ಸುದ್ದಿವಿಜಯ, ಜಗಳೂರು: ಪ್ರಸ್ತುತ ವರ್ಷದ ಶೈಕ್ಷಣಿಕ ಸಾಲಿನಲ್ಲಿ ಸೆಮಿಸ್ಟರ್ ಪಠ್ಯ ಕ್ರಮಗಳನ್ನು ಪೂರ್ಣಗೊಳಿಸಿ ನಂತರ ಪರೀಕ್ಷೆ ವೇಳಾ ಪಟ್ಟಿಯನ್ನು ಪ್ರಕಟಗೊಳಿಸಬೇಕು ಎಂದು ಆಗ್ರಹಿಸಿ ಎಸ್ಎಫ್ಐ ಹಾಗೂ ಕರುನಾಡ ನವ ನಿರ್ಮಾಣ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗ್ರೇಡ್-2 ಮಂಜಾನಂದ ಅವರಿಗೆ ಮನವಿ ಸಲ್ಲಿಸಿದರು.
ಮಂಗಳವಾರ ಅಂಬೇಡ್ಕರ್ ಪ್ರತಿಮೆಯಿಂದ ಜಾಥಾ ಕೈಗೊಂಡು ನಂತರ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು. ಕರುನಾಡ ನವ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಮಹಾಲಿಂಗಪ್ಪ ಎಚ್.ಎಂ ಹೊಳೆ ಮಾತನಾಡಿ,
ಪ್ರಥಮ ದರ್ಜೆ ಕಾಲೇಜಿನಲ್ಲಿ ನಾಲ್ಕು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು ಪಠ್ಯಕ್ರಮ ಪೂರ್ಣಗೊಳ್ಳದೇ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೇ ಬಹುತೇಕ ಅತಿಥಿ ಉಪನ್ಯಾಸಕರ ಹೆಚ್ಚು ಇರುವುದರಿಂದ ಕೆಲ ಬೇಡಿಕೆಗಳಿಗೆ ಹೋರಾಟ ನಡೆಸಿದ ಹಿನ್ನೆಲೆ ಮೂರು ತಿಂಗಳು ಬೋಧನೆಗಳು ನಿಂತಿವೆ.
ಹಾಗಾಗಿ ಪಠ್ಯಕ್ರಮಗಳು ಪೂರ್ಣಗೊಳ್ಳುವವರೆಗೂ ಪರೀಕ್ಷಾ ವೇಳಾ ಪಟ್ಟಿಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು. ದಾವಣಗೆರೆ ವಿಶ್ವವಿದ್ಯಾನಿಲಯದ ಸೆಮಿಸ್ಟರ್ ಪಠ್ಯಕ್ರಮ ಬೋಧನೆ ಪೂರ್ಣಗೊಳ್ಳದೆ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಣೆ ಮಾಡದಿರುವುದ ಸರಿಯಲ್ಲ ಎಂದು ವಿದ್ಯಾರ್ಥಿಗಳು ಖಂಡಿಸಿದರು.
ಕೂಡಲೆ ದಾವಣಗೆರೆ ವಿವಿಯ ಪರೀಕ್ಷಾಂಗ ಕುಲ ಸಚಿವರು ವಿದ್ಯಾರ್ಥಿಗಳು ಹಿತಾದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಜನವರಿ ಅಂತ್ಯದವರೆಗೂ ಸೆಮಿಸ್ಟರ್ ಪಠ್ಯ ಕ್ರಮಗಳನ್ನು ಪೂರ್ಣಗೊಳಿಸಿ ನಂತರ ಪರೀಕ್ಷೆ ವೇಳಾ ಪಟ್ಟಿಯನ್ನು ಪ್ರಕಟಗೊಳಿಸಬೇಕು ಎಂದು ಆಗ್ರಹಿಸಿದರು.
ಎಸ್ಎಫ್ಐ ಜಿಲ್ಲಾ ಸಂಚಾಲಕ ಅನಂತ್ರಾಜ್ ಮಾತನಾಡಿ, ಅತಿಥಿ ಉಪನ್ಯಾಸಕರು 2014ರಿಂದ 2023ರ ತನಕ ಅನೇಕ ಹೋರಾಟಗಳನ್ನು ಮಾಡುತ್ತಾ ಬಂದಿದ್ದರೂ ನಮ್ಮನ್ನಾಳುವ ರಾಜ್ಯ ಸರ್ಕಾರಗಳು ಅತಿಥಿ ಉಪನ್ಯಾಸಕರನ್ನು ಜೀತದಾಳುಗಳನ್ನಾಗಿ ನಡೆಸಿಕೊಳ್ಳುತ್ತಿರುವುದು ಬೇಸರ ತರಿಸಿದೆ.
ಸಿಎಂ ಸಿದ್ದರಾಮಯ್ಯ, ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಬೆಳಗಾವಿ ಅಧಿವೇಶನದಲ್ಲಿ ಅತಿಥಿ ಉಪನ್ಯಾಸಕರ ಪರವಾದ ನಡಾವಳಿ ರಚನೆ ಮಾಡಿ, ವೈಜ್ಞಾನಿಕ ಮಾನದಂಡಗಳನ್ನು ನಿಗದಿಪಡಿಸಿ, ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಯನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ದಸಂದ ಸಂಚಾಲಕ ಮಲೆಮಾಚಿಕೆರೆ ಸತೀಶ್ ಮಾತನಾಡಿದರು. ಈ ಸಂದರ್ಭದಲ್ಲಿ ಎಸ್ಎಫ್ಐ ತಾಲೂಕಾಧ್ಯಕ್ಷ ಅಂಜಿನಪ್ಪ, ವಿದ್ಯಾರ್ಥಿ ಸಂಘಟನೆಯ ವಿಜಯ್ ಕುಮಾರ್, ವಿನೋದಿನಿ, ಕಮಲ,ನಾಗರಾಜ್, ನಾಯ್ಕ್, ಅಮೃತ, ಮಾಸನ, ವೀರಮ್ಮ, ಪ್ರವೀಣ್ಕುಮಾರ್, ಪ್ರದೀಪ್, ಧನುಷ್, ರತ್ನಮ್ಮ, ಸೃಷ್ಠಿ, ಅಶ್ವಿನಿ ಸೇರಿದಂತೆ ಮತ್ತಿತರರಿದ್ದರು.