹೀಗಾದರೆ ರೈತರು ಹೇಗೆ ಉದ್ದಾರವಾಗುತ್ತಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು..