ಸುದ್ದಿವಿಜಯ, ಜಗಳೂರು: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ತಾಪಂ, ಪಟ್ಟಣ ಪಂಚಾಯಿತಿ ಮತ್ತು ಸಿಡಿಪಿಒ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಸಂಜೆ ವಿಶಿಷ್ಠವಾಗಿ ಮತದಾರರ ಜನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಹಿಳಾ ಸಿಬ್ಬಂದಿ, ಪಪಂ ಕಾರ್ಮಿಕರು ಅಂಬೇಡ್ಕರ್ ಪ್ರತಿಮೆ ಮುಂದೆ ಕರ್ನಾಟಕದ ನಕ್ಷೆ ಬಿಡಿಸಿ ಮೇಣದಬತ್ತಿ ಹಚ್ಚಿ ‘ನಿಮ್ಮ ಮತ ನಿಮ್ಮ ಭವಿಷ್ಯ’-2023ನೇ ಸಾರ್ವತ್ರಿಕ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡಿ, ಯಾವುದೇ ಆಮಿಷ್ಯಗಳಿಗೆ ಒಳಗಾಗದೇ ಮತದಾನದಲ್ಲಿ ಭಾಗವಹಿಸಿ ಎಂದು ರಂಗೋಲಿ ಬಿಡಿಸಿ ಅರಿವು ಮೂಡಿಸಲಾಯಿತು.
ಈ ವೇಳೆ ಮಾತನಾಡಿದ ತಾಪಂ ಇಓ ವೈ.ಎಚ್.ಚಂದ್ರಶೇಖರ್, 103 ವಿಧಾನಸಭಾ ಕ್ಷೇತ್ರವಾದ ಜಗಳೂರು ಮತದಾರರು ಮೇ.10 ರಂದು ನಡೆಯಲಿರುವ ಮತದಾನವನ್ನು ಕಡ್ಡಾಯವಾಗಿ ಮಾಡಿ, ನಿಮ್ಮ ಮತಗಳನ್ನು ಮಾರಿಕೊಳ್ಳಬೇಡಿ ಎಂದರು.
ಪಪಂ ಚೀಫ್ಆಫೀಸರ್ ಲೋಕ್ಯಾನಾಯ್ಕ್ ಮಾತನಾಡಿ, ಪಟ್ಟಣದ ಎಲ್ಲ 17 ವಾರ್ಡ್ಗಳಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಸಂವಿಧಾನ ಕೊಟ್ಟ ಹಕ್ಕನ್ನು ಎಲ್ಲರೂ ಭಾಗವಹಿಸಿ ಕಡ್ಡಾಯವಾಗಿ ಮತ ಚಲಾಯಿಸಿ ಎಂದರು.
ಸಿಡಿಪಿಒ ಬೀರೇಂದ್ರ ಕುಮಾರ್ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳ ಸಿಬ್ಬಂದಿಗಳು ಭಾಗವಹಿಸಿ ವಿಶಿಷ್ಠವಾಗಿ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.
ಈ ವೇಳೆ ಪಪಂ ಆರೋಗ್ಯ ಅಧಿಕಾರಿ ಕಿಫಾಯತ್ ಅಹ್ಮದ್ ಸೇರಿದಂತೆ ಅನೇಕ ಅಧಿಕಾರಿಗಳು, ಕಾರ್ಮಿಕರು ಭಾಗವಹಿಸಿದ್ದರು.