suddivijayanews24/08/2024
ಸುದ್ದಿವಿಜಯ, ಜಗಳೂರು: ಶಾಸಕ ಬಿ.ದೇವೇಂದ್ರಪ್ಪ ಅಧ್ಯಕ್ಷತೆಯಲ್ಲಿ ಶನಿವಾರ ತಾಪಂ ಸಭಾಂಗಣದಲ್ಲಿ ನಡೆದ 2024-25ನೇ ಸಾಲಿನ ಮೊದಲ ತ್ರೈಮಾಸಿಕ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಶಾಸಕರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.
ಕೆರೆ ಒತ್ತುವರಿ ತೆರವಿಗೆ ಸೂಚನೆ:
ಉತ್ತಮ ಮಳೆಯಾಗುತ್ತಿದೆ. ಆದರೆ ತಾಲೂಕಿನಾದ್ಯಂತ ಇರುವ ಕೆರೆಗಳಲ್ಲಿ ಅನೇಕರು ಸಾಗುವಳಿ ಮಾಡುತ್ತಿದ್ದಾರೆ. ನೀವೇನು ಮಡುತ್ತಿದ್ದೀರಿ ಎಂದು ಸಣ್ಣ ನೀರಾವರಿ ಇಲಾಖೆ ಎಇಇ ಪ್ರವೀಣ್, ಎಇ ರಾಘವೇಂದ್ರ ಅವರಿಗೆ ಪ್ರಶ್ನಿಸಿದರು.
ಮುಂದಿನ ವರ್ಷದಿಂದ ಜಗಳೂರು ಸೇರಿದಂತೆ ಯಾವುದೇ ಕೆರೆಯಲ್ಲೂ ರೈತರು ಬಿತ್ತನೆ ಮಾಡಬಾರದು ಹಾಗೂ ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳದಂತೆ ನೋಡಿಕೊಳ್ಳಿ ಎಂದು ಸಣ್ಣನೀರಾವರಿ ಮತ್ತು ಜಿಪಂ ಇಲಾಖೆಗೆ ವ್ಯಾಪ್ತಿಗೆ ಬರುವ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಿದ್ದಿಹಳ್ಳಿ ಬಳಿ 4 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬ್ರಿಡ್ಜ್ ಕಂ ಬ್ಯಾರೇಜ್ ನಲ್ಲಿ ನೀರಿನ ಸಂಗ್ರಹ ಮೊದಲಿಗಿಂತಲೂ ಕಡಿಮೆಯಾಗುತ್ತಿದೆ ಎಂದು ಗ್ರಾಮಸ್ಥರು ನನ್ನ ಗಮನಕ್ಕೆ ತಂದಿದಾರೆ. ತಕ್ಷಣವೇ ಅಲ್ಲಿಗೆ ಹೋಗಿ ಏನು ಮಾಡಬೇಕು ಎಂಬುದರನ್ನು ಅವಲೋಕಿಸಿ ವರದಿ ನೀಡಿ ಎಂದರು.
ಪೊಲೀಸ್ ಇಲಾಖೆಗೆ ಚಾಟಿ:
ಈಚೆಗೆ ಪಟ್ಟಣದಲ್ಲಿ ನಡೆದ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದರು. ಘಟನೆ ನಡೆದು ಎಷ್ಟು ಹೊತ್ತಾದರೂ ಒಬ್ಬರೇ ಒಬ್ಬ ಪೊಲೀಸ್ ಸಿಬ್ಬಂದಿ ಬಂದಿಲ್ಲ. ಬ್ಯಾರಿಕೇಡ್ ಹಾಕಲಿಲ್ಲ. ನಿರ್ವಹಣೆ ಮಾಡುವಲ್ಲಿ ಪೊಲೀಸ್ ಇಲಾಖೆ ವಿಫಲವಾಯಿತು.
ಪಿಐ ಡಿ.ಶ್ರೀನಿವಾಸ್ ರಾವ್ ಅರ್ಧ ಗಂಟೆಯಾದರೂ ಸ್ಥಳಕ್ಕೆ ಬರಲೇಯಿಲ್ಲ. ನಾನು ಮತ್ತು ನಿವೃತ್ತ ಡಿವೈಎಸ್‍ಪಿ ಕಲ್ಲೇಶಪ್ಪ ಇಬ್ಬರೂ ಖುದ್ದು ನಿಂತು ನಿಯಂತ್ರಿಸಬೇಕಾಯಿತು.
ಪೊಲೀಸ್ ಇಲಾಖೆಯ ಅವ್ಯವಸ್ಥೆಯಿಂದ ಬೇಸರವಾಯಿತು. ನಿಮ್ಮ ಇಲಾಖೆಗೆ ನನ್ನ ಧಿಕ್ಕಾರ ಎಂದು ಸಭೆಯಲ್ಲಿ ಛೀಮಾರಿ ಹಾಕಿದರು.
ರಸ್ತೆ ಗುಂಡಿಗಳಿಗೆ ಆಕ್ರೋಶ: ರಸ್ತೆ ಅಗಲೀಕರಣವಾಗಿದ್ದರೆ ಅಪಘಾತವಾಗುತ್ತಿರಲಿಲ್ಲ. ಇನ್ನು ಎಷ್ಟು ಪ್ರಾಣಗಳನ್ನು ಬಲಿ ಪಡೆಯಬೇಕು ಎಂದಿದ್ದೀರಿ. ನೀವು ಯಾಕಿಷ್ಟು ವಿಳಂಭ ಮಾಡುತ್ತಿದ್ದೀರಿ. ಇಲ್ಲ ಸಲ್ಲದ ಕಾರಣಗಳನ್ನು ಹೇಳಬೇಡಿ.
ರಸ್ತೆ ಅಗಲೀಕರಣಕ್ಕೆ ಮಾರ್ಕ್ ಮಾಡಿಕೊಳ್ಳಲು ಸಿದ್ದತೆ ಮಾಡಿಕೊಳ್ಳಿ ಎಂದು PWD ಎಇಇ ನಾಗರಾಜ್ ಅವರಿಗೆ ಸೂಚನೆ ನೀಡಿದರು.
ನಿಮ್ಮ ಇಲಾಖೆಯಲ್ಲಿ ನೀವೇ ಬಾಸ್:
ನಿಮ್ಮ ವ್ಯಾಪ್ತಿಯಲ್ಲಿ ಬರುವ ಕೆಲಸವನ್ನು ನೀವೇ ಮಾಡಬೇಕು. ಕೆರೆ ಒತ್ತುವರಿ, ವಿಂಡ್ ಫ್ಯಾನ್ ಕಂಪನಿಗಳಿಂದ ಕೆರೆಗಳಲ್ಲಿ ಅಕ್ರಮವಾಗಿ ವಿದ್ಯುತ್ ಕಂಬ ಅಳವಡಿಕೆ ಹೀಗೆ ಹತ್ತು ಹಲವು ಸಮಸ್ಯೆಗಳಿಗೆ ತಹಶೀಲ್ದಾರ್ ಕಡೆ ಬೆಟ್ಟು ತೋರಿಸಬೇಡಿ.
ನಿಮ್ಮ ವ್ಯಾಪ್ತಿಯಲ್ಲಿ ನೀವೇ ಬಾಸ್ ರೀತಿ ಕೆಲಸ ಮಾಡಿ. ನಿಮ್ಮ ವ್ಯಾಪ್ತಿ ಮೀರಿದರೆ ತಹಶೀಲ್ದಾರ್ ಗಮನಕ್ಕೆ ತನ್ನಿ, ಇಲ್ಲ ನನ್ನ ಗಮನಕ್ಕೆ ತನ್ನಿ ಎಂದು ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಫಲಿತಾಂಶ ಕುಸಿತಕ್ಕೆ ಬೇಸರ:
ಸರಕಾರಿ ಶಾಲೆಗಳ ಸ್ಥಿತಿ ಗಂಭೀರವಾಗಿವೆ. ಬಿಇಒ ಏನು ಮಾಡುತ್ತಿದ್ದೀರಿ? ಕಳೆದ ಬಾರಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ಕುಂಠಿತವಾಗಿದೆ. ಈ ಬಾರಿ ಏನು ಕ್ರಮ ಕೈಗೊಂಡಿದ್ದೀರಿ ಎಂದು ಶಾಸಕರು ಪ್ರಶ್ನಿಸಿದರು.
ಶಾಲಾ ಕೊಠಡಿಗಳ ದುರಸ್ತಿಗಳ ಬಗ್ಗೆ ಜಿಪಂಗೆ ಮಾಹಿತಿ ನೀಡಿದ್ದೇವೆ. ಫಲಿತಾಂಶ ಕುಸಿಯಲು ಸಿಬ್ಬಂದಿ ಕೊರತೆ ಕಾರಣ ಎಂದು ಬಿಇಒ ಈ.ಹಾಲಮೂರ್ತಿ ಹೇಳಿದಾಗ. ಸಿಬ್ಬಂದಿ ಕೊಟ್ಟರೆ ಶೇ.95ರಷ್ಟು ಫಲಿತಾಂಶ ಕೊಡುತ್ತೀರಾ ಎಂದು ಶಾಸಕರು ಬಿಇಒಗೆ ಪ್ರಶ್ನಿಸಿದರು ಆಗ ಶಿಕ್ಷಣಾಧಿಕಾರಿ ತಬ್ಬಿಬ್ಬಾದರು.
ಇರುವ ಸಿಬ್ಬಂದಿಗಳಲ್ಲೇ ಉತ್ತಮ ಪಾಠ ಪ್ರವಚನ ಮಾಡಬಹುದು. ಇಚ್ಛಾಶಕ್ತಿ ಇಟ್ಟುಕೊಂಡು ನಿಮ್ಮ ಶಿಕ್ಷಕರಿಗೆ ಪಾಠ ಮಾಡಲು ಹೇಳಿ ಎಂದು ಸೂಚನೆ ನೀಡಿದರು.
ಪರಿಹಾರ ಕೊಡಲು ಮಿನಾಮೇಷ:
ಅರಣ್ಯ ಇಲಾಖೆ ಉತ್ತಮ ಕಾರ್ಯನಿರ್ವಹಿಸಬೇಕು. ಕರಡಿ ದಾಳಿಯಾಗಿ ವ್ಯಕ್ತಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಪರಿಹಾರ ಕೊಡಲು ಮಿನಾಮೇಷ ಎಣಿಸುತ್ತಿದ್ದೀರಿ. ಕಾಡಂಚಿನ ಪ್ರದೇಶದಲ್ಲಿ ಕರಡಿ, ಹಂದಿ ದಾಳಿ ಮಾಡಿ ಮೆಕ್ಕೆಜೋಳ ಸೇರಿ ವಿವಿಧ ಬೆಳೆಗಳು ಹಾನಿಯಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ಓದಿದ್ದೇನೆ.
ಬೆಳೆ ನಷ್ಟವಾದ ರೈತರಿಗೆ ಪರಿಹಾರ ಕೊಡಿ ಎಂದು ಆರ್‍ಎಫ್‍ಒ ಶ್ರೀನಿವಾಸ್, ಜ್ಯೋತಿ ಮೆಣಸಿನಕಾಯಿ ಅವರಿಗೆ ಸೂಚನೆ ನೀಡಿದರು.
ಪಿಡಿಒಗಳಿಗೆ ಕ್ಲಾಸ್: ಪಿಡಿಒಗಳೇ ನಿಮ್ಮ ಮೇಲೆ ಸಾಕಷ್ಟು ದೂರುಗಳು ಬಂದಿವೆ. ‘ಪಿಡಿಒ ಕೊಟ್ರೋಶ್ ಕೆಲಸ ಮಾಡಪ್ಪ ಅಂದ್ರೆ ಶಾಸಕರ ಹೆಸರು ಬರೆದಿಟ್ಟು ವಿಷ ಕುಡಿದು ಸಾಯುತ್ತೇನೆ’ ಎಂದು ಬೆದರಿಕೆ ಹಾಕಿ ಮಾತನಾಡಿರುವುದು ನನ್ನ ಗಮನಕ್ಕೆ ಬಂದಿದೆ.
ಇಲ್ಲಿ ಬದುಕುವ ಹಕ್ಕಿದೆ ಸಾಯುವ ಹಕ್ಕಿಲ್ಲ. ‘ನನ್ನ ಹೆಸರು ಬರೆದಿಟ್ಟು ಸಾಯ್ತಿನಿ ಅಂದ್ರೆ ಏನ್ ಅರ್ಥ. ಕೆಲಸ ಮಾಡಿ ಅಂದ್ರೆ ಈ ರೀತಿ ಹೆದರಿಸಿದರೆ ನಾನು ಹೆದರಲ್ಲ’. ಪ್ರೀತಿ, ವಿಶ್ವಾಸದಿಂದ ಕೆಲಸ ತೆಗೆಯುತ್ತೇನೆ. ದ್ವೇಷದಿಂದಲ್ಲ. ಗಂಭೀರವಾಗಿ ಕೆಲಸ ಮಾಡಿ ಎಂದು ಎಲ್ಲ ಪಿಡಿಒಗಳಿಗೆ ಶಾಸಕರು ಸೂಚನೆ ನೀಡಿದರು.
ಅಧಿಕಾರಿಗಳಿಗೆ ಶ್ಲಾಘನೆ:
ಉತ್ತಮವಾಗಿ ಕಾರ್ಯನಿರ್ವಹಿಸಿದ ಕೃಷಿ ಇಲಾಖೆ ಎಡಿಎ ಶ್ವೇತಾ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪ್ರಭುಶಂಕರ್, ಪಶುಸಂಗೋಪನಾ ಇಲಾಖೆ ಲಿಂಗರಾಜು,
ಸಿಡಿಪಿಒ ಬೀರೇಂದ್ರಕುಮಾರ್, ಬೆಸ್ಕಾಂ ಎಇಇ ಸುಧಾಮಣಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಸಾದಿಕ್‍ವುಲ್ಲ ಸೇರಿದಂತೆ ಅನೇಕ ಇಲಾಖೆ ಅಧಿಕಾರಿಗಳಿಗೆ ಶಾಸಕರು ಶ್ಲಾಘಿಸಿ ಉತ್ತಮವಾಗಿ ಕಾರ್ಯನಿರ್ವಹಿಸಿ ಎಂದು ಸೂಚನೆ ನೀಡಿದರು.
ಸಭೆಯಲ್ಲಿ ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ, ತಾಪಂ ಕಾರ್ಯನಿರ್ವಹಣಾಧಿಕಾರಿ ಕೆಂಚಪ್ಪ, ಶಿಕ್ಷಣ ಇಲಾಖೆ ಡಿಡಿ ಕೊಟ್ರೇಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಜಗಳೂರು ಪಟ್ಟಣದ ತಾಪಂ ಸಭಾಂಗಣದಲ್ಲಿ ಶಾಸಕ ಬಿ.ದೇವೇಂದ್ರಪ್ಪ ಅಧ್ಯಕ್ಷತೆಯಲ್ಲಿ 2024-25ನೇ ಸಾಲಿನ ತ್ರೈಮಾಸಿಕ ಸಭೆ ನಡೆಯಿತು.