ಸುದ್ದಿವಿಜಯ,ಜಗಳೂರು: ಪ್ರಧಾನ ಮಂತ್ರಿ ಆದರ್ಶ ಗ್ರಾಮ ಹುಚ್ಚಂಗಿಪುರ ಗ್ರಾಮಕ್ಕೆ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪ ನಿರ್ದೇಶಕಿ ರೇಷ್ಮ ಡಿ ಕೌಸರ್ ಭೇಟಿ ನೀಡಿ ಅಭಿವೃದ್ದಿ ಕಾಮಗಾರಿಗಳನ್ನು ಪರಿಶೀಲಿಸಿದರು.
ಸುಮಾರು 11 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ, 2 ಲಕ್ಷ ವೆಚ್ಚದ ಶೌಚಗೃಹ ಹಾಗೂ ಅಂಗನವಾಡಿ ಕೇಂದ್ರಗಳನ್ನು ಖುದ್ದು ಪರಿಶೀಲಿಸಿ ಭೂ ಸೇನಾ ನಿಗಮದ ಅಧಿಕಾರಿಗಳಿಂದ ಕಾಮಗಾರಿ ವಿವರ ಪಡೆದರು.
2017-18ನೇ ಸಾಲಿನ ಕೇಂದ್ರ ಸರಕಾರದ ಮಹತ್ವದ ಯೋಜನೆಗಳಲ್ಲೊಂದಾದ ಆದರ್ಶ ಗ್ರಾಮದಲ್ಲಿ 40 ಲಕ್ಷ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಬಹುತೇಕ ಕಟ್ಟಡ ಪೂರ್ಣಗೊಳ್ಳುವ ಹಂತದಲ್ಲಿದ್ದು, ಕಾಮಗಾರಿ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ಎಚ್ಚರಿಕೆ ವಹಿಸಿಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಆದರ್ಶ ಗ್ರಾಮದಲ್ಲಿ ಶಾಲಾ ಮತ್ತು ಅಂಗನವಾಡಿ ಕೇಂದ್ರಗಳಿಗೆ ಮೊದಲ ಆದ್ಯತೆ ನೀಡಲಾಗಿದೆ. ಸೋಲಾರ್ ದೀಪ, ಹೈಮಸ್ಟ್ ದೀಪ ಅಳವಡಿಸಿ ಕತ್ತಲು ಮುಕ್ತ ಗ್ರಾಮ ಮಾಡಲಾಗಿದೆ. ಇನ್ನು ಸಾಕಷ್ಟು ಅಭಿವೃದ್ದಿ ಕೆಲಸಗಳಾಗಬೇಕಾಗಿದೆ ಎಂದರು.
ಹೊಸ ಅಂಗನವಾಡಿ ನಿರ್ಮಾಣಕ್ಕೆ ಸೂಚನೆ:
ಅಂಗನವಾಡಿಗೆ ಭೇಟಿ ನೀಡಿದ್ದ ವೇಳೆ ಕತ್ತಲಲ್ಲಿ ಕುಳಿತಿದ್ದ ಮಕ್ಕಳು, ಅಲ್ಲಲ್ಲಿ ಬಿದ್ದಿದ್ದ ಮಣ್ಣಿನ ರಾಶಿ, ಮೊಳಉದ್ದ ಬೆಳೆದಿರುವ ಗಿಡಗಂಟೆಗಳನ್ನು ಕಂಡ ಜಿಲ್ಲಾ ಉಪ ನಿರ್ದೇಶಕಿ ರೇಷ್ಮ ಡಿ ಕೌಸರ್ ತಕ್ಷಣವೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿಗೆ ಕರೆ ಮಾಡಿ, ಹೊಸ ಅಂಗನವಾಡಿ ಕೇಂದ್ರ ಆರಂಭವಾಗುವವರೆಗೂ ಮಕ್ಕಳಿಗೆ ರಜೆ ಕೊಡಿ ಎಂದು ಸೂಚನೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ ಮಾತನಾಡಿ, ತಾಲೂಕಿನ 32 ಗ್ರಾಮಗಳು ಪ್ರಧಾನ ಮಂತ್ರಿ ಆದರ್ಶ ಗ್ರಾಮಕ್ಕೆ ಆಯ್ಕೆಯಾಗಿವೆ. ವಿವಿಧ ಯೋಜನೆಗಳ ಅನುದಾನಗಳನ್ನು ಬಳಿಸಿಕೊಂಡು ಗ್ರಾಮಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.
ಹುಚ್ಚಂಗಿಪುರ ತಾಲೂಕಿನ ಗಡಿ ಗ್ರಾಮವಾಗಿದ್ದರಿಂದ ಶಾಸಕರು ಈ ಗ್ರಾಮವನ್ನೇ ಆಯ್ಕೆ ಮಾಡಿಕೊಂಡು 40 ಲಕ್ಷ ಅನುದಾನ ನೀಡಿ ಅಭಿವೃದ್ದಿಗೆ ಒತ್ತು ನೀಡಿದ್ದಾರೆ. ಹಳೆ ಕಟ್ಟಡದಲ್ಲಿ ತರಗತಿ ಕೇಳುತ್ತಿದ್ದ ಮಕ್ಕಳಿಗೆ ಸುಂದರವಾದ ಕಟ್ಟಡ ನಿರ್ಮಾಣಕೊಡಲಾಗಿದ್ದು, ಶೀಘ್ರವೇ ಉದ್ಘಾಟನೆ ಮಾಡಿಸಲಾಗುವುದು ಎಂದರು.