suddivijayanews5/8/2024
ಸುದ್ದಿವಿಜಯ, ಜಗಳೂರು: ಇದೇ ಆ.7 ರಂದು ಬುಧವಾರ ಪಟ್ಟಣದ ಗುರು ಭವನದಲ್ಲಿ ಬೆಳಿಗ್ಗೆ 11:30ಕ್ಕೆ ವಿಕಲಚೇತನರ ಅಭಿವೃದ್ಧಿ ಸಂಘದ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯಾಧ್ಯಕ್ಷ ಮಹಾಂತೇಶ್ ಬ್ರಹ್ಮ ತಿಳಿಸಿದರು.
ತಾಲ್ಲೂಕಿನಲ್ಲಿ 3364 ವಿಶೇಷ ಚೇತನರಿದ್ದು, ಹಕ್ಕುಗಳು ಮತ್ತು ಸರಕಾರಿ ಸೌಲಭ್ಯಗಳನ್ನು ತಲುಪಿಸಲು ವಿಕಲಚೇತನರ ಅಭಿವೃದ್ಧಿ ಸಂಘ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದೆ ಎಂದರು.
ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಪಟ್ಟಣದ ಕೇಂದ್ರ ಭಾಗದಲ್ಲಿ ವಿಕಲಚೇತನರ ಭವನ ನಿರ್ಮಾಣ, ವಿಕಲಚೇತನರ ವಸತಿಯುತ ಶಾಲೆಯ ನಿರ್ಮಾಣ ಮತ್ತು ಗ್ರಾಮೀಣ ಪುನಶ್ಚೇತನ ಕಾರ್ಯಕರ್ತರ ಸೇವಾ ಭದ್ರತೆ ಹಾಗೂ ವಿಕಲಚೇತನ ಪೋ ಷಕರಿಗೆ ಆರ್ಥಿಕ ಭದ್ರತೆಯನ್ನು ಒದಗಿಸಲು ಶಾಸಕ ಬಿ.ದೇವೇಂದ್ರಪ್ಪನವರಿಗೆ ತಾಲೂಕಿನ 22 ಗ್ರಾಪಂ ಪುನಶ್ಚೇತನ ಕಾರ್ಯಕರ್ತರು, ವಿಶೇಷಚೇತನರಿಂದ ಮನವಿ ಸಲ್ಲಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾರಿಗೆ ವಿಶೇಷ ಚೇತನ ಸ್ನೇಹಿ ಪ್ರಶಸ್ತಿ, ಎರಡು ದಶಕಗಳಿಗಿಂತ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಬಿ.ಮಹೇಶ್ವರಪ್ಪ ರವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ,
ರಾಜಕೀಯ ನೇತಾರ ಕೆ.ಪಿ.ಪಾಲಯ್ಯನವರಿಗೆ ಯುವ ರತ್ನ ಪ್ರಶಸ್ತಿ, ಇನ್‍ಸ್ಪೆಕ್ಟರ್ ಎಂ.ಶ್ರೀನಿವಾಸ್‍ರಾವ್‍ಗೆ ಕಾನೂನು ಸುವ್ಯವಸ್ಥೆ ಸೇವಾ ರತ್ನ ಪ್ರಶಸ್ತಿ, ಆರೋಗ್ಯ ಸೇವೆ ಸಲ್ಲಿಸಿರುವ ಡಾ.ಟಿ.ಜಿ.ರವಿಕುಮಾರ್‍ಗೆ ಆರೋಗ್ಯ ಸೇವಾ ರತ್ನ ಪ್ರಶಸ್ತಿ,
ವಾರ್ತಾ ಇಲಾಖೆ ಅಧಿಕಾರಿ ಎ.ಸಿ.ತಿಪ್ಪೇಸ್ವಾಮಿಯವರಿಗೆ ಪತ್ರಿಕಾ ಸೇವಾ ರತ್ನ ಪ್ರಶಸ್ತಿಯನ್ನು ನೀಡಲಾಗುವುದು ಎಂದು ರಾಜ್ಯಾಧ್ಯಕ್ಷ ಮಹಾಂತೇಶ್ ಬ್ರಹ್ಮ ತಿಳಿಸಿದರು.