suddivijayanews21/08/2024
ಸುದ್ದಿವಿಜಯ, ಜಗಳೂರು: ನಿತ್ಯ ಸುರಿಯುತ್ತಿರುವ ಮೊಗೆ ಮಳೆಗೆ ತಾಲೂಕಿನಾದ್ಯಂತ ಸಮೃದ್ಧ ಮಳೆಯಾಗಿದ್ದು ರೈತರಲ್ಲಿ ಒಂದೆಡೆ ಸಂತೋಷ ಉಂಟಾದರೆ ಮತ್ತೊಂದೆಡೆ ಆತಂಕ ಸೃಷ್ಟಿಯಾಗಿದೆ.
ಕಳೆದ ಒಂದು ವಾರದಿಂದಲೂ ಪ್ರತಿನಿತ್ಯ ಕುಂಭದ್ರೋಣದಂತೆ ಸರಾಸರಿ ಒಂದೂವರೆ ಎರಡು ಗಂಟೆಗಳ ಕಾಲ ಸುರಿಯುತ್ತಿರುವ ಮೊಗೆ ಮಳೆಗೆ ನೂರಾರು ಹೆಕ್ಟೇರ್ ಬೆಳೆ ಜಲಾವೃತವಾಗಿದೆ. ಹಳ್ಳಕೊಳ್ಳಗಳು ಹರಿದು ಕೆರೆಗಳು ಶೇ.75ರಷ್ಟು ಭರ್ತಿಯಾಗುವ ಹಂತಕ್ಕೆ ಬಂದಿವೆ.
ತಾಲೂಕಿನ ಕಸಬ, ಹೊಸಕೆರೆ, ಸೊಕ್ಕೆ, ಬಿಳಿಚೋಡು ಹೋಬಳಿಗಳ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಬೆಳಗ್ಗೆ ರಣ ಬಿಸಿಲಿನ ಪ್ರಕರತೆಯಿದ್ದರೆ ಸಂಜೆಯಾಗುತ್ತಿದ್ದಂತೆ ಮೋಡಗಳಿಗೆ ತೂತುಬಿದ್ದಂತೆ ದಿಢೀರನೇ ಮೋಡೆ ಒಡೆದು ಧೋ ಎಂದು ಮಳೆ ಸುರಿಯುತ್ತದೆ.ಜಗಳೂರು ತಾಲೂಕಿನ ಬಿಸ್ತುವಳ್ಳಿ ಗ್ರಾಮದ ಕೆರೆ ಭರ್ತಿಯಾಗಿ ಕೋಡಿ ಬಿದ್ದ ಚಿತ್ರ
ಮಂಗಳವಾರ ಸಂಜೆ ಮತ್ತು ರಾತ್ರಿಯಿಡೀ ಸುರಿದ ಮಳೆಗೆ ತಾಲೂಕಿನ ಬಿಸ್ತುವಳ್ಳಿ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದೆ. ಬಿದರಕೆರೆ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಟ್ಟಿಗೆಹಳ್ಳಿ,
ಅರಿಶಿಣಗುಂಡಿ ಹಳ್ಳಗಳು ಮೈದುಂಬಿ ಹರಿಯುತ್ತಿದ್ದು ಜಮ್ಮಾಪುರ ಕೆರೆಗೆ ನೀರು ಸೇರುತ್ತಿದೆ. ಕಾತ್ರಾಳು ಕೆರೆ ಕೋಡಿ ಬಿದ್ದ ಕಾರಣ ಜಗಳೂರು ತಾಲೂಕಿನ ಬೃಹದಾದ ಸಂಗೇನಹಳ್ಳಿ ಕೆರೆಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.
ಜಗಳೂರು, ಬಿಳಿಚೋಡು, ಚದರಗೊಳ್ಳ, ಹಾಲೇಕಲ್ಲು ಕೆರೆಗಳು ಶೇ.75ರಷ್ಟು ನೀರು ಬಂದಿದ್ದು ತುಂಬುವ ಹಂತಕ್ಕೆ ಬಂದಿವೆ. ಮತ್ತೊಂದು ಬೃಹದಾದ ಗಡಿಮಾಕುಂಟೆ ಕೆರೆ ತುಂಬಲು ಇನ್ನು 7 ಅಡಿಗಳಷ್ಟಿದ್ದು ಅದು ಭರ್ತಿಯಾದರೆ ಕಳೆದ 18 ವರ್ಷಗಳ ನಂತರ ಮತ್ತೊಮ್ಮೆ ಭರ್ತಿಯಾಗುವ ವರ್ಷ ಎಂದು ಇತಿಹಾಸ ಪುಟ ಸೇರಲಿದೆ.
ಇನ್ನು ಕ್ಯಾಸೇನಹಳ್ಳಿ, ಚಿಕ್ಕಮಲ್ಲನಹೊಳೆ, ಗೌರಿಪುರ, ಚಿಕ್ಕಮ್ಮನಹಟ್ಟಿ, ಕಾನನಕಟ್ಟೆ ಕೆರೆಗಳು ಭತಿಯಾಗಿ ಮೈದುಂಬಿ ಕೋಡಿ ಹರಿಯುತ್ತಿವೆ.
ಮನೆಗಳಿಗೆ ಹಾನಿ:
ಮಂಗಳವಾರ ಸಂಜೆ ಸುರಿದ ಭೀಕರ ಮಳೆಗೆ ತಾಲೂಕಿನಲ್ಲಿ ಮೂರು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಕಸಬ ಹೊಬಳಿಯ ಕಟ್ಟಿಗೆಹಳ್ಳಿ ಗ್ರಾಮದ ಮಂಜಕ್ಕ ಅವರ ವಾಸದ ಮನೆಯ ಗೋಡೆ ಬಿದ್ದಿದೆ.
ನರಸಿಂಹರಾಜಪುರದ ಶಾಂತಾಬಾಯಿ ಅವರ ನಿವಾಸದ ಮಣ್ಣಿನ ಗೋಡೆ ಕುಸಿದು ಬಿದ್ದಿದೆ. ಬ್ಯಾಟಗಾರನಹಳ್ಳಿಯ ಗೌರಿಭಾಯಿ ಎಂಬ ಮಹಿಳೆಯ ಮನೆಯ ಮೇಲ್ಛಾವಣಿ ಕುಸಿದು ನೀರು ಒಳನುಗ್ಗಿದ್ದು ಮತ್ತೊಬ್ಬರ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಎಂದು ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಮತ್ತು ಕಂದಾಯ ನಿರೀಕ್ಷಕ (ಆರ್ ಐ) ಧನಂಜಯ ಮಾಹಿತಿ ನೀಡಿದ್ದಾರೆ.
ಬೆಳೆಗಳಿಗೆ ಹಾನಿ:
ಜಗಳೂರು ತಾಲೂಕಿನದ್ಯಂತ ಸುರಿಯುತ್ತಿರುವ ಮಹಾ ಮಳೆಗೆ ಮೆಕ್ಕೆಜೋಳಕ್ಕೆ ಅಷ್ಟಾಗಿ ಬೆಳೆಹಾನಿಯಾಗಿಲ್ಲದಿದ್ದರೂ ಅನೇಕ ಹಳ್ಳಿಗಳ ತಕ್ಕೆ ಪ್ರದೇಶದ ಮೆಕ್ಕೆಜೋಳಗಳು ನೀರಿನಲ್ಲಿ ನಿಂತಿವೆ.
ಆದರೆ ನೆಲದೊಳಗಿನ ಫಸಲಾದ ಈರುಳ್ಳಿಗೆ ಕೊಳೆ ರೋಗ ಕಾಣಿಸಿಕೊಳ್ಳುತ್ತಿದ್ದು ರೈತರಲ್ಲಿ ಆತಂಕ ಶುರುವಾಗಿದೆ. ತಾಲೂಕಿನಲ್ಲಿ ಅಂದಾಜು 1000 ಹೆಕ್ಟೇರ್ ಗೂ ಹೆಚ್ಚು ಈರುಳ್ಳಿ ಬೆಳೆಯಲಾಗಿದ್ದು ಫಸಲು ನೀರಿನಲ್ಲಿ ಮುಳುಗಿರುವ ಕಾರಣ ಕೊಳೆ ರೋಗ ಭೀತಿ ಶುರುವಾಗಿದೆ.
ಈರುಳ್ಳಿ ಬೆಳೆಗೆ ಕೊಳೆ ರೋಗ
ಎರಡು ಎಕರೆ ಜಮೀನಿನಲ್ಲಿ ಈರುಳ್ಳಿ ಬಿತ್ತನೆ ಮಾಡಲಾಗಿದ್ದು ಈಗಾಗಲೇ ಒಂದು ವಾರದಿಂದ ಸುರಿಯುತ್ತಿರುವ ಮಹಾ ಮಳೆಗೆ ಈರುಳ್ಳಿ ಬೆಳೆ ನೀರಿನಲ್ಲಿ ಮುಳುಗಿದ್ದು ವೈರಸ್ ಬಂದಿದೆ. ಹೀಗಾಗಿ ಬೇರುಗಳಲ್ಲಿ ಕೊಳೆ ರೋಗ ಕಾಣಿಸಿಕೊಂಡಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರುತ್ತದೋ ಇಲ್ಲವೋ ಎನ್ನುವ ಆತಂಕ ಶುರುವಾಗಿದೆ ಎಂದು ನಿಬಗೂರು ಗ್ರಾಮದ ರೈತ ರೇವಣಸಿದ್ದಪ್ಪ ಪ್ರತಿಕ್ರಿಯೆ ನೀಡಿದರು.