ಸುದ್ದಿವಿಜಯ, ಜಗಳೂರು: ಸಂಘ ಸಂಸ್ಥೆಗಳು ಮತ್ತು ಸರಕಾರಗಳು ಉತ್ತಮ ಪರಿಸರ ನಿರ್ಮಾಣದ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಗ್ರಾ.ಪಂ ಅಧ್ಯಕ್ಷ ಸಿದ್ದಣ್ಣ ತಿಳಿಸಿದರು.
ತಾಲೂಕಿನ ಗುರುಸಿದ್ದನಗೌಡ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯಿತಿ ಹಾಗೂ ಶಾಲಾ ಆಡಳಿತದಿಂದ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಆಯೋಜಿಸಿದ್ದ ಹಸಿರೀಕರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪರಿಸರ ಸಂರಕ್ಷಣೆಯ ಕಾಳಜಿ ವಿದ್ಯಾವಂತ ಜನತೆಯಲ್ಲಿ ಕಾಣಬಹುದಾದರೂ ಅದು ಸಾಮಾಜಿಕ ತಾಣಗಳಿಗೆ ಮಾತ್ರ ಸೀಮಿತವಾಗಿದೆ. ಜಾಗತಿಕ ತಾಪಮಾನ ಮತ್ತು ಪರಿಸರ ಸಮತೋಲನೆಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಹಸಿರೀಕರಣ ಕುರಿತು ಜನಜಾಗೃತಿಯ ಅವಶ್ಯಕತೆಯಿದೆ ಎಂದರು.
ಹಸಿರು ಪರಿಸರ ಮಕ್ಕಳು ಸಂತಸದಿಂದ ಕಲಿಯಲು ಸಹಕಾರಿಯಾಗಿದೆ. ಶಿಕ್ಷಕರ ಪರಿಶ್ರಮದಿಂದ ಗುರುಸಿದ್ದನಗೌಡ ನಗರ ಶಾಲೆ ಹಸಿರಿನಿಂದ ಕಂಗೊಳಿಸುತ್ತಿದ್ದು, ಮಕ್ಕಳ ಆನಂದದಾಯಕ ಕಲಿಕೆಗೆ ಇಲ್ಲಿನ ವಾತಾವರಣ ಪೂರಕವಾಗಿದೆ. ಶಾಲೆಗೆ ಅಗತ್ಯ ಸೌಲಭ್ಯ ಒದಗಿಸಿ ಮಾದರಿ ಶಾಲೆ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿ ವತಿಯಿಂದ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಎಸ್‍ಡಿಎಂಸಿ ಅಧ್ಯಕ್ಷ ಸಂತೋಷ್ ಮಾತನಾಡಿ, ಈ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಹೆಚ್ಚುತ್ತಿದ್ದು ಇದಕ್ಕೆ ಶಿಕ್ಷಕರ ಪರಿಶ್ರಮವೇ ಕಾರಣ ಎಂದರು. ಈ ವೇಳೆ ತೆಂಗು,ಬೇವು,ಸಿಲ್ವರ್ ಸೇರಿದಂತೆ ಹಲವು ಸಸಿಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ವೀರೇಶ್, ಶಿವಲಿಂಗಮ್ಮ, ಚಿತ್ತಪ್ಪ, ಕಮಲ ದೊಡ್ಡೀರಪ್ಪ, ಶಿವಮ್ಮ, ಮುಖ್ಯ ಶಿಕ್ಷಕ ಕೆ.ಎಸ್. ರವಿಕುಮಾರ್, ಶಾಲಾ ಶಿಕ್ಷಕಿÀ ಸಮೀರಾಖಾನಂ, ಎಸ್‍ಡಿಎಂಸಿ ಸದಸ್ಯೆ ನೀಲಮ್ಮ, ಅಂಗನವಾಡಿ ಕಾರ್ಯಕರ್ತೆ ಅರ್ಚನಾ, ಬಾಲಮ್ಮ, ಅಡುಗೆ ಸಿಬ್ಬಂದಿ ರತ್ನಮ್ಮ, ಮೀನಾಕ್ಷಿ ಹಾಜರಿದ್ದರು.