Suddivijayanews1/9/2024
ಸುದ್ದಿವಿಜಯ,ಜಗಳೂರು: ತಾಲೂಕಿನ 57 ಕೆರೆ ತುಂಬಿಸುವ ಯೋಜನೆಯಲ್ಲಿ ಈಗಾಗಲೇ 36 ಕೆರೆಗಳಿಗೆ ನೀರು ಹರಿಯುತ್ತಿದ್ದು ಮುಂದಿನ ದಿನಗಳಲ್ಲಿ ತರಳಬಾಳು ಶ್ರೀಗಳನ್ನು ಆಹ್ವಾನಿಸಲು ಮಾಜಿ ಶಾಸಕರು ಮತ್ತು ಎಂಜಿನಿಯರ್ ಗಳು ಸೇರಿದಂತೆ ಒಟ್ಟು ಹತ್ತು ಮಂದಿ ಸದಸ್ಯರ ಸಮಿತಿ ರಚಿಸಿ ಸಾಧಕ ಬಾಧಕಗಳನ್ನು ಚರ್ಚಿಸಿ ಶ್ರೀಗಳ ಒಪ್ಪಿಗೆ ಪಡೆದು ನಂತರ ಕಾರ್ಯಕ್ರಮಕ್ಕೆ ದಿನಾಂಕ ನಗದಿ ಪಡಿಸಲಾಗುವುದು ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಪಟ್ಟಣದ ತರಳಬಾಳು ಕೇಂದ್ರದಲ್ಲಿ ಭಾನುವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಕೆರೆಗಳಿಗೆ ಶೇ.70 ರಷ್ಟು ನೀರು ಹರಿದು ಬಂದಿದೆ. ಜೊತಗೆ ಸಾಕಷ್ಟು ಮಳೆಯಾಗಿದೆ.
ಇನ್ನೊಂದು ವಾರದಲ್ಲಿ ಇನ್ನು ನಾಲ್ಕು ಕೆರೆಗಳಿಗೆ ನೀರು ಹರಿಸುವ ಭರವಸೆಯನ್ನು ಎಂಜಿನಿಯರ್‍ಗಳು ನೀಡಿದ್ದಾರೆ.
ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳನ್ನು ಆಹ್ವಾನಿಸುವ ಮೊದಲು ಸಾಕಷ್ಟು ಪೂರ್ವ ತಯಾರಿ ಮಾಡಿಕೊಳ್ಳಬೇಕಿದೆ.
ಶ್ರೀಗಳನ್ನು ಯಾವ ಮಾರ್ಗದ ಮೂಲಕ ಕರೆ ತರಬೇಕು, ಕೆರೆಗಳಲ್ಲಿ ಪೂಜೆ ಮಾಡುವ ಜಾಗದಲ್ಲಿ ಜಾಲಿ ಗಿಡಗಳನ್ನು ಕತ್ತರಿಸುವ ಕೆಲಸ ಮತ್ತು ರಸ್ತೆ ಗುಂಡಿಗಳನ್ನು ಮುಚ್ಚಿಸುವ ಕಾರ್ಯ ಆಗಬೇಕಿದೆ.
ಕನಿಷ್ಠ ಒಂದು ದಿನಕ್ಕೆ 10 ಕೆರೆಯಂತೆ ನಾಲ್ಕು ದಿನಗಳ ಕಾಲ ಕೆರೆ ವೀಕ್ಷಣೆ ಮಾಡಲು ಸಮಯ ಬೇಕಾಗುತ್ತದೆ.
ಕಡೆಯ ದಿನ ಪಟ್ಟಣದ ಬಯಲು ರಂಗ ಮಂದಿರದಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
ಅಲ್ಲದೇ ದಾಸೋಹದ ವ್ಯವಸ್ಥೆ ಮಾಡಲು ಸಿದ್ದತೆ ಮಾಡಿಕೊಳ್ಳಬೇಕು.
ಇಷ್ಟೇಲ್ಲಾ ಕಾರ್ಯ ಮಾಡಬೇಕು ಎಂದರೆ ಒಂದು ಸಮಿತಿ ರಚನೆಯಾಗಬೇಕು.
ರಾಜಕೀಯ ಮರೆತು ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ ಮತ್ತು ಎಚ್.ಪಿ.ರಾಜೇಶ್ ಎಲ್ಲರೂ ಒಂದು ಗೂಡಿ ಸಲಹೆ ಪಡೆದು ಶ್ರೀಗಳನ್ನು ಭೇಟಿ ಮಾಡಿ ಚರ್ಚಿಸಿದ ನಂತರ ಶ್ರೀಗಳು ಸಮಯ ಕೊಟ್ಟ ನಂತರ ಕರೆ ವೀಕ್ಷಣೆಗೆ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ಶ್ರೀಗಳು ತಾಲೂಕಿನ ಎಲ್ಲ ಕೆರೆಗಳಿಗೆ ಭೇಟಿ ನೀಡುತ್ತಿರುವುದು ಸಂತೋಷದ ವಿಷಯ. ನಾನು ಶಾಸಕನಾಗಿದ್ದ ಅವದಿಯಲ್ಲಿ ಯೋಜನೆ ಜಾರಿಯಾಗಿತ್ತು.
ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಹಾಗೂ ಎಸ್.ವಿ.ರಾಮಚಂದ್ರ ಮತ್ತು ಈಗಿನ ಶಾಸಕ ಬಿ.ದೇವೇಂದ್ರಪ್ಪ ಕೊಡುಗೆ ಇದೆ.
ಕೆರೆ ತುಂಬಿಸುವ ಕಾರ್ಯದಲ್ಲಿ ಶ್ರೀಗಳು ಆಧುನಿಕ ಭಗೀರಥರು. ಇನ್ನು 20ಕ್ಕೂ ಹೆಚ್ಚು ಕೆರೆಗಳಿಗೆ ನೀರು ಹರಿಸುವ ಕಾರ್ಯ ಬಾಕಿ ಇದೆ.
ರಂಗಯ್ಯನದುರ್ಗ ಕೊಂಡುಕುರಿ ಅರಣ್ಯ ವ್ಯಾಪ್ತಿಯ ಕೆರೆಗಳಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಕ್ರಾಸಿಂಗ್ ನಂತರದ ಕೆರೆಗಳಿಗೆ ಕಾನೂನು ತೊಡಕಿರುವ ಕಾರಣ ಕಾಮಗಾರಿ ಪೂರ್ಣಗೊಳಿಸುವ ಕಾರ್ಯ ಬಾಕಿ ಇದ್ದು ತಕ್ಷಣ ಎಂಜಿನಿಯರ್‍ಗಳು ಕ್ರಮ ಕೈಗೊಂಡು ಕಾಮಗಾರಿ ಮುಗಿಸಬೇಕು ಎಂದರು.
ಭರಮಸಾಗರ ಕೆರೆ ಸಮಿತಿ ಅಧ್ಯಕ್ಷ ಚೌಲಿಹಳ್ಳಿ ಶಶಿಪಾಟೀಲ್ ಮಾತನಾಡಿ, ಶ್ರೀಗಳು ಆಗಮಕ್ಕೆ ಕೆರೆಯಿಂದ ಕೆರೆಗೆ ರೂಟ್ ಮ್ಯಾಪ್ ಸಿದ್ದಪಡಿಸಬೇಕು.
ದಿನಕ್ಕೆ ಎಂಟರಿಂದ ಹತ್ತು ಕೆರೆಗಳನ್ನು ವೀಕ್ಷಣೆಗೆ ಮಾಡಿಸಲು ಯೋಜನೆ ಹಾಕಿಕೊಳ್ಳಬೇಕು.ಶೀಘ್ರವೇ ಸಮಿತಿ ರಚಿಸಬೇಕು.
ಸೆ.24 ರಂದು ಹಿರಿಯ ಶ್ರೀಗಳ ಶ್ರದ್ಧಾಂಜಲಿ ಸಮಾರಂಭವಿದೆ. ಅದಕ್ಕೂ ಮುಂಚೆ ಶ್ರೀಗಳ ಕೆರೆ ವೀಕ್ಷಣೆಗೆ ಆಗಮಿಸಬೇಕೋ ಅಥವಾ ಮುಗಿದ ನಂತರ ಆಗಮಿಸಬೇಕೋ ಎಂಬುದನ್ನು ಶಾಸಕರು ಸಮಿತಿ ಜೊತೆ ಚರ್ಚಿಸಿ ನಂತರ ತೀರ್ಮಾನ ಮಾಡಿಕೊಂಡರೆ ಉತ್ತಮ ಎಂದು ಸಲಹೆ ನೀಡಿದರು.
ಸಭೆಯಲ್ಲಿ ತರಳಬಾಳು ಮಠದ ಸಮಿತಿ ಸದಸ್ಯ ನಾಗರಾಜ್, ನಿವೃತ್ತ ಶಿಕ್ಷಕ ಓಂಕಾರಪ್ಪ, ನೀರಾವರಿ ನಿಗದಮ ಎಂಜಿನಿಯರ್ ಶ್ರೀಧರ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಲೇರುದ್ರೇಶ್,
ಚಂದ್ರನಾಯ್ಕ್, ಸುರೇಶ್‍ಗೌಡ್ರು, ಎಂ.ಎಸ್.ಪಾಟೀಲ್, ಕೆಪಿಸಿಸಿ ಎಸ್‍ಟಿ ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ, ಶಿವನಗೌಡ್ರು, ಕೆಚ್ಚೇನಹಳ್ಳಿ ದೀಪಕ್ ಪಟೇಲ್, ಎನ್‍ಎಸ್.ರಾಜಣ್ಣ ಸೇರಿದಂತೆ ಅನೇಕರು ಇದ್ದರು.