ಅಡಕೆಗೆ ಎಲೆ ಒಣಗುವ ರೋಗ ಭೀತಿ! ರೈತರೇ ಎಚ್ಚರ!

Suddivijaya
Suddivijaya June 29, 2022
Updated 2022/06/29 at 4:40 AM

ಸುದ್ದಿವಿಜಯ, ಜಗಳೂರು: (ವಿಶೇಷ) ಕಳೆದ ಬಾರಿ ವರ್ಷ ಉತ್ತಮ ಮಳೆ ಮತ್ತು 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಡೇ ಹಂತಕ್ಕೆ ಬಂದಿರುವ ಕಾರಣ ಜಗಳೂರು ತಾಲೂಕಿನ ಬಹುತೇಕ ರೈತರು ವಾಣಿಜ್ಯ ಬೆಳೆಯಾದ ಅಡಕೆ ಕಡೆ ವಾಲುತ್ತಿದ್ದಾರೆ.

ತಾಲೂಕಿನ ಅರಿಶಿಣಗುಂಡಿ, ಜಮ್ಮಾಪುರ, ಕಟ್ಟಿಗೆಹಳ್ಳಿ, ಬಿದರಕೆರೆ, ಬಿಸ್ತುವಳ್ಳಿ, ರಸ್ತೆಮಾಕುಂಟೆ, ನಿಬಗೂರು ಗ್ರಾಮ ಸೇರಿದಂತೆ ಬಿಳಿಚೋಡು ಕಸಬ, ಹೊಸಕೆರೆ/ಸೊಕ್ಕೆ ಹೋಬಳಿಗಳಲ್ಲಿ ರೈತರು ಅಡಕೆ ಎತೇಚ್ಚವಾಗಿ ನಾಟಿ ಮಾಡಿದ್ದಾರೆ. ಆದರೆ ಅಡಕೆಗೆ ಎಲೆಒಣಗುವ ರೋಗದ ಭೀತಿ ಎದುರಾಗಿದೆ.

ಹೌದು, ಪ್ರಯೋಗ ಶೀಲ ಬೆಳೆಗಳಿಗೆ ಹೆಸರಾಗಿರುವ ಜಗಳೂರು ತಾಲೂಕಿನ ರೈತರಿಗೆ ಪ್ರಸ್ತುತ ವರ್ಷ ಉತ್ತಮ ಮಳೆ ಮತ್ತು ಕೆರೆಗಳನ್ನು ತುಂಬಿಸುವ ಯೋಜನೆಯಿಂದ ಅಂತರ್ಜಲ ಕಡಿಮೆಯಾಗುವುದಿಲ್ಲ ಎಂಬ ಭರವಸೆ ಇಮ್ಮಡಿಯಾಗಿದ್ದು ಹೀಗಾಗಿ ಎಲ್ಲಿ ನೋಡಿದರೂ ಅಡಕೆ ಸಸಿಗಳನ್ನು ರೈತರು ಭರ್ಜರಿಯಾಗಿ ನಾಟಿಮಾಡಲಾರಂಭಿಸಿದ್ದಾರೆ.

ಪ್ರಸ್ತುತ ಮುಂಗಾರಿನಲ್ಲಿ ತಾಲೂಕಿನಲ್ಲಿ ಅಂದಾಜು 3000ರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಅಡಕೆ ಸಸಿಗಳ ನಾಟಿ ಮಾಡಲಾಗಿದೆ ಎಂದು ತಾಲೂಕು ತೋಟಗಾರಿಕೆ ಇಲಾಖೆ ಹಿರಿಯ ಸಾಹಾಯಕ ನಿರ್ದೇಶಕ ವೆಂಕಟೇಶ್‍ಮೂರ್ತಿ ಮಾಹಿತಿ ನೀಡಿದ್ದಾರೆ. ಒಟ್ಟಾರೆ ತಾಲೂಕಿನಲ್ಲಿ 3300 ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ನಾಟಿ ಮಾಡಲಾಗಿದೆ. ಆದರೆ ಈಗ ಫಲಕ್ಕೆ ಬಂದಿರುವ ನಾಲ್ಕರಿಂದ ಐದು ವರ್ಷದ ಮರಗಳಿಗೆ ಎಲೆ ಒಣಗುವ ರೋಗ ಕಾಣಿಸಿಕೊಂಡಿದ್ದು ರೆ`ತರು ಆತಂಕಕ್ಕೆ ಒಳಗಾಗಿದ್ದಾರೆ.

ರೋಗದ ಲಕ್ಷಣಗಳು:
ರೈತರು ತಮ್ಮ ತೋಟದಲ್ಲಿ ಸೂಕ್ಷ್ಮವಾಗಿ ಇಂತಹ ರೋಗಗಳನ್ನು ಪತ್ತೆಹಚ್ಚುವುದು ಅವಶ್ಯಕ. ಇದರ ಲಕ್ಷಣಗಳು ಎಂದರೆ ಅಡಕೆ ಗಿಡದಲ್ಲಿ ಎಲೆಗಳು ತುದಿ ಒಗಿರುತ್ತದೆ. ಸಾಮಾನ್ಯವಾಗಿ ಬೇಸಿಗೆ ಮತ್ತು ಮಳೆಗಾಲದಲ್ಲಿ ಹವಾಮಾನ ಬದಲಾವಣೆಯಿಂದ ಬಿಸಿಲು ಹೆಚ್ಚಾದಾಗ ರಸ ಹೀರುವ ಕೀಟಗಳ ಬಾಧೆ ಕಂಡು ಬರುತ್ತದೆ.

ಅದರಲ್ಲೂ ಬಿಳಿ ನುಸಿ ಮತ್ತು ಕೆಂಪು ನುಸಿಯ ಬಾಧೆ ಕಂಡು ಬಂದರೆ ಆಗ ಅಡಕೆ ಮರದ ಗಿಡಗಳು ಒಳಗುತ್ತವೆ. ಇದಕ್ಕೆ ಕಾರಣ ಭೂಮಿಯಲ್ಲಿ ಪೊಟ್ಯಾಷ್ ಅಂಶದ ಕೊರತೆ ಮತ್ತು ನೀರಿನಲ್ಲಿ ಫ್ಲೋರೈಡ್‌ ಅಂಶವೂ ಕಾರಣವಾಗಿರುತ್ತದೆ.

ರೋಗ ನಿಯಂತ್ರಣಕ್ಕೆ ಏನು ಮಾಡಬೇಕು:
ರೆ`ತರು ಇಂತಹ ರೋಗಗಳು ಕಂಡು ಬಂದರೆ ಹೆಚ್ಚಿನ ಪ್ರಮಾಣದಲ್ಲಿ ಭೂ ಮಿಗೆ ಪೊಟ್ಯಾಷ್ ಗೊಬ್ಬರ ಸೇರಿಸಬೇಕು. ಪ್ರತಿಗಿಡಕ್ಕೆ ಪ್ರತಿವರ್ಷಕ್ಕೆ 250 ಗ್ರಾಂ (ಗಿಡದ ಬೊಡ್ಡೆಯಿಂದ ಸ್ವಲ್ಪ ದೂರ) ಹಾಕಬೇಕು. ಮುಂಗಾರು ಆರಂಭವಾಗುತ್ತಿದ್ದಂತೆ ಜೂನ್ ತಿಂಗಳಲ್ಲಿ 150 ಗ್ರಾಂ ಮತ್ತು ಹಿಂಗಾರು ಆರಂಭವಾಗುತ್ತಿದ್ದಂತೆ 100 ಗ್ರಾಂ ಪೊಟ್ಯಾಷ್ ಗೊಬ್ಬರ ಹಾಕಿದರೆ ರೋಗ ನಿಯಂತ್ರಣಕ್ಕೆ ಬರುವುದರ ಜೊತೆಗೆ ಅಡಕೆಯ ಹೊಂಬಾಳೆ ಬಲಿಷ್ಟವಾಗಿ ಬರುತ್ತದೆ.

ಒಂದು ವೇಳೆ ಅಡಕೆ ಸಸಿಗೆ ಬಿಳಿ ನುಸಿಯ ಬಾಧೆ ರೋಗ ಕಂಡು ಬಂದರೆ ಅಂತರ್ ವ್ಯಾಪಿ ಕೀಟನಾಶಕವಾದ ‘ಎಕ್ಸಿ ತಯೋಝಾಕ್ಸ್’ ಒಂದು ವರೆ ಎಂಎಲ್ ಒಂದು ಲೀಟರ್ ನೀರಿಗೆ ಮಿಶ್ರಣ ಮಾಡಿ ಔಷಧವನ್ನು ಎಲೆಗಳ ಕೆಳಭಾಗದಲ್ಲಿ ಗಮ್ ಮಿಶ್ರಣ ಮಾಡಿಕೊಂಡು ಸಿಂಪಡಿಸಬೇಕು. ಆಗ ಕೀಟ ನಿಯಂತ್ರಣಕ್ಕೆ ಬರುತ್ತದೆ ಎಂದು ದಾವಣಗೆರೆಯ ಕೆವಿಕೆ ತೋಟಗಾರಿಕೆ ವಿಜ್ಞಾನಿ ಎಂ.ಜಿ.ಬಸವನಗೌಡ ಹೇಳಿದ್ದಾರೆ.

ಜಗಳೂರಿನಲ್ಲಿ ಪ್ರಸ್ತುತ ವರ್ಷ ಎಷ್ಟು ಅಡಕೆ ನಾಟಿ ಗೊತ್ತಾ? 
ದಾವಣಗೆರೆ ಜಿಲ್ಲೆಯಲ್ಲಿಯೇ ಒಟ್ಟಾರೆ ಅಂದಾಜು 78 ಸಾವಿರ ಹೆಕ್ಟೇರ್‍ನಲ್ಲಿ ರೈತರು ಅಡಕೆ ಹಾಕಿದ್ದಾರೆ. ಅದರಲ್ಲಿ ಚನ್ನಗಿರಿ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ 43 ಸಾವಿರ ಹೆಕ್ಟೇರ್ ಅಡಕೆ ಬೆಳೆಯಲಾಗಿದೆ. ಹೊನ್ನಾಳಿ ಮತ್ತು ನ್ಯಾಮತಿಯಲ್ಲಿ 18 ಸಾವಿರ ಹೆಕ್ಟೇರ್ ಮತ್ತು ದಾವಣಗೆರೆ ಭಾಗದಲ್ಲಿ 17 ಸಾವಿರ ಹೆಕ್ಟೇರ್‍ನಲ್ಲಿ ಅಡಕೆ ಬೆಳೆಯಲಾಗಿದೆ. ವೈವಿಧ್ಯಯತೆಯಿರುವ ಜಗಳೂರು ಭಾಗದಲ್ಲಿ 3000ಗೂ ಹೆಚ್ಚು ಬೆಳೆಯಲಾಗಿದೆ. ಕೇವಲ ಅಡಕೆ ಬೆಳೆಯದೆ ಅಂತರ ಬೆಳೆಯನ್ನು ಬೆಳೆಯಬೇಕು. ಆಗ ಮಾತ್ರ ರೈತರು ಆರ್ಥಿಕವಾಗಿ ಸಬಲರಾಗಲು ಸಾಧ್ಯ.
-ರಾಘವೇಂದ್ರ ಪ್ರಸಾರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕರು.

ಸಾವಯವ ಕೃಷಿ ಕಡೆ ಮುಖಮಾಡಿ: 
ಇತ್ತೀಚೆಗೆ ಅಡಕೆಗೆ ವಿವಿಧ ರೋಗ ಲಕ್ಷಣಗಳು ಕಂಡು ಬರುತ್ತಿದ್ದು ರೈತರು ಆತಂಕಪಡುವ ಅಗತ್ಯವಿಲ್ಲ. ರೈತರು ಮೊದಲು ಸಾವಯವ ಕೃಷಿಕಡೆ ವಾಲಬೇಕು. ಆಗ ಇಂತಹ ರೋಗ ನಿಯಂತ್ರಣ ಮಾಡಬಹುದು. ಜೊತೆಗೆ ಸಗಣಿ ಗೊಬ್ಬರ, ಸೆಣಬು, ಡಯಾಂಚ, ಎರೆಹುಳು ಗೊಬ್ಬರ, ಬೇವಿನ ಹಿಂಡಿ ಹಾಕಿದರೆ `ಭೂಮಿಯ ಫಲವತ್ತೆಯನ್ನು ಕಾಪಾಡಬಹುದು.


                                          -ಎಂ.ಜಿ.ಬಸವನಗೌಡ, ತೋಟಗಾರಿಕೆ ವಿಜ್ಞಾನಿ, ಕೆವಿಕೆ, 9483426955

ರೋಗಕ್ಕೆ ಈ ಔಷಧ ಸಿಂಪಡಿಸಿ: 
ಇತ್ತೀಚೆಗೆ ನಾಟಿ ಮಾಡಿರುವ ಅಡಕೆ ಸಸಿಗಳಿಗೆ ಸುಳಿ ತಿಗಣೆ ಕಂಡು ಬಂದಿದೆ. ಅದೇನು ಅಷ್ಟಾಗಿ ಹಾನಿ ಮಾಡುವುದಿಲ್ಲ. ಅದಕ್ಕೆ ಫೋರೇಟ್, ಥಿರೋಡಾನ್ ಔಷಧವನ್ನು ಸಣ್ಣ ಬಟ್ಟೆಯಲ್ಲಿ ಸ್ವಲ್ಪ ಪ್ರಮಾಣಕಟ್ಟಿ ಸುಳಿಯಲ್ಲಿ ಇಡಬೇಕು. ಆಗ ತಿಗಣೆಗಳು ನಾಶವಾಗುತ್ತವೆ.
-ವೆಂಕಟೇಶ್ ಮೂರ್ತಿ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿದೇರ್ಶಕರು ಜಗಳೂರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!