ಸುದ್ದಿ ವಿಜಯ,ಜಗಳೂರು: ಮೇ ಮತ್ತು ಜೂನ್ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದ ಜಗಳೂರು ತಾಲೂಕಿನ ಅನೇಕ ಕೆರೆಗಳು ಭರ್ತಿಯಾಗಿವೆ. ಹೀಗಾಗಿ ಬರದ ತಾಲೂಕು ಎಂಬ ಪಟ್ಟಕಟ್ಟಿಕೊಂಡಿದ್ದ ತಾಲೂಕಿನಲ್ಲಿ ಈ ಭಾರಿ ಮಳೆರಾಯನ ಆರ್ಭಟ ಜೋರಾಗಿದೆ. ವಾರ್ಷಿಕ ಮಳೆಯ ಪ್ರಮಾಣಕ್ಕಿಂತ ಈ ಭಾರಿ ಅತ್ಯುತ್ತಮ ಮಳೆಯಾಗಿದ್ದು ಜಗಳೂರು ತಾಲೂಕಿನಾದ್ಯಂತ ಅಕ್ಷರಶಃ ಮಲೆನಾಡ ಅನುಭವ ಉಂಟಾಗಿದೆ. ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಕೆರೆ, ಕಟ್ಟೆ, ಹಳ್ಳಕೊಳ್ಳಗಳು ಮೈದುಂಬಿ ಹರಿಯುತ್ತಿವೆ.
ಈಗಾಗಲೇ ಬಿತ್ತನೆಗೆ ಸಜ್ಜಾಗುತ್ತಿದ್ದ ರೈತ ಸಂಕುಲಕ್ಕೆ ಇನ್ನೆರಡು ದಿನ ಮಳೆರಾಯನ ಕೃಪೆಯಿಂದ ಕೃಷಿ ಚಟುವಟಿಕೆಗಳೆಲ್ಲವೂ ಸ್ಥಗಿತಗೊಳಿಸಲಾಗಿದೆ. ಭಾನುವಾರ ಒಂದೇ ದಿನ ತಾಲೂಕಿನ ವಿವಿಧ ಗ್ರಾಮಗಳಲ್ಲಿ 5ಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಯಾಗಿದೆ. ತಾಲೂಕಿನ ಮೆದಗಿನ ಕೆರೆಯಲ್ಲಿ 1, ಐನಹಳ್ಳಿಯಲ್ಲಿ 1, ಗೌರಿಪುರದಲ್ಲಿ 1, ಮುಗ್ಗಿದರಾಗಿಹಳ್ಳಿಯಲ್ಲಿ ಒಂದು ಮನೆ ಕುಸಿದಿದೆ, ಸುಮಾರು 200 ಎಕರೆಯ ಚದರುಗೊಳ್ಳ ಕೆರೆ ಬಹುತೇಕ ಭರ್ತಿಯಾಗುವ ಹಂತಕ್ಕೆ ಬಂದಿದೆ. ಮಳೆ ಮುಂದುವರಿದರೆ ಇನ್ನೆರಡು ದಿನಗಳಲ್ಲಿ ಕೆರೆ ಕೋಡಿ ಬೀಳುವ ಸಾಧ್ಯತೆಯಿದೆ.
ಎಲ್ಲೆಲ್ಲಿ ಎಷ್ಟು ಮಳೆ:
ಭಾನುವಾರ ರಾತ್ರಿ ಜಗಳೂರು ಪಟ್ಟಣದಲ್ಲಿ 53 ಮಿ.ಮೀ, ಬಿಳಿಚೋಡಿನಲ್ಲಿ 10 ಮಿ.ಮೀ, ಸಂಗೇನಹಳ್ಳಿಯಲ್ಲಿ 86 ಮಿ.ಮೀ, ಚಿಕ್ಕಬಂಟನಹಳ್ಳಿಯಲ್ಲಿ 23 ಮೀ.ಮೀ, ಸೊಕ್ಕೆ 28 ಮಿ.ಮೀ ಮಳೆಯಾಗಿದ್ದು ಒಟ್ಟಾರೆ ತಾಲೂಕಿನಾದ್ಯಂತ ಸರಾಸರಿ 40.24 ಮಿ.ಮೀ ಮಳೆಯಾಗಿದೆ ಎಂದು ಹವಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಜಗಳೂರು ತಾಲೂಕಿನಲ್ಲಿ ಸುರಿದ ಭಾರಿ ಮಳೆಯಿಂದ ಅನೇಕ ಮನೆಗಳು ಕುಸಿದು ಬಿದ್ದಿವೆ. ಎನ್‍ಡಿಆರ್‍ಎಫ್ ಮತ್ತು ಎಸ್‍ಡಿಆರ್‍ಎಫ್ ನಿಯಮಗಳ ಅನುಸಾರ ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರವನ್ನು ನೀಡಲು ತಾಲೂಕು ಆಡಳಿತ ಸಜ್ಜಾಗಿದೆ. ಜನರ ಜಾಗರೂಕತೆಯಿಂದ ಇರಬೇಕು.
-ಜಿ.ಸಂತೋಷ್‍ಕುಮಾರ್, ತಹಶೀಲ್ದಾರ್ ಜಗಳೂರು