suddivijayanews15/08/2024
ಸುದ್ದಿವಿಜಯ, ಜಗಳೂರು: ಕಳೆದ ಬುಧವಾರ ಮತ್ತು ಗುರುವಾರ ತಡರಾತ್ರಿ ಸುರಿದ ಭಾರಿ ಮಳೆಗೆ ತಾಲೂಕಿನ ಕ್ಯಾಸೇನಹಳ್ಳಿ, ಗೌರಿಪುರ, ಹುಚ್ಚವ್ವನಹಳ್ಳಿ, ಚಿಕ್ಕಮಲ್ಲನಹೊಳೆ(ಎರೆಹಳ್ಳಿ) ಗ್ರಾಮಗಳ ನಾಲ್ಕು ಕೆರೆಗಳು ಕೋಡಿ ಬಿದ್ದಿವೆ.
ಅಷ್ಟೇ ಅಲ್ಲ ಐದು ಮನೆಗಳು ಭಾಗಶಃ ಬಿದ್ದು ಹಾನಿಯಾಗಿವೆ ಎಂದು ತಹಶೀಲ್ದಾರ್ ಸೈಯದ್ ಕಲೀಂಉಲ್ಲಾ ಮತ್ತು ಆರ್‍ಐ ಧನಂಜಯ ಮಾಹಿತಿ ನೀಡಿದ್ದಾರೆ.ಬುಧವಾರ ಮಧ್ಯರಾತ್ರಿ ಆರಂಭವಾದ ಮಳೆ ಇಡೀ ರಾತ್ರಿ ಗುಡುಗು, ಸಿಡಿಲು ಸಹಿತ ಧಾರಾಕಾರವಾಗಿ ಸುರಿಯಿತು. ಹೀಗಾಗಿ ನಾಲ್ಕು ಕೆರೆಗಳು ಭರ್ತಿಯಾಗಿ ಕೋಡಿಬಿದ್ದು ಹರಿಯಲಾರಂಭಿಸಿವೆ. ಗ್ರಾಮಗಳ ಮುಖಂಡರು ಕೋಡಿಬಿದ್ದ ಕೆರೆಗಳಿಗೆ ಗಂಗಾಪೂಜೆ ನೆರವೇರಿಸಿ ಬಾಗೀನ ಅರ್ಪಿಸಿದರು.
ಮನೆಗಳಿಗೆ ಹಾನಿ:
ತಾಲೂಕಿನ ಮರಿಕುಂಟೆ ಗ್ರಾಮದ ಹೊಳೆಯಮ್ಮ ಎಂಬುವರ ಮನೆಯ ಗೋಡೆ ಕುಸಿದು ಮತ್ತೊಮ್ಮೆ ಮಳೆ ಸುರಿದರೆ ಮನೆ ಸಂಪೂರ್ಣ ಬೀಳುವ ಆತಂಕ ಉಂಟಾಗಿದೆ. ದಿದ್ದಿಗೆ ಗ್ರಾಮದಲ್ಲಿ ವಾಸದ ಮನೆ ಭಾಗಶಃ ಹಾನಿಯಾಗಿದೆ.ಬಿಳಿಚೋಡು ಗ್ರಾಮದಲ್ಲಿ ಎರಡು ಮನೆಗಳ ಗೋಡೆ ಕುಸಿದು ಬಿದ್ದಿವೆ. ಮಾದಮುತ್ತೇನಹಳ್ಳಿ ಗ್ರಾಮದಲ್ಲೂ ಮನೆಯ ಶೇ.70 ರಷ್ಟು ಬಿದ್ದು ಹೋಗಿದ್ದು ಕುಟುಂಬದವರು ಬೇರೊಂದು ಮನೆಗೆ ಸ್ಥಳಾಂತರಗೊಂಡಿದ್ದಾರೆ.
ಬಾಳೆ, ಅಡಕೆ ತೋಟಗಳಿಗೆ ನುಗ್ಗಿದ ನೀರು: ತಾಲೂಕಿನ ಮಾದಮುತ್ತೇನಹಳ್ಳಿ ಗ್ರಾಮದಲ್ಲಿ ಬಾಳೆ ತೋಡಗಳಿಗೆ ನೀರು ನುಗ್ಗಿದೆ. ಅರಿಶಿಣಗುಂಡಿ ಗ್ರಾಮದ ಎಸಿ ರೇವಣ್ಣ ಮತ್ತು ರಾಜಣ್ಣ ಅವರ ತೋಟದಿಂದ ಭಾರಿ ಪ್ರಮಾಣದ ನೀರು ಹರಿದು ಹೋಗುತ್ತಿದೆ.
ಗಿಡ್ಡನಕಟ್ಟೆ ಮತ್ತು ಮಾಚಿಕೆರೆ ಗ್ರಾಮಗಳ ಸಂಪರ್ಕ ಕಲ್ಪಿಸುವ ಡಾಂಬರ್ ರಸ್ತೆ ಕೊಚ್ಚಿಕೊಂಡು ಹೋಗಿದ್ದು ವಾಹನ ಸವಾರರು ಬೇರೆ ಮಾರ್ಗ ಅನುಸರಿಸುವ ಸ್ಥಿತಿ ನಿರ್ಮಾಣವಾಗಿದೆ.
ರೈತರು ಬೆಳೆದಿರುವ ಈರುಳ್ಳಿ, ಮೆಕ್ಕೆಜೋಳ, ಹತ್ತಿ, ರಾಗಿ, ದ್ವಿದಳ ಧಾನ್ಯಗಳ ಬೆಳೆಗಳು ಭಾಗಶಃ ನೀರಿನಲ್ಲಿ ಮುಳುಗಿವೆ. ತಕ್ಷಣ ತಾಲೂಕು ಆಡಳಿತ ರೈತರಿಗೆ ಆದ ನಷ್ಟವನ್ನು ಭರಿಸಲು ಸರ್ವೆ ಮಾಡಿಸಿ ಸರಕಾರಕ್ಕೆ ಸಲ್ಲಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.