ಜಗಳೂರು:ಸಂಪನ್ಮೂಲ ಸದ್ಬಳಕೆಯಿಂದ ಪರಿಸರ ಸಂಕ್ಷಣೆ

Suddivijaya
Suddivijaya June 5, 2023
Updated 2023/06/05 at 2:03 PM

ಸುದ್ದಿವಿಜಯ,ಜಗಳೂರು:ಕಾಡು, ವನ್ಯ ಜೀವಿಗಳಷ್ಟೇ ಪರಿಸರವಲ್ಲಾ,  ನಮ್ಮ ಸುತ್ತಮುತ್ತಲಿನ  ನಿರ್ಮಿತವಾದ ಪ್ರತಿ ಅಂಶವು ಕೂಡ  ಪರಿಸರದ ಭಾಗವಾಗಿದೆ ಎಂದು ಶಾಲಾ ಮುಖ್ಯ ಶಿಕ್ಷಕ  ಕೆ.ಎಸ್ ರವಿಕುಮಾರ್ ಅಭಿಪ್ರಾಯ ಪಟ್ಟರು.

ತಾಲೂಕಿನ ಗುರುಸಿದ್ದನಗೌಡ ನಗರದ  ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ವಿಕಾಸ್ ನಗರ ಮತ್ತು ಗ್ರಾಮೀಣಾಭಿವೃದ್ದಿ ಸ್ವಯಂ ಸೇವಾ ಸಂಸ್ಥೆ ವತಿಯಿಂದ ವಿದ್ಯಾರ್ಥಿಗಳಿಗೆ  ಉಚಿತ ನೋಟ್‌ಬುಕ್, ಪೆನ್ನು ಹಾಗೂ ಕಲಿಕ ಪರಿಕರಗಳನ್ನು ವಿತರಿಸಿ ಮಾತನಾಡಿದರು.

ಭೂಮಿಯಲ್ಲಿ ವಾಸಿಸುತ್ತಿರುವ ನಾವು ಸಂಪನ್ಮೂಲದ ಬಳಕೆಯನ್ನು ಸರಿಯಾಗಿ ಮಾಡಿಕೊಳ್ಳುವುದರ ಜತೆಗೆ ಅದನ್ನು ಉಳಿಸಿ ಬೆಳಸಬೇಕು.

ಇತ್ತೀಚಿನ ವರ್ಷಗಳಲ್ಲಿ ಪರಿಸರವು ಅತ್ಯಂತ ಕಲುಷಿತಗೊಂಡಿದೆ. ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ವಿಷಕಾರಿ ಅಂಶಗಳಿಂದ ತುಂಬಿದೆ.

ನಮ್ಮ ಅನುಕೂಲತೆಗಳಿಗಾಗಿ ಪರಿಸರವನ್ನು ನಾವು ಹಾಳು ಮಾಡುತ್ತಿದ್ದೇವೆ. ಇದರಿಂದಾಗಿ ಮಣ್ಣು, ಗಾಳಿ, ನೀರು ಹೀಗೆ ಸಂಪೂರ್ಣ ಪರಿಸರ ನಾಶವಾಗುತ್ತಿದೆ.

ಜೊತೆಗೆ ಹವಾಮಾನ ವೈಪರಿತ್ಯದಿಂದಾಗಿ ಆರೋಗ್ಯದ ಸಮಸ್ಯೆಗಳು ಸಹ ಗಣನೀಯವಾಗಿ ಹೆಚ್ಚಳವಾಗಿದೆ. ಇನ್ನಾದರೂ ಜಾಗೃತಿ ವಹಿಸಿ ನಮ್ಮ ಪರಿಸರವನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.

ವಿಶ್ವ ಪರಿಸರ ದಿನವನ್ನು ಆಚರಿಸುವುದರಿಂದ ನಮ್ಮ ಪ್ರಕೃತಿಗೆ ಹಲವಾರು ಉಪಯೋಗಗಳಿವೆ. ಪರಿಸರಕ್ಕೆ ಸಂಬಧಿಸಿದಂತೆ ಜನತೆಯಲ್ಲಿ ಜಾಗೃತಿ ಮೂಡಿಸುವುದು, ಪರಿಸರ ಸ್ನೇಹಿ ಅಭಿವೃದ್ಧಿ ಪಡಿಸಲು ಅಭಿಯಾನ ಆರಂಭಿಸುವುದು.

ಗಿಡ, ಮರಗಳನ್ನು ಬೆಳೆಸುವಂತೆ ಜನರನ್ನು ಪ್ರೇರೆಪಿಸುವುದು. ಪರಿಸರವನ್ನು ನಾಶ ಮಾಡದಂತೆ ಜಾಗೃತಿ ಮೂಡಿಸುವುದು. ಪರಿಸರ ಪ್ರತಿಯೊಂದು ಜೀವಿಗೆ ಎಷ್ಟು ಮುಖ್ಯ ಎನ್ನುವುದರ ಬಗ್ಗೆ ಅರಿವು ಮೂಡಿಸುವುದು ಈ ದಿನದ ಆಚರಣೆಯ ಹಿಂದಿರುವ ಮುಖ್ಯ ಉದ್ದೇಶವಾಗಿದೆ ಎಂದರು.

ಸಂಸ್ಥೆಯ ಸಮಾಜ ಸೇವಾ ಕಾರ್ಯಕರ್ತೆ ಮಹಾಲಕ್ಷ್ಮಿ ಮಾತನಾಡಿ, 1972 ರಲ್ಲಿ ವಿಶ್ವಸಂಸ್ಥೆಯ ಮಾನವ ಪರಿಸರದ ಸ್ಟಾಕ್ ಹೋಮ್ ಸಮ್ಮೇಳನದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸುವುದಾಗಿ ಘೋಷಣೆ ಮಾಡಿತು. ಆದ್ದರಿಂದ  ಯುಎನ್‌ಇಪಿ  ನೇತೃತ್ವದಲ್ಲಿ ಪ್ರತಿ ವರ್ಷ ಜೂನ್ 5ರಂದು ವಿಶ್ವ ಪರಿಸರ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.

ಮೊದಲ ಬಾರಿಗೆ 1974ರಲ್ಲಿ ಯುನೈಟೆಡ್ ಸ್ಟೇಟ್ಸ್ ನಲ್ಲಿ ಈ ದಿನವನ್ನು ಆಚರಿಸಲಾಯಿತು.

ಇದು ಪರಿಸರ ಸಂರಕ್ಷಣೆಗಾಗಿ ಜಾಗೃತಿ ಮೂಡಿಸಲು ಮತ್ತು ಪರಿಸರ ರಕ್ಷಣೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದರು.

ಈ ಸಂದರ್ಭದಲ್ಲಿ ಶಿಕ್ಷಕಿ ಸಮೀರಾಖಾನಂ, ಅಂಗನವಾಡಿ ಮೇಲ್ವಿಚಾರಕಿ ಮುತ್ತಮ್ಮ, ಅಂಗನವಾಡಿ ಕಾರ್ಯಕರ್ತೆ ಅರ್ಚನಾ, ಎಸ್‌ಡಿಎಂಸಿ ಉಪಾಧ್ಯಕ್ಷೆ ಜ್ಯೋತಿ,  ಸದಸ್ಯರಾದ ಕಾಟಲಿಂಗಪ್ಪ, ಸಿದ್ದೇಶ್ ರೈತ ಮುಖಂಡ ಈರಪ್ಪ ಉಪಸ್ಥಿತರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!