ಸುದ್ದಿವಿಜಯ: ಜಗಳೂರು: ಬುದ್ಧತ್ವ, ಬಸವತ್ವ ಮತ್ತು ಭೀಮತ್ವವನ್ನು ಜನ ಮೈಗೂಡಿಸಿಕೊಂಡಾಗ ಮಾತ್ರ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಅರ್ಥ ಬರುತ್ತದೆ ಎಂದು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ತೋರಗಟ್ಟೆ ಗ್ರಾಮದ ನಿವೃತ್ತ ಪ್ರೊ. ಎಚ್.ಲಿಂಗಪ್ಪ ತಮ್ಮ ಅಧ್ಯಕ್ಷತೆ ಭಾಷಣದಲ್ಲಿ ಅಭಿವ್ಯಕ್ತಗೊಳಿಸಿದರು.’
ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ 2ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ನಂತರ ಅವರು ಮಾತನಾಡಿದರು. ಕನ್ನಡ ನಮ್ಮೆಲ್ಲರ ಕರುಳ ಭಾಷೆ, ತಾಯಿ ಹಾಲಿನ ಸವಿಜೇನಿನಂತಿದೆ. ನಮ್ಮ ಭಾಷೆ ನಡೆ, ನುಡಿ ಮತ್ತು ಭಾವನೆಗಳ ಪರಂಪರಿಕ ಸತ್ಯವನ್ನು ಬಲವಾಗಿ ನಂಬಿರುವ ನಾವುಗಳು ಭುವನೇಶ್ವರಿಯ ಋಣದ ಶಿಶುಗಳಾಗಿ ಆತ್ಮಾಭಿಮಾನ ಮತ್ತು ಗೌರವದಿಂದ ಬದುಕಬೇಕು ಹಾಗೂ ಜಾಗತೀಕರಣದ ಕಾರಣದಿಂದ ಆರ್ಥಿಕ ಸ್ವಾವಲಂಬನೆಗೆ ಅಣಿಯಾಗಬೇಕು.
12ನೇ ಶತಮಾನದ ಆದಿಭಾಗದಲ್ಲಿಯೇ ಬಸವಣ್ಣನರ ಹಿರಿಯ ಸಮಕಾಲಿನ ಮರುಳಸಿದ್ಧನಿಗೆ ಜಾತಿಯ ಬೆಂಬಲವಿರಲಿಲ್ಲ. ಮಾದಿಗ ಜಾತಿಯಲ್ಲಿ ಹುಟ್ಟಿ ಆ ಜನರ ನೋವನ್ನರಿತ ಮರುಳಸಿದ್ಧರು ಭಾಲ್ಯದಲ್ಲಿಯೇ ಸರ್ವ ಸಮಾನತೆಗಾಗಿ ಮೂಢನಂಬಿಕೆ, ಕಂದಾಚಾರಗಳ ವಿರುದ್ಧ ಏಕಾಂಗಿ ಹೋರಾಟ ನಡೆಸಿದರು.
ಅವರ ಹಾದಿಯಲ್ಲಿ ತರಳಬಾಳು ಬೃಹನ್ಮಠದ ಹಿಂದಿನ ಗುರುಗಳಾದ ಶಿವಕುಮಾರಸ್ವಾಮೀಜಿ, ಈಗಿನ ಪೀಠಾಧಿಪತಿಗಳಾದ ಡಾ.ಶಿವಮೂರ್ತಿಶಿವಾಚಾರ್ಯ ಸ್ವಾಮೀಜಿ ಮತ್ತು ಪಂಡಿತಾರಾಧ್ಯ ಸ್ವಾಮೀಜಿ ಕ್ರಾಂತಿಯೋಗಿ ಬಸವಣ್ಣನವರಂತೆ ಸಮಾಜವನ್ನು ಮುನ್ನಡೆಸುತ್ತಿದ್ದಾರೆ. ತಾವು ಬದುಕಿದ ರೀತಿ, ಅನುಸರಿಸಿದ ತತ್ವಸಿದ್ಧಾಂತ, ಪಾಂಡಿತ್ಯ ಪ್ರತಿಭೆಗಳಿಂದಾಗಿಯೇ ಕೋಟ್ಯಂತರ ಅನುಯಾಯಿಗಳನ್ನು ಪಡೆದಿದ್ದಾರೆ. ನಡೆ ನುಡಿಯ ಮೂಲಕ ಸಮಾಜ ಕಲ್ಯಾಣವನ್ನು ಹೀಗೆ ನಿರ್ಮಿಸಬಹುದು ಎಂಬುದಕ್ಕೆ ವಿಶ್ವಬಂಧು ಮರುಳಸಿದ್ಧರೇ ಸಾಕ್ಷಿಯಾಗಿದ್ದಾರೆ ಎಂದು ಹೇಳಿದರು.
ಬಸವತತ್ವ ಅನುಯಾಯಿ ಯಾದರೆ ಮಾತ್ರ ವಾಸ್ತವದಲ್ಲಿ ಬದುಕಲು ಸಾಧ್ಯ. 2600 ವರ್ಷಗಳ ಹಿಂದೆ ಬದುಕಿದ ಬುದ್ಧ ರಾಜನ ಮಗನಾದರೂ ಯುದ್ಧ ನೀತಿಯನ್ನು ಅನುಸರಿಸದೇ ವೈಶಾಖ ಶುದ್ಧ ಪೂರ್ಣಿಮೆಯಂದು ಸುಖ,ಭೋಗ ತೊರೆದು ಜ್ಞಾನಿಯಾದ. ಸರಳ ಜೀವನ ನಡೆಸಿ ಎಂದ. ನಾವೆಲ್ಲ ಬುದ್ಧ ಪ್ರಜ್ಞೆಯ ಕಾಯಕ ಜೀವಿಗಳಾಬೇಕು. ಅಂಬೇಡ್ಕರ್ ತತ್ವ ಮೈಗೂಡಿಸಿಕೊಂಡಾಗ ಮಾತ್ರ ಸಮಾನತೆ ಕಾಣಲು ಸಾಧ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಾನಪದ ವಿದ್ವಾಂಸ ಡಾ.ಎಂ.ಜಿ.ಈಶ್ವರಪ್ಪ ಮಾತನಾಡಿ, 1996ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿ.ಪಿ.ವೀರಭದ್ರಪ್ಪ ಅಧ್ಯಕ್ಷರಾಗಿದ್ದರು. 20 ವರ್ಷಗಳ ನಂತರ ಇಂತಹ ದೊಡ್ಡ ಸಮಾರಂಭ ನಡೆಯುತ್ತಿರುವುದು ಸಂತೋಷ ತಂದಿದೆ. 2 ಸಾವಿರ ವರ್ಷ ಇತಿಹಾಸವಿರುವ ಕನ್ನಡ ಭಾಷೆಯ ಉಳುವಿಗೆ ನಾವೆಲ್ಲ ಕಂಕಣಬದ್ಧರಾಗಿ ದುಡಿಯುವ ಅಗತ್ಯವಿದೆ.
ಅನುಭಾವ ಕವಿ ಮಹಾಲಿಂಗರಂಗರು ಇಲ್ಲೇ ಬೆಳೆದು ಕೊಣಚಗಲ್ ರಂಗನಾಥ ಬೆಟ್ಟದಲ್ಲಿ ಸಮಾಧಿಯಾಗಿದ್ದಾರೆ. ಅವರ ಸಾಹಿತ್ಯ, ವಚನಗಳು ಇಂದಿಗೂ ಜೀವಂತವಾಗಿವೆ. ವ್ಯಕ್ತಿ ಯಶಸ್ವಿಯಾಗಬೇಕಾದರೆ ಶ್ರಮ ಬೇಕು. ನಮ್ಮ ಗುರಿ ಹಿಮಾಲಯ ಪರ್ವತದಷ್ಟು ದೊಡ್ಡದಾಗಿರಬೇಕು. ಕನ್ನಡ ಭಾಷೆಯ ಶಬ್ಧ ಭಂಟಾರ ವಿಸ್ತಾರವಾಗಿದೆ. ಅರ್ಥಶಾಸ್ತ್ರದಲ್ಲಿ ಉಪನ್ಯಾಸಕರಾಗಿರುವ ಪ್ರೊ.ಲಿಂಗಪ್ಪ ಕನ್ನಡಕ್ಕೆ ಅರ್ಥಬರುವಂತೆ 36ಕ್ಕೂ ಹೆಚ್ಚು ಕೃತಿಗಳನ್ನು ಬರೆದಿರುವುದು ಅವರ ಭೌದ್ಧಿಕತೆಗೆ ಸಾಕ್ಷಿ ಎಂದು ಕೊಂಡಾಡಿದರು.
ಕಸಾಪ ಜಿಲ್ಲಾಧ್ಯಕ್ಷ ವಾಮದೇವಪ್ಪ ಮಾತನಾಡಿ, ಕನ್ನಡದ ಮನಸ್ಸುಗಳು ಒಂದಾಗಲು ಈ ಕಾರ್ಯಕ್ರಮ ಸಂಗಮರೂಪದಂತಿದೆ ಎಂದರು. ಈ ಹಿಂದೆ ಪಲ್ಲಾಗಟ್ಟೆ ಗ್ರಾಮದಲ್ಲಿ 20 ವರ್ಷಗಳ ಹಿಂದೆ ನಡೆದಿತ್ತು. ಅದಾದ ನಂತರ ಈ ಮಟ್ಟದ ಕಾರ್ಯಕ್ರಮ ನಡೆದಿರುವುದು ಕನ್ನಡ ಶ್ರೀಮಂತಿಕೆಗೆ ಸಾಕ್ಷಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ಕನ್ನಡ ಸಾಹಿತ್ಯ ಪರಂಪರೆ ಬೆಳೆಸಲು ನಾನು ಬದ್ಧನಾಗಿದ್ದೇನೆ. ಮುಂದಿನ ವರ್ಷ ನಮ್ಮ ತಾಲೂಕಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಅವಕಾಶ ನೀಡಬೇಕು. ಮುಂದೆ ಯಾರೇ ಸಿಎಂ ಆಗಲಿ ಆದರೆ ನಾನು ಈ ಕ್ಷೇತ್ರದ ಶಾಸಕನಾಗಿರುತ್ತೇನೆ. ಶಾಸಕನಾಗಿ ಈ ಕ್ಷೇತ್ರದ ಅಭಿವೃದ್ಧಿಗೆ ಕಂಕಣ ಬದ್ಧನಾಗಿ ದುಡಿಯುತ್ತೇನೆ ಎಂದರು.
ಧಿವ್ಯ ಸಾನಿಧ್ಯ ವಹಿಸಿದ್ದ ಮುಸ್ಟೂರು ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಕ್ಕಳ ಪಠ್ಯದಲ್ಲಿ ಸಾಕಷ್ಟು ತಪ್ಪುಗಳು ಆಗುತ್ತಿವೆ. ಮಕ್ಕಳನ್ನು ಸಾಹಿತ್ಯ ಕ್ಷೇತ್ರದಲ್ಲಿ ತಲ್ಲೀನವಾಗಿಸುವ ಜವಾಬ್ದಾರಿ ಪೋಷಕರ ಮೇಲಿದೆ. ಮೊಬೈಲ್, ಟಿವಿ ಬಿಟ್ಟು ಓದಿನತ್ತ ಗಮನ ಹರಿಸಲು ತಿದ್ದಿ ಬುದ್ಧಿ ಹೇಳಿ ಎಂದರು.
ತಾ.ಕಸಾಪ ಅಧ್ಯಕ್ಷೆ ಕೆ.ಸುಜಾತಮ್ಮ ರಾಜು, ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರದಮದಲ್ಲಿ ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್, ಶಿಕ್ಷಣ ಇಲಾಖೆ ಸಮನ್ವಯ ಅಧಿಕಾರಿ ಹಾಲಪ್ಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಮಹೇಶ್ವರಪ್ಪ, ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್, ಪಪಂ ಅಧ್ಯಕ್ಷೆ ವಿಶಾಲಾಕ್ಷಿ, ಹಾಜಿ ಹುಸೇನ್ ಮಿಯಾಸಾಬ್, ವಾಲಿಬಾಲ್ ತಿಮ್ಮಾರೆಡ್ಡಿ, ಸ್ವಾಗತ ಸಮಿತಿ ಅಧ್ಯಕ್ಷ ಎನ್.ಟಿ.ಎರ್ರಿಸ್ವಾಮಿ, ಎಚ್.ಎಸ್.ವಸಂತ್, ಪ್ರೊ.ಅಶೋಕ್ ಕುಮಾರ್, ಪ್ರಭಾಕರ್ ಲಕ್ಕೋಳ್, ಡಾ.ಲೋಕೇಶ್ ಅಗಸನಕಟ್ಟೆ, ದೊಣೆಹಳ್ಳಿ ಗುರುಮೂರ್ತಿ, ವಕೀಲ ಸಂಘದ ಅಧ್ಯಕ್ಷ ಓಂಕಾರೇಶ್ವರ್, ಬಿ.ಟಿ.ಮಂಜುನಾಥ್‍ರೆಡ್ಡಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಆರ್.ಚಂದ್ರಪ್ಪ, ಪ್ರೊ.ಚಂದ್ರಶೇಖರ್, ತೋರಣಗಟ್ಟೆ ತಿಪ್ಪೇಸ್ವಾಮಿ, ಪಿಐ ಶ್ರೀನಿವಾಸ್ ಸೇರಿದಂತೆ ಅನೇಕರು ಇದ್ದರು.
ಅಧ್ಯಕ್ಷರಾದ ಪ್ರೊ.ಎಚ್.ಲಿಂಗಪ್ಪ ಅವರನ್ನು ಸಮ್ಮೇಳನದಲ್ಲಿ ಅಭಿನಂದನೆ
ಶನಿವಾರ ಬೆಳಿಗ್ಗೆ 7.30ಕ್ಕೆ ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಧ್ವಜಾರೋಹಣ ನೆರವೇರಿಸಿದರು. ನಂತರ ಸಮ್ಮೇಳನದ ಅಧ್ಯಕ್ಷರಾದ ಪ್ರೊ.ಲಿಂಗಪ್ಪ ಅವರನ್ನು ಬೆಳ್ಳಿ ರಥದಲ್ಲಿ ಕೂರಿಸಿಕೊಂಡು ಅಂಬೇಡ್ಕರ್ ವೃತ್ತದಿಂದ ವೀರಶೈವ ಕಲ್ಯಾಣ ಮಂಟದವರೆಗೆ ಡೊಳ್ಳು ಕುಣಿತ, ಡ್ರಂಸೆಟ್ ಕೋಲಾಟ, ನಂದಿಕೋಲು ಕುಣಿತ, ವೀರಗಾಸೆ, ಕಹಳೆ, ತಮಟೆ ಸೇರಿ ಅನೇಕ ಜಾನಪದ ಕಲಾಪ್ರಕಾರಗಳ ಮೂಲಕ ಪೂರ್ಣ ಕುಂಬ ಹೊತ್ತ ಮಹಿಳೆಯರು ಅದ್ಧೂರಿಯಾಗಿ ಮೆರವಣಿಗೆಯಲ್ಲಿ ಕರೆತಂದರು. ಮಧ್ಯಾಹ್ನದ ನಂತರ ಕವಿಗೋಷ್ಠಿ, ಸಾಹಿತ್ಯಗೋಷ್ಠಿ ನಡೆದವು.