ಸುದ್ದಿವಿಜಯ, ದಾವಣಗೆರೆ:ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಗೆ ದಾವಣಗೆರೆಯ ಮಕ್ಕಳ ಸ್ನೇಹಿ ಎ್ಟಿಎಸ್‌ಸಿ ನ್ಯಾಯಾಲಯ 30 ವರ್ಷ ಜೈಲು ಶಿಕ್ಷೆ ಹಾಗೂ 70 ಸಾವಿರ ದಂಡ ವಿಧಿಸಿರುವುದಲ್ಲದೆ, ಸಂತ್ರಸ್ತೆಗೆ 6,50,000 ಪರಿಹಾರ ನೀಡುವಂತೆ ಶುಕ್ರವಾರ ತೀರ್ಪು ನೀಡಿದೆ.
ಹರಿಹರದ ನಿವಾಸಿ ತಿಪ್ಪೇಶ್ ಶಿಕ್ಷೆಗೆ ಒಳಗಾಗಿರುವ ವ್ಯಕ್ತಿ. ಅಪ್ರಾಪ್ತೆಗೆ ಚಾಕೋಲೇಟ್, ಕಬ್ಬಿನ ಹಾಲು, ಐಸ್ ಕ್ರೀಂ ನೀಡಿ ಪರಿಚಯಿಸಿಕೊಂಡಿದ್ದ ಆರೋಪಿಯು 2019ರ ಏ.19ರ ಸಂಜೆ 5.30ರ ಹೊತ್ತಿಗೆ ನಿರ್ಮಾಣದ ಹಂತದಲ್ಲಿರುವ ಮನೆಯೊಳಗೆ ಅಪ್ರಾಪ್ತೆಯನ್ನು ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ.
ಸಂತ್ರಸ್ತೆ ಕುಟುಂಬದವರು ನೀಡಿದ ದೂರಿನ ಆಧಾರದಲ್ಲಿ ತನಿಖಾಧಿಕಾರಿ, ಆಗಿನ ಡಿವೈಎಸ್ಪಿ ಎಂ.ಕೆ. ಗಂಗಲ್ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ದಾವಣಗೆರೆಯ ಮಕ್ಕಳ ಸ್ನೇಹಿ ಮತ್ತು ಎ್ಟಿಎಸ್‌ಸಿ ನ್ಯಾಯಾಲಯ ನ್ಯಾಯಾಧೀಶರಾದ ಶ್ರೀಪಾದ ಎನ್, ಆರೋಪಿಗೆ ಶಿಕ್ಷೆ ಪ್ರಕಟಿಸಿ ಆದೇಶ ನೀಡಿದ್ದಾರೆ. ಸರಕಾರಿ ಅಭಿಯೋಜಕ ಕೆ.ಜಿ. ಜಯಪ್ಪ ಸರಕಾರದ ಪರವಾಗಿ ವಾದ ಮಂಡಿಸಿದ್ದರು.