ಸುದ್ದಿವಿಜಯ, ಜಗಳೂರು:ನಿವೇಶನ, ವಸತಿ, ಚರಂಡಿ ನಿರ್ಮಾಣ, ಕೂಲಿ ಕೆಲಸ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾನುವಾರ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ವತಿಯಿಂದ ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಿನಲ್ಲಿ 170 ಕ್ಕೂ ಹೆಚ್ಚು ಹಳ್ಳಿಗಳಿವೆ, ಪ್ರತಿ ಹಳ್ಳಿಗಳಲ್ಲೂ ಒಂದಲ್ಲಾ ಒಂದು ರೀತಿಯಲ್ಲಿ ಸಮಸ್ಯೆಗಳು ತಾಂಡವಾಡುತ್ತಿವೆ.
ಆದರೆ ಅಧಿಕಾರಿಗಳು ಮಾತ್ರ ಅವುಗಳಿಗೆ ಸೂಕ್ತ ಪರಿಹಾರ ನೀಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆಪಾಧಿಸಿದರು.
ಗ್ರಾಕೂಸ ಕಾರ್ಯಕರ್ತೆ ಪಿ.ಎಸ್ ಸುಧಾ ಮಾತನಾಡಿ, ನರೇಗಾ ಯೋಜನೆಯಡಿ ಪ್ರತಿ ಗ್ರಾಮದಲ್ಲೂ 100 ರಿಂದ 1 ಸಾವಿರದವರೆಗೂ ಕೂಲಿಕಾರರಿದ್ದಾರೆ.
ಆದರೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳು ಸಾಕಷ್ಟು ಜನರಿಗೆ ತಲುಪದೇ ಮಧ್ಯವರ್ತಿಗಳ ಹಾವಳಿಯಿಂದ ವಂಚಿತರಾಗುತ್ತಿದ್ದಾರೆ.
ಬಿಳಿಚೋಡುಗ್ರಾಮದ ಸ.ನಂ 34 ಸೇಂದಿವನವೆಂದು ಗುರುತಿಸಲಾಗಿದೆ. 60 ಕ್ಕೂ ಹೆಚ್ಚು ಕುಟುಂಬಗಳಿಗೆ ನಿವೇಶನವಿಲ್ಲದೇ ಅಲ್ಲಲ್ಲಿ ಗುಡಿಸಲುಗಳನ್ನು ಹಾಕಿಕೊಂಡು ಬದುಕುತ್ತಿದ್ದಾರೆ ಅಂತಹ ಕುಟುಂಬಗಳಿಗೆ ಹಕ್ಕು ಪತ್ರ ನೀಡಿ ಶಾಶ್ವತವಾಗಿ ಸೂರು ಕಲ್ಪಿಸಿಕೊಡಬೇಕಾಗಿದೆ.
ಮುಗ್ಗಿದರಾಗಿಹಳ್ಳಿಯಲ್ಲೂ 60 ಕುಟುಂಬಗಳಿಗೆ ನಿವೇಶನ, ಮನೆಗಳಿಲ್ಲ. ಮುಚ್ಚುನೂರು ಎಸ್ ಸಿ ಕಾಲೋನಿಯಲ್ಲಿ ಚರಂಡಿಗಳಿಲ್ಲ.
ಕೆಚ್ಚನಹಳ್ಳಿ, ದೊಣ್ಣೆಹಳ್ಳಿ, ಪಲ್ಲಾಗಟ್ಟೆ ಸರ್ಕಾರಿ ಬಸ್‌ಗಳ ಓಡಾಟವಿಲ್ಲ. ಇಷ್ಟು ಸಮಸ್ಯೆಗಳಿದ್ದರು ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಮನವಿಗಳಿಗೆ ಸ್ಪಂದನೆ ಸಿಗುತ್ತಿಲ್ಲವೆಂದು ಅಸಧಾನ ವ್ಯಕ್ತಪಡಿಸಿದರು.
ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಮನವಿ ಸ್ವೀಕರಿಸಿ ಮಾತನಾಡಿ, ಗ್ರಾಮೀಣ ಪ್ರದೇಶಗಳ ಸಮಸ್ಯೆಗಳ ಬಗ್ಗೆ ನನಗೂ ಪರಿವಿದೆ.
ನಾನು ಹೊಸದಾಗಿ ಆಯ್ಕೆಯಾಗಿ ಬಂದಿದ್ದೇನೆ, ತುಂಬ ಸಮಸ್ಯೆಗಳಿರುವ ಗ್ರಾಮಗಳಿಗೆ ಮೊದಲ ಆದ್ಯತೆ ನೀಡಿ ಸಾರಿಗೆ, ರಸ್ತೆ, ನಿವೇಶನ, ವಸತಿ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆ ತಾಲೂಕ್ ಕಾರ್ಯಕರ್ತೆ ದೊಣ್ಣೆಹಳ್ಳಿ ಮಾಲಾಶ್ರೀ, ಮುಗ್ಗಿದರಾಗಿಹಳ್ಳಿ ನೇತ್ರ, ಬಿಳಿಚೋಡು ನಾಗರಾಜ್, ಅನುಸೂಯಮ್ಮ, ಉಚ್ಚಿಂಗೆಮ್ಮ, ಲಕ್ಕಮ್ಮ, ಮೆದಿಕೆರನಹಳ್ಳಿ ಕಲ್ಪನಾ, ನಿಂಗಮ್ಮ, ಅನಸೂಯಮ್ಮ, ಸಿದ್ದಮ್ಮ ಸೇರಿದಂತೆ ಮತ್ತಿತರಿದ್ದರು.