ಸುದ್ದಿವಿಜಯ,ದಾವಣಗೆರೆ: ಶ್ರೀಮಂತ ಕ್ಷೇತ್ರವೆಂದೆ ಎನ್ನಿಸಿಕೊಂಡಿರುವ ದಾವಣಗೆರೆ ಉತ್ತರದಲ್ಲಿ 2018ರಲ್ಲಿ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ವಿರುದ್ಧ ಸೋಲುಂಡಿದ್ದ ಎಸ್.ಎಸ್.ಮಲ್ಲಿಕಾರ್ಜುನ್ ಗೆ ಈ ಬಾರಿ ಸಚಿವ ಸ್ಥಾನ ಸಿಕ್ಕಿದೆ.
ಇನ್ನಾದರೂ ಬೆಣ್ಣೆ ನಗರಿ ಇನ್ನಷ್ಟು ಅಭಿವೃದ್ಧಿಯಾಗುತ್ತಾ ಎಂದು ಕಾದು ನೋಡಬೇಕು.
ಕಳೆದ ಬಾರಿ ಚುನಾವಣೆಯಲ್ಲಿ ಸಾಕಷ್ಟು ಅನುದಾನ ತಂದರೂ ಜನ ಮತಹಾಕಿರಲಿಲ್ಲ. ಅಲ್ಲದೇ ಒಳ ಒಡೆತ ಕೂಡ ಇತ್ತು. ಆದರೆ ಈ ಬಾರಿ ಎಚ್ಚೆತ್ತುಕೊಂಡ ಎಸ್.ಎಸ್.ಮಲ್ಲಿಕಾರ್ಜುನ್ ಇಡೀ ಕ್ಷೇತ್ರಾದ್ಯಂತ ಅದ್ದೂರಿ ಪ್ರಚಾರ ನಡೆಸಿದರು.
ಅಲ್ಲದೇ ಎದುರಾಳಿ ಕೂಡ ಅಷ್ಟೊಂದು ಸ್ಟ್ರಾಂಗ್ ಇರದ ಕಾರಣ ನಿರಾಸಯವಾಗಿ ಗೆಲುವು ಸಾಧಿಸಿದರು. ಈಗ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲೆಯಿಂದ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ್ ಸಚಿವ ಸಂಪುಟ ಸೇರಿದ್ದಾರೆ.
ಬೆಳಗ್ಗೆ ರಾಜಭವನದಲ್ಲಿ 24 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದು, ಎಸ್.ಎಸ್ ಮಲ್ಲಿಕಾರ್ಜುನ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಜಿಲ್ಲೆಯಲ್ಲಿ 6 ಕಾಂಗ್ರೆಸ್ ಶಾಸಕರು ಇದ್ದು, ಅತಿ ಹಿರಿಯರಾದ ದಕ್ಷಿಣ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಹೊನ್ನಾಳಿ ಕ್ಷೇತ್ರದ ಶಾಸಕ ಡಿ.ಜಿ. ಶಾಂತನಗೌಡ ಇದ್ದರು. ಎಸ್.ಎಸ್. ಮಲ್ಲಿಕಾರ್ಜುನ್ ಅವರು 1999ರಲ್ಲಿ ಎಸ್.ಎಂ. ಕೃಷ್ಣ ಸರಕಾರದಲ್ಲಿ ಯುವಜನ ಸೇವೆ ಮತ್ತು ಕ್ರೀಡಾ ಸಚಿವರಾಗಿದ್ದರು.
2013ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ತೋಟಗಾರಿಕೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾಗಿದ್ದರು. ಕಳೆದ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ಯಾರೊಬ್ಬರಿಗೂ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಹೊರ ಜಿಲ್ಲೆಯವರೇ ಉಸ್ತುವಾರಿ ಸಚಿವರಾಗಿದ್ದರು.
ಶಾಸಕ ಶಾಮನೂರು ಶಿವಶಂಕರಪ್ಪ ಬಕ್ಕೇಶ್, ಗಣೇಶ್, ಮಲ್ಲಿಕಾರ್ಜುನ್ ಮೂರು ಜನ ಮಕ್ಕಳಿದ್ದಾರೆ. ಎಸ್‌ಎಸ್‌ಎಂ ಸೆ..22,1967 ಜನಿಸಿದ್ದು, ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್, (ಡೆಂಟಲ್ ಡಾಕ್ಟರ್), ಎರಡು ಗಂಡು, ಒಂದು ಹೆಣ್ಣು ಮಕ್ಕಳ ತಂದೆಯಾಗಿದ್ದು, ಎಸ್‌ಎಸ್‌ಎಂ ಬಿಕಾಂ ವಿದ್ಯಾರ್ಹತೆ ಹೊಂದಿದ್ದಾರೆ.
1998, 1999, 2013, 2023 ನಾಲ್ಕು ಬಾರಿ ಗೆಲುವು ಸಾಧಿಸಿದ್ದಾರೆ. 2004-05, 2009-10, 2014-15 ರಲ್ಲಿ ಲೋಕಸಭೆ ಯಲ್ಲಿ ಸ್ಫರ್ಧೆ ಮಾಡಿದ್ದಾರೆ. ದಾವಣಗೆರೆ ಬಾಪೂಜಿ ವಿದ್ಯಾಸಂಸ್ಥೆ ಜಂಟಿ ಕಾರ್ಯದರ್ಶಿ, ಎಸ್‌ಎಸ್ ಹಾಸ್ಟಿಟಲ್ ಚೇರ‌್ಮನ್, ಬಾಪೂಜಿ ಸಹಕಾರ ಬ್ಯಾಂಕ್ ಉಪಾಧ್ಯಕ್ಷ, ಹಲವಾರು ಸಂಘ ಸಂಸ್ಥೆಗಳು, ಧಾರ್ಮಿಕ ಕ್ಷೇತ್ರಗಳಿಗೆ ಗೌರವಾಧ್ಯಕ್ಷರು ಆಗಿದ್ದಾರೆ.
ದೋಸ್ತಿ ಸರಕಾರ ಇದ್ದಾಗ ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ಯಾರಿಗೂ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಅಲ್ಲದೇ ಆಗ ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಮಲೆನಾಡು ಶಿವಮೊಗ್ಗ ಸೇರಿಸಂತೆ ಈ ನಾಲ್ಕು ಜಿಲ್ಲೆಗಳಲ್ಲಿ ಯಾರೊಬ್ಬರಿಗೂ ಸಚಿವ ಸ್ಥಾನ ನೀಡಿರಲಿಲ್ಲ.
ಹೊರಗಿನವರಿಗೆ ಉಸ್ತುವಾರಿ ಪಟ್ಟ ಕಟ್ಟಲಾಗಿತ್ತು. ಆದರೆ ಅವರು ಜಯಂತ್ಯುತ್ಸವಕ್ಕಷ್ಟೆ ಸೀಮಿತ ಉಸ್ತುವಾರಿ ಸಚಿವರಾಗಿದ್ದರು. ಆಗ ಗುಬ್ಬಿ ಶ್ರೀನಿವಾಸ ಉಸ್ತುವಾರಿ ಹುದ್ದೆ ವಹಿಸಿಕೊಂಡಿದ್ದರು. ನಂತರ ಬಿಜೆಪಿ ಸರಕಾರ ಬಂದಾಗಲೂ ಬೆಂಗಳೂರಿನ ಕೆಆರ್‌ಪುರಂ ಶಾಸಕ ಎರಡು ಬಾರಿ ಉಸ್ತುವಾರಿ ಸಚಿವರಾಗಿದ್ದರು. ಇದರಿಂದ ಜಿಲ್ಲೆಯ ಅಭಿವೃದ್ಧಿ ಕೆಲಸಗಳು ನಿಂತು ಹೋಗಿದ್ದವು. ಈಗ ದಾವಣಗೆರೆ ಎಸ್‌ಎಸ್‌ಎಂಗೆ ಸಚಿವ ಸ್ಥಾನ ನೀಡಿದ್ದು, ಜಿಲ್ಲೆಗೊಂದಿಷ್ಟು ಸಿಹಿ ಸಿಕ್ಕಂತಾಗಿದೆ.
2024ರ ಲೋಕ ಸಭೆ ಚುನಾವಣೆ ಹಿನ್ನೆಲೆ ಸಿಕ್ತಾ ಸಚಿವ ಸ್ಥಾನ :
ದಾವಣಗೆರೆ ಮಧ್ಯ ಕರ್ನಾಟಕದ ಹಬ್ ಆಗಿದ್ದು, ತಂದೆ ಶಾಸಕ ಶಾಮನೂರು ಶಿವಶಂಕರಪ್ಪ ವೀರಶೈವಲಿಂಗಾಯಿತದ ಪ್ರಭಾವಿ ನಾಯಕ.
ಅಲ್ಲದೇ ಮಧ್ಯಕರ್ನಾಟಕದಲ್ಲಿ ಲಿಂಗಾಯಿತ ಮತಗಳು ಹೆಚ್ಚು ಇರುವ ಕಾರಣ ಲೋಕಸಭೆ ಚುನಾವಣೆ ಹಿನ್ನೆಲೆ ಇಟ್ಟುಕೊಂಡು ಸಚಿವ ಸ್ಥಾನ ನೀಡಲಾಗಿದೆ.
ಇನ್ನು ಶಾಮನೂರು ಶಿವಶಂಕರಪ್ಪ ಹಿರಿಯರಿದ್ದು ದಾವಣಗೆರೆ ದಕ್ಷಿಣದಲ್ಲಿ ಗೆದ್ದಿದ್ದಾರೆ. ಹಿರಿತನದಲ್ಲಿ ಅವರಿಗೆ ಸಚಿವ ಸ್ಥಾನ ನೀಡಬೇಕಾಗಿದ್ದು, ಮಗನಿಗೆ ಈ ಭಾಗ್ಯ ಒಲಿದಿದೆ. ದಾವಣಗೆರೆ ಎಷ್ಟರ ಮಟ್ಟಿಗೆ ಅಭಿವೃದ್ಧಿ ಯಾಗುತ್ತದೆ ಎಂದು ಕಾದು ನೋಡಬೇಕಿದೆ.