ಸುದ್ದಿವಿಜಯ,ಭರಮಸಾಗರ: ಅತಿ ಹೆಚ್ಚು ಹತ್ತಿಬೆಳೆಯುವ ಭರಮಸಾಗರ ಹೋಬಳಿಯ ಅನೇಕ ಗ್ರಾಪಂಗಳಲ್ಲಿ ಹತ್ತಿಗಿಡಗಳಿಗೆ ಸಸ್ಯ ಹೇನು ಮತ್ತು ಹಸಿರು ಜಿಗಿ ಹುಳ ಬಾದೆ ಕಂಡುಬಂದಿದ್ದು ತಾಲೂಕು ಕೃಷಿ ಇಲಾಖೆ ಅಧಿಕಾರಿಗಳು, ಭರಮಸಾಗರದ ಆರ್‍ಎಸ್‍ಕೆ ಅಧಿಕಾರಿಗಳು ಸೋಮವರಾರ ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದರು.
ಯಳಗೋಡು ಗ್ರಾಪಂ ಒಳಪಡುವ ಯಳಗೋಡು, ಹುಲ್ಲೆಹಾಳು, ಬಸ್ತಿಹಳ್ಳಿ ಗ್ರಾಮಗಳಲ್ಲಿ ಹತ್ತಿ, ಅವರೆ ಬಳ್ಳಿಗೆ ಅತಿಯಾದ ಹುಳುಬಾಧೆ ಕಾಣಿಸಿಕೊಂಡಿದ್ದರಿಂದ ರೈತರು ಆತಂಕಕ್ಕೆ ಒಳಗಾಗಿದ್ದರು. ಸದ್ಯ ಮಳೆ ಕಡಿಮೆಯಾಗಿರುವ ಕಾರಣ ರೋಗ ಬಾಧೆ ಹೆಚ್ಚಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಅಭಿಪ್ರಾಯ ಪಟ್ಟು ರೈತರಿಗೆ ಔಷಧ ಸಿಂಪಡಿಸಲು ಸಲಹೆ ನೀಡಿದರು.
ಈ ವೇಳೆ ಮಾತನಾಡಿದ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎನ್.ಚಂದ್ರಕುಮಾರ್, ಮೋಡ ಮುಸುಕಿದ ವಾತಾವರಣ ಇರುವುದರಿಂದ ಈ ಹುಳುಬಾಧೆ ಕಾಣಿಸಿಕೊಳ್ಳುವುದು ಸಹಜ ಅಸಿಟಮಪ್ರಿಡ್ 0.3 ಗ್ರಾಂ ಅಥವಾ ಇಮಿಡಾ ಕ್ಲೋಪ್ರಿಡ್ 30.5 ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು.
ಅವರೆಯಲ್ಲಿ ಸಸ್ಯ ಹೇನು ಅಥವಾ ಕರಿಜಿಗಿ ಬಾದೆ ಕಂಡುಬಂದಿದ್ದು ಅಸಿಟಮಪ್ರಿಡ್ ಔಷಧವನ್ನು 0.3 ಗ್ರಾಂ ಅಥವಾ ಇಮಿಡಾ ಕ್ಲೋಪ್ರಿಡ್ ಸಿಂಪಡಿಸಬೇಕು. ಮುಸುಕಿನ ಜೋಳ ಬೆಳೆಯಲ್ಲಿ ಸೈನಿಕ ಹುಳು ಅಥವಾ ಫಾಲ್ ಆರ್ಮಿವರ್ಮ ಬಾಧೆ ಕಂಡುಬಂದಿದ್ದು ಇಮಾಮೆಕ್ಟೀನ್ ಬೆಂಜೋಯೆಟ್ ಕೀಟನಾಶಕ ವನ್ನು ರೈತ ಬಾಂಧವರು ಸಿಂಪಡಿಸಿ ಎಂದು ಸಲಹೆ ನೀಡಿದರು.
ಈ ವೇಳೆ ಸಹಯಾಕ ಕೃಷಿ ನಿರ್ದೇಶಕ ರಜನಿಕಾಂತ್, ಜಾರಿದಳದ ಲೋಕೇಶಪ್ಪ, ಭರಮಸಾಗರ ಸಹಾಯಕ ಕೃಷಿ ಅಧಿಕಾರಿ ಪತ್ತಾರ್ ಅವರು, ರೈತರಾದ ಶಂಕರ್‍ಮೂರ್ತಿ, ಶಿವಕುಮಾರ್, ಗಂಗಾಧರಪ್ಪ, ಕರಿಯಪ್ಪ, ಶ್ರೀಧರ್, ಅಶೋಕ್, ರವಿಕುಮಾರ್, ಕಾಟಮ್ಮನವರ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.