ಸುದ್ದಿ ವಿಜಯ ಜಗಳೂರು:ಪರಿಸರದ ಪ್ರಾಮುಖ್ಯತೆಯ ಮೇಲೆ ಕೇಂದ್ರಿಕರಿಸಲು ಮತ್ತು ಪಕೃತಿಯನ್ನು ಲಘುವಾಗಿ ತೆಗೆದುಕೊಳ್ಳಬಾರದು ಎಂಬುದನ್ನು ನೆನಪಿಸಲು ಪರಿಸರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ತಹಸೀಲ್ದಾರ್ ಸಂತೋಷ್‌ಕುಮಾರ್ ಹೇಳಿದರು.
ಇಲ್ಲಿನ ಆದಿಜಾಂಬ ಹರಿಜನ ವಿದ್ಯಾರ್ಥಿ ನಿಲಯದಲ್ಲಿ ಸೋಮವಾರ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನೀರು ಮಾಲೀನ್ಯ, ಅಧಿಕ ಜನಸಂಖ್ಯೆ, ಜಾಗತಿಕ ತಾಪಮಾನ, ವನ್ಯ ಜೀವಿ ಅಪರಾಧಗಳಂತಹ ಪರಿಸರ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ವಿಶ್ವ ಪರಿಸರ ದಿನವನ್ನು ೧೯೭೨ರಲ್ಲಿ ವಿಶ್ವಸಂಸ್ಥೆಯೂ ಮಾನವ ಪರಿಸರದ ಸ್ಟಾಕ್‌ಹೋಮ್ ಸಮ್ಮೇಳನದಲ್ಲಿ ಪ್ರಾರಂಭಿಸಲಾಯಿತು. ೧೯೭೪ರಲ್ಲಿ ಮೊದಲ ಬಾರಿಗೆ ಯುನೈಟೆಡ್ ಸ್ಟೇಟ್ಸ್ನಲ್ಲಿ ವಿಶ್ವಪರಿಸರ ದಿನವನ್ನಾಗಿ ಆಚರಿಸಲಾಯಿತು ಎಂದು ನೆನಪಿಸಿದರು.
ಉಪನ್ಯಾಸಕ ನಾಗಲಿಂಗಪ್ಪ ಮಾತನಾಡಿ, ಭೂಮಿ ನಮಗೆ ತಾಯಿ ಇದ್ದಂತೆ, ಮಾತೃ ಸಮಾನವಾದ ಪರಿಸರವನ್ನು ಉಳಿಸುವುದು ನಮ್ಮ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ. ಪರಿಸರ ಉಳಿದರೆ ನಾವು ಉಳಿಯುತ್ತೇವೆ, ನಾಶವಾದರೆ ನಮ್ಮ ನಾಶವು ಶತಸಿದ್ದ ಎನ್ನುವುದನ್ನು ಯಾರು ಮರೆಯಬಾರದು ಎಂದರು.
ದಲಿತ ಮುಖಂಡ ಗ್ಯಾಸ್‌ಓಬಣ್ಣ ಮಾತನಾಡಿ, ಪರಿಸರದೊಂದಿಗಿನ ನಮ್ಮ ಸಾಮರಸ್ಯದಲ್ಲಿ ಸ್ವಲ್ಪ ಏರುಪೇರಾದರು ಏನಾಗುತ್ತದೆ ಎಂಬುವುದು ಎಲ್ಲರಿಗೂ ಅರಿವಿದೆ. ಆದರೆ ಹೀಗಿದ್ದರೂ ಮನುಷ್ಯನ ಲಾಲಸೆ ಆತನನ್ನು ಪ್ರಕೃತಿಯ ಮೇಲೆಯೇ ಪ್ರಹಾರ ಮಾಡುವಂತೆ ಮಾಡುತ್ತದೆ, ಇದು ಹೀಗೆ ಮುಂದುವರಿದರೆ ನಮ್ಮ ಮುಂದಿನ ಪೀಳಿಗೆಗೆ ಸುಂದರ ಪರಿಸರವನ್ನು ದಾಟಿಸಲು ಸಾದ್ಯವಾಗುವುದಿಲ್ಲ, ಹಾಗಾಗಿ ಪರಿಸರ ರಕ್ಷಿಸಬೇಕಾದ ಹೊಣೆಗಾರಿಕೆ ಎಲ್ಲರದ್ದಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಶಿರಸ್ಥೇದಾರ್ ರಾಮಚಂದ್ರಪ್ಪ, ಪ್ರಗತಿಪರ ಹೋರಾಟಗಾರ ಆರ್. ಓಬಳೇಶ್, ಮುಖಂಡರಾದ ಹಟ್ಟಿ ತಿಪ್ಪೇಸ್ವಾಮಿ, ಪೂಜಾರಿ ಸಿದ್ದಪ್ಪ, ಕೆಳಗೋಟೆ ಗುರುಸಿದ್ದಪ್ಪ, ಎಂ ರಾಜಪ್ಪ ಸೇರಿದಂತೆ ಮತ್ತಿತರಿದ್ದರು.