ಸುದ್ದಿ ವಿಜಯ, ಜಗಳೂರು: ಸಂಕಷ್ಟದಲ್ಲಿರುವ ಅನ್ನದಾತರ ನೆರವಿಗೆ ರೈತ ಉತ್ಪಾದಕ ಕಂಪನಿಗಳು ವರದಾನವಾಗಲಿವೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಯೋಗದೊಂದಿಗೆ 75ನೇ ಸ್ವಾತಂತ್ರೋತ್ಸವದ bidrಅಂಗವಾಗಿ ದೇಶದಲ್ಲಿ ನಾನಾ ಭಾಗಗಳಲ್ಲಿ ಅಮೃತ ರೈತ ಉತ್ಪಾದಕ ಕಂಪನಿಗಳು ಸ್ಥಾಪನೆಯಾಗಿದ್ದು, ರೈತರ ಆದಾಯ ದ್ವಿಗುಣಕ್ಕೆ ನೆರವಾಗಲಿವೆ ಎಂದು ಯೋಜನಾ ಆಯೋಗದ ಸದಸ್ಯ ಡಾ.ಕೆ.ಪಿ.ಬಸವರಾಜಪ್ಪ ಹೇಳಿದರು.
ಗುರುವಾರ ಜಗಳೂರು ತಾಲೂಕಿನ ಬಿದರಕೆರೆ ಗ್ರಾಮದಲ್ಲಿ ತರಳಬಾಳು ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳ ಜನ್ಮದಿನೋತ್ಸವದ ಅಂಗವಾಗಿ ಆರಂಭವಾದ ‘ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿ’ಯನ್ನು ವರ್ಚುಲ್ ಮೂಲಕ ಉದ್ಘಾಟಿಸಿ ಮಾತನಾಡಿದರು. ಅಮೃತ ಯೋಜನೆ ಅಡಿಯಲ್ಲಿ ರೈತರ ಏಳಿಗೆಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಾವಣಗೆರೆ, ಚಿತ್ರದುರ್ಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ 18 ರೈತ ಉತ್ಪಾದಕ ಕಂಪನಿಗಳನ್ನು ಆರಂಭಿಸಲು ಆರ್ಥಿಕ ನೆರವು ನೀಡಿದ್ದಾರೆ.
ಸಂಪನ್ಮೂಲ ಸಂಸ್ಥೆಯಾದ ದಾವಣಗೆರೆಯ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥರಾದ ಡಾ.ಟಿ.ಎನ್. ದೇವರಾಜ್ ಮತ್ತು ಬೇಸಾಯ ತಜ್ಞ ಬಿ.ಒ. ಮಲ್ಲಿಕಾರ್ಜುನ್ ಸೇರಿದಂತೆ ಅನೇಕ ಕೃಷಿ ವಿಜ್ಞಾನಿಗಳ ನೇತೃತ್ವದಲ್ಲಿ ಆರಂಭವಾಗಿರುವ ಎಫ್ಪಿಒಗಳು ರೈತರ ಬೆಳೆಗಳಿಗೆ ಮೌಲ್ಯವರ್ಧನೆ ಮಾಡುವಲ್ಲಿ ಸಹಕಾರಿಯಾಗಲಿದೆ. ಕಂಪನಿ ಆರಂಭವಾಗಿ ಕೇವಲ 120 ದಿನಗಳಲ್ಲಿ 40 ಲಕ್ಷರೂ ವ್ಯವಹಾರ ಮಾಡಿರುವುದು ಆಶಾದಾಯಕ ಬೆಳವಣಿಗೆ. ರೈತರಿಗೆ ಬೇಕಾಗಿರುವ ರಸಗೊಬ್ಬರ, ಬಿತ್ತನೆ ಬೀಜಗಳನ್ನು ಕಡಿಮೆ ದರದಲ್ಲಿ ಪೂರೈಕೆ ಮಾಡಿರುವುದು ಶ್ಲಾಘನೀಯ ಎಂದರು.
ಸಿರಿಗೆರೆಯ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳು ರೈತರ ಅಭ್ಯುದಯಕ್ಕಾಗಿ ತಾಲೂಕಿನ 57 ಕೆರೆಗಳ ಭರ್ತಿಗೆ ಏತ ನೀರಾವರಿ ಯೋಜನೆಯ ಜೊತೆಗೆ ಈ ಎಫ್ಪಿಒಗಳನ್ನು ಸ್ಥಾಪಿಸಲು ಸಾಕಷ್ಟು ನೆರವು ನೀಡಿದ್ದಾರೆ. ರೈತರ ಸಂಕಷ್ಟಗಳನ್ನು ದೂರ ಮಾಡಲು ಶ್ರೀಗಳು ಸರಕಾರದ ಮಟ್ಟದಲ್ಲಿ ಸಾಕಷ್ಟು ಹೋರಾಟ ಮಾಡುತ್ತಿರುವುದು ರೈತ ಸಮುದಾಯದ ಅಭಿವೃದ್ಧಿಗೆ ಪೂರಕ ಎಂದು ಸ್ಮರಿಸಿದರು.
ಮೌಲ್ಯವರ್ದನೆಗೆ ಎಫ್ಪಿಒಗಳು ನೆರವು
ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಬಿ.ಒ.ಮಲ್ಲಿಕಾರ್ಜುನ ಮಾತನಾಡಿ, ರೈತ ಈಜಗತ್ತಿನ ಜೀವ ಸ್ತಂಬ. ರೈತರು ಬೆಳೆದ ಬೆಳೆಗಳ ಮೌಲ್ಯವರ್ದನೆಗೆ ಎಫ್ಪಿಒಗಳು ಸಾಕಷ್ಟು ಸಹಕಾರಿಯಾಗಲಿವೆ. ಉತ್ಪಾದನೆಗೆ ತಕ್ಕಂತೆ ಬೆಲೆ ಸಿಗಬೇಕಾದರೆ ಅದಕ್ಕೆ ಎಫ್ಪಿಒಗಳು ವೇದಿಕೆಯಾಗಲಿವೆ. ಈಗಾಗಲೇ ಬಿದರಕೆರೆಯಲ್ಲಿ ಆರಂಭವಾಗಿರುವ ಕಂಪನಿ ಬಿತ್ತನೆಗೆ ಬೇಕಾಗುವ ಅಗತ್ಯ ಪರಿಕರಗಳನ್ನು ಕಡಿಮೆದರದಲ್ಲಿ ನೀಡುತ್ತಿರುವುದು ಷೇರುದಾರ ರೈತರಿಗೆ ವರದಾನವಾಗಿದೆ. ಈ ಕಂಪನಿ ಆರಂಭಕ್ಕೆ ಶ್ರಮಿಸಿದ ಎಲ್ಲಾ ನಿರ್ದೇಶಕರು ಮತ್ತು ಸಿಇಒ ಹಾಗೂ ಎಲ್ಲಾ ಸಿಬ್ಬಂದಿ ವರ್ಗಕ್ಕೆ ಚಿರಋಣಿ ಎಂದರು.
ರೈತರಿಗೆ ಎಫ್ಪಿಒಗಳ ಮೂಲಕ ಸರಕಾರದ ಸೌಲಭ್ಯ
ಸಹಯಾಕ ಕೃಷಿ ನಿರ್ದೇಶಕ ಬಿ.ವಿ.ಶ್ರೀನಿವಾಸುಲು ಮಾತನಾಡಿ, ಸರಕಾರದಿಂದ ಬರುವ ಸೌಲಭ್ಯಗಳನ್ನು ಎಫ್ಪಿಒಗಳ ಮೂಲಕ ಪ್ರಾಮಾಣಿಕವಾಗಿ ರೈತರಿಗೆ ತಲುಪಿಸಲು ಕೃಷಿ ಇಲಾಖೆ ಬದ್ಧವಾಗಿದೆ. ಸೌಲಭ್ಯಗಳನ್ನು ಪಡೆದುಕೊಂಡು ರೈತರು ಅಭಿವೃದ್ಧಿಯಾಗಲು ಈ ಕಂಪನಿಗಳು ಸೇತುವೆಯಾಗಲಿವೆ ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಗೃಹ ವಿಜ್ಞಾನಿ ಸುಪ್ರಿಯಾ ಪಾಟೀಲ್, ಎಫ್ಪಿಒ ಅಧ್ಯಕ್ಷರಾದ ಎಂ.ಎಚ್.ಮಂಜುನಾಥ್, ಉಪಾಧ್ಯಕ್ಷರಾದ ಸೋಮನಗೌಡ ಎಸ್.ಎಂ. ನಿರ್ದೇಶಕರಾದ ಬಿದರಕೆರೆ ಉಮಾಪತಿ, ಎಚ್.ಜಿ.ನಾಗರಾಜ್, ಬಸವನಗೌಡ, ಅರಿಶಿಣಗುಂಡಿ ನಾಗರಾಜ್, ಕವಿತಾ ಸ್ವಾಮಿ, ರೇವಣಸಿದ್ದಪ್ಪ, ಕಲ್ಲೇದೇವರಪುರ ಕೃಷ್ಣಮೂರ್ತಿ, ಕೃಷಿ ವಿಜ್ಞಾನಿಗಳಾದ ಎನ್.ಡಿ.ಪವನ್ ಪಾಟೀಲ್, ಬಿದರಕೆರೆ ಎಫ್ಪಿಒ ಸಿಇಒ ಮನೋಜ್ಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.