ಸುದ್ದಿವಿಜಯ, (ಸಿರಿಗೆರೆ) ಜಗಳೂರು: ದಾವಣಗೆರೆ-ಚಿತ್ರದುರ್ಗ ಜಿಲ್ಲೆಗಳ ಏತ ನೀರಾವರಿ ಯೋಜನೆಗಳನ್ನು ಪ್ರಸ್ತುತ ವರ್ಷದ ಮಳೆಗಾಲ ಮುಕ್ತಾಯವಾಗುವುದರ ಒಳಗೆ ಕಾಮಗಾರಿ ಮುಗಿಸಿ ಕೆರೆಗಳಿಗೆ ನೀರು ಹರಿಸಿ ಎಂದು ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಮತ್ತು ಎಂಜಿಯರ್‍ಗಳಿಗೆ ಸೂಚನೆ ನೀಡಿದರು.
ಸಿರಿಗೆರೆಯ ಶ್ರೀಮಠದ ಗುರುಶಾಂತೇಶ್ವರ ದಾಸೋಹ ಸಭಾಂಗಣದಲ್ಲಿ ಶುಕ್ರವಾರ ಅವಳಿ ಜಿಲ್ಲೆಗಳ ಏತನೀರಾವರಿ ಯೋಜನೆಗಳ ಸಾಧಕ ಬಾಧಕಗಳ ಕುರಿತು ಸಂಸದ ಜಿಎಂ ಸಿದ್ದೇಶ್ವರ್ ಶಾಸಕರಾದ ಬಿ.ದೇವೇಂದ್ರಪ್ಪ, ಬಸವರಾಜ್ ಶಿವಂಗಾ, ಬಸವಂತಪ್ಪ ಹಾಗೂ ರಾಜ್ಯ ನೀರಾವರಿ ನಿಗಮದ ಎಂಡಿ ಮಲ್ಲಿಕಾರ್ಜುನ ಗುಂಗೆ ನೇತೃತ್ವದಲ್ಲಿ ಅಧಿಕಾರಿಗಳು, ಗುತ್ತಿಗೆದಾರ ಕಂಪನಿಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಸರಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಬಯಲು ಸೀಮೆಯ ಜಗಳೂರು ಕ್ಷೇತ್ರದ 57 ಕೆರೆ, ಭರಮಸಾಗರದ 43 ಕೆರೆಗಳು ಮತ್ತು ಸಾಸ್ವೇಹಳ್ಳಿಯ 121 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಆಮೆಗತಿಯಲ್ಲಿ ಸಾಗುತ್ತಿದ್ದ ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ವೇಗ ಪಡೆದುಕೊಂಡಿದ್ದು ಶೇ.80ರಷ್ಟು ಮುಕ್ತಾಯವಾಗಿದೆ. ಆದರೆ ಜಗಳೂರು ಏತ ನೀರಾವರಿ ಯೋಜನೆ ಕುಂಟುತ್ತಾ ಸಾಗುತ್ತಿದೆ. ಶೇ.80ರಷ್ಟು ಕಾಮಗಾರಿ ಮುಕ್ತಾಯವಾಗಿದ್ದರೂ ನಿರೀಕ್ಷೆಯಂತೆ ಕಾಮಗಾರಿ ಮುಕ್ತಾಯವಾಗಿಲ್ಲ.
ಭರಮಸಾಗರ ಯೋಜನೆಯ 43 ಕೆರೆ ತುಂಬಿಸುವ ಕಾಮಗಾರಿ ಮುಗಿದಿದೆ ಆದರೆ ಭರಮಣ್ಣನಾಯಕನ ಕೆರೆ ಏರಿ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಶ್ರೀಗಳು ಎಂಜಿಯರ್‍ಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಎಂಡಿ ಮಲ್ಲಿಕಾರ್ಜುನ ಗುಂಗೆ ಮಾತನಾಡಿ, ಸ್ವಾಮೀಜಿಗಳು ಏತ ನೀರಾವರಿ ಯೋಜನೆಗಳ ಪೂರ್ಣಗೊಳಿಸಲು ತಮ್ಮ ಹಿಡಿತಕ್ಕೆ ತೆಗೆದುಕೊಂಡ ಮೇಲೆ ಕ್ಲಿಸ್ಟಕರ ಕಾಮಗಾರಿಗಳು ವೇಗ ಪಡೆದುಕೊಂಡಿವೆ. ರೈತರ ದಾವೆಗಳು ಕೋರ್ಟ್ ನಲ್ಲಿರುವುದರಿಂದ ಕಾಮಗಾರಿ ಸ್ವಲ್ಪ ನಿಧಾನವಾಗುತ್ತಿದೆ.
ಉಳಿದಂತೆ ಸಣ್ಣಪುಟ್ಟ ಕಾಮಗಾರಿಗಳು ಮುಕ್ತಾಯವಾಗಲು ಬಹಳ ಸಮಯವೇನು ಬೇಕಾಗಿಲ್ಲ. ಭೂಸ್ವಾಧೀನ ಪ್ರಕ್ರಿಯೆ ಮತ್ತು ಬೆಳೆ ಪರಿಹಾರ ಎರಡು ಪಟ್ಟು ನೀಡಿ ಕಾಮಗಾರಿ ಮುಕ್ತಾಯಕ್ಕೆ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ ಎಂದರು.
ಸಂಸದ ಜಿಎಂ ಸಿದ್ದೇಶ್ವರ ಮಾತನಾಡಿ, ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಬಹುದೊಡ್ಡ ಯೋಜನೆಯಾಗಿದ್ದು ಶೇ.80ರಷ್ಟು ಮುಕ್ತಾಯವಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಸಿದ್ದೇಶ್ವರ ದೇವಸ್ಥಾನ, ಶಾಂತಿಸಾಗರ ಬಳಿ ಕಾಮಗಾರಿ ನಿಧಾನಗತಿ ಸಾಗುತ್ತಿದೆ.
ಪೈಪ್‍ಲೈನ್ ಅಳವಡಿಕೆ ಮತ್ತು ಮೋಟಾರ್ ಅಳವಡಿಕೆ ಕಾರ್ಯ ನಿರೀಕ್ಷೆಯಂತೆ ನಡೆಯುತ್ತಿಲ್ಲ. ಎಷ್ಟು ದಿನಗಳ ಒಳಗೆ ಕಾಮಗಾರಿ ಮುಕ್ತಾಯ ಮಾಡುತ್ತೀರಾ ಹೇಳಿ ಎಂದು ಎಂಜಿನಿಯರ್ ಮತ್ತು ಗುತ್ತಿಗೆದಾರರನ್ನು ಪ್ರಶ್ನಿಸಿದರು. ಆಗ ಎಂಜಿಯರ್ ಹಾಗೂ ಗುತ್ತಿಗೆದಾರರು ಇನ್ನು ಜುಲೈ 10ರ ಒಳಗೆ ಮುಕ್ತಾಯಗೊಳಿಸುತ್ತೇವೆ ಎಂದು ಉತ್ತರಿಸಿದರು.