suddivijayanews17/08/2024
ಸುದ್ದಿವಿಜಯ, ಜಗಳೂರು: ಶುಕ್ರವಾರ ರಾತ್ರಿ ಸುರಿದ ಗುಡುಗು ಸಹಿತ ಭಾರಿ ಮಳೆಗೆ ತಾಲೂಕಿನ ಅರಿಶಿಣಗುಂಡಿ ಗ್ರಾಮದ ಸೇತುವೆಯಲ್ಲಿ ನೀರಿನ ರಭಸಕ್ಕೆ ಎಮ್ಮೆಯೊಂದು ಕೊಚ್ಚಿಹೋಗಿ ತೂಬಿನಲ್ಲಿ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ.
ಅರಿಶಿಣಗುಂಡಿ ಗ್ರಾಮದ ರತ್ನಮ್ಮ ಎಂಬುವರಿಗೆ ಸೇರಿದ ಎಚ್‍ಎಫ್ ತಳಿಯ ಹಾಲು ಕೊಡುವ ಅಂದಾಜು 50 ಸಾವಿರ ಬೆಲೆ ಬಾಳುವ ಎಮ್ಮೆಯನ್ನು ಮೇಯಿಸಲು ತೆರಳುತ್ತಿದ್ದಾಗ ಸೇತುವೆ ಕೆಳಗೆ ಆಯತಪ್ಪಿ ಬಿದ್ದ ಎಮ್ಮೆ ನೀರಿನ ಸೆಳೆತಕ್ಕೆ ತೂಬಿನಲ್ಲಿ ಸಿಲುಕಿದೆ.
ತಕ್ಷಣ ಗ್ರಾಮದ ನೂರಾರು ಮಂದಿ ಆಗಮಿಸಿ ಹಗ್ಗ ಕಟ್ಟಿ ಎಳೆಯುವ ಪ್ರಯತ್ನದ ಕಾರ್ಯಾಚರಣೆ ಮಾಡಿದರೂ ಮಾಡಿದರೂ ನೀರಿನ ಸೆಳೆತಕ್ಕೆ ತೂಬಿನ ಮಧ್ಯಕ್ಕೆ ಜಾನುವಾರಿನ ಮೃತ ದೇಹ ಹೋಗಿದ್ದರಿಂದ ಹಗ್ಗ ತುಂಡಾಯಿತು. ಆದರೆ ಎಮ್ಮೆ ಮಾತ್ರ ಹೊರ ಬರಲಿಲ್ಲ. ಜೆಸಿಬಿ ಯಂತ್ರ ಬಳಸಿ ಹೊರ ತೆಗೆಯಲು ಪ್ರಯತ್ನಿಸಿದರೂ ವಿಫಲವಾಯಿತು.
ಜೀವನಾಧಾರಕ್ಕೆ ಜಮೀನು ಇಲ್ಲದೇ ಇದ್ದುದ್ದರಿಂದ ಹೈನುಗಾರಿಕೆಯನ್ನೇ ನಂಬಿ ಬದುಕು ಸಾಗಿಸುತ್ತಿದ್ದ ರತ್ನಮ್ಮನಿಗೆ ಇದ್ದ ಒಂದು ಹಸು ಒಂದು ಎಮ್ಮೆ ಜೀನವಾಧಾರವಾಗಿತ್ತು. ಆದರೆ ಹಾಲು ಕೊಡುವ ಎಮ್ಮೆ ಮೃತಪಟ್ಟಿದ್ದರಿಂದ ರತ್ನಮ್ಮ ಅಕ್ಷರಶಃ ಕಣ್ಣೀರು ಹಾಕುತ್ತಿದ್ದ ದೃಶ್ಯ ಮನ ಕಲಕುವಂತಿತ್ತು.ಜೀವನಕ್ಕೆ ಆಧಾರವಾಗಿದ್ದ ಎಮ್ಮೆ ಮೃತಪಟ್ಟ ಹಿನ್ನೆಲೆ ರತ್ನಮ್ಮ ರೋದಿಸುತ್ತಿರುವ ಚಿತ್ರ
ಗ್ರಾಮದ ಸಿದ್ದೇಶ್, ಉಮೇಶ್, ಮಂಜಣ್ಣ, ಸಿದ್ದಪ್ಪ, ಭೀಮಣ್ಣ, ಚಂದ್ರಣ್ಣ, ಶಿವಪ್ಪ, ಎಂ.ಸಿ.ಶೇಖರಪ್ಪ ಸೇರಿದಂತೆ ಅನೇಕರು ನೀರಿಗಿಳಿದು ಹೊರತೆಗೆಯಲು ಪಯತ್ನಿಸಿದರೂ ಸಾಧ್ಯವಾಗಲಿಲ್ಲ.
ಸ್ಥಳಕ್ಕೆ ಹಿರಿಯ ಪಶುವೈದ್ಯ ಪರೀಕ್ಷಕರಾದ ಡಾ.ಶಾಂತಕುಮಾರ್ ಭೇಟಿ ನೀಡಿ ಹಗ್ಗದ ಮೂಲಕ ಹೊರತೆಗೆಯಲು ಪಯತ್ನಿಸಿದರೂ ಸಾಧ್ಯವಾಗಲಿಲ್ಲ.ತಾಲೂಕು ಪಶುಸಂಗೋಪನ ಇಲಾಖೆ ಸಹಾಯಕ ನಿರ್ದೇಶಕ ಡಾ.ಲಿಂಗರಾಜು ನೇತೃತ್ವದ ವಿಪತ್ತು ನಿರ್ವಹಣಾ ತಂಡ ಭೇಟಿ ನೀಡಿ ಪ್ರಯತ್ನಿಸಿದರೂ ನೀರಿನ ಸೆಳೆತವಿದ್ದ ಕಾರಣ ಸಾಧ್ಯವಾಗಲಿಲ್ಲ.