ಮಹೇಶ್ವರಪ್ಪ ನಿವೃತ್ತಿ ನೆನಪಿಗಾಗಿ ಮಗು ದತ್ತುಪಡೆದ ಶಾಸಕ ದೇವೇಂದ್ರಪ್ಪ

Suddivijaya
Suddivijaya July 31, 2023
Updated 2023/07/31 at 2:37 PM

ಸುದ್ದಿವಿಜಯ, ಜಗಳೂರು: ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ನಿವೃತ್ತಿಯಾದ ನೆನಪಿಗಾಗಿ ಗ್ಯಾಂಗ್ರೀನ್ ಕಾಯಿಲೆಯಿಂದ ಕಾಲಿನ ಎರಡೂ ಪಾದ ಕಳೆದುಕೊಂಡ ಐದು ವರ್ಷದ ತುಳಸಿ ಎಂಬ ಹೆಣ್ಣು ಮಗುವನ್ನು ದತ್ತು ಪಡೆಯುತ್ತಿದ್ದೇನೆ ಎಂದು ಶಾಸಕ ದೇವೇಂದ್ರಪ್ಪ ಕಾರ್ಯಕ್ರಮದಲ್ಲಿ ಘೋಷಿಸಿದರು.

ಪಟ್ಟಣದ ಗುರುಭವನದಲ್ಲಿ ಸೋಮವಾರ ತಾಲ್ಲೂಕಿನ ಎಲ್ಲಾ ಅಧಿಕಾರಿಗಳು, ನೌಕರರು, ಎಲ್ಲ ಸಂಘ ಸಂಸ್ಥೆಗಳು ಹಾಗೂ ನಾಗರಿಕರು ಒಟ್ಟುಗೂಡಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಅವರ ವಯೋಸಹಜ ನಿವೃತ್ತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸುದೀರ್ಘ 33 ವರ್ಷಗಳ ಕಾಲ ಸರಕಾರಿ ಸೇವೆ ಸಲ್ಲಿಸಿ ನನಗೂ ಸೇರಿ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನದಾತರಾಗಿರುವ ಮಹೇಶ್ವರಪ್ಪ ಅವರ ಕಾರ್ಯ ಅವಿಸ್ಮರಣೀಯ.

 ಜಗಳೂರು ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ನಿವೃತ್ತಿ ಹಿನ್ನೆಲೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಗುವನ್ನು ದತ್ತು ಪಡೆದ ಶಾಸಕ
 ಜಗಳೂರು ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ನಿವೃತ್ತಿ ಹಿನ್ನೆಲೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಗುವನ್ನು ದತ್ತು ಪಡೆದ ಶಾಸಕ ದೇವೇಂದ್ರಪ್ಪ

1980-81 ರಲ್ಲಿ ನಾನು ಚಿತ್ರದುರ್ಗದಲ್ಲಿ ಪದವಿ ಓದುವಾಗ ಸಂಕಷ್ಟದಲ್ಲಿದ್ದ ನನಗೆ ಊಟದ ವ್ಯವಸ್ಥೆ ಮಾಡುತ್ತಿದ್ದ ಪುಣ್ಯಾತ್ಮರು. ಪತ್ನಿ ಗಂಗಮ್ಮ ಸಹಕಾರ ಅವರಿಗೆ ಕೊಟ್ಟಿದ್ದರಿಂದಲೇ ಅವರು ಈ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಈಶ್ವರ್ ಸುಣಕಲ್ ಎನ್ನುವ ಕವಿ ಹೇಳಿದಂತೆ ‘ಜಗವೆಲ್ಲ ನಗುತಿರಲಿ ಅವರ ಅಳುವೆಲ್ಲ ನನಗಿರಲಿ ಎಂದು ಹೇಳುತ್ತಾರೆ. ಹಾಗೆ ಬದುಕಿದವರು ಮಹೇಶ್ವರಪ್ಪನವರು.

ಅವರಿಂದ ಸಹಕಾರ ಪಡೆದ ಅಧಿಕಾರಿಗಳಿಲ್ಲ. ನಾನೂ ಸೇರಿದಂತೆ ಅನೇಕರು ಅವರಿಂದ ನೆರವಿನ ಹಸ್ತ ಚಾಚಿದ್ದೇವೆ. ಅವರೊಂದು ಅಕ್ಷಯ ಪಾತ್ರೆಯಿದ್ದಂತೆ. ಅವರನ್ನು ನಾನು ಕಾಗೆಗೆ ಹೋಲಿಸುತ್ತೇನೆ. ಕಾರಣ ‘ಕಾಗೆಯೊಂದಗಳು ಕಂಡರೆ ಕೂಗಿ ಕರೆಯದೇ ತಿನ್ನುವುದೇ ತನ್ನ ಬಳಗವನು’ ಎಂದು ಬಸವಣ್ಣ ಬಣ್ಣಿಸಿದ್ದಾರೆ.

ಅಂತೆ ಅವರು ಜಾತಿ, ಭೇದ ಮಾಡದೇ ಎಲ್ಲರಿಗೂ ಸಹಕಾರ ನೀಡಿದ್ದಾರೆ. ದುರಾಸೆಯಿಲ್ಲದ ಪರೋಪಕಾರಿ ಮನುಷ್ಯ ಅವರು ಎಂದು ಸ್ಮರಿಸಿದರು.

ನಾನು ಶಾಸಕರಾಗುವ ಮುನ್ನ ತೋರಣಗಟ್ಟೆ ಗ್ರಾಮಕ್ಕೆ ಹೋಗಿದ್ದಾಗ ಬಡಪ್ಪ ಸಾವಿತ್ರಮ್ಮ ದಂಪತಿ ಪುತ್ರಿ ತುಳಸಿ ಎಂಬ ಮಗು ಹುಟ್ಟುತ್ತಲ್ಲೇ ಗ್ಯಾಂಗ್ರೀನ್ ಕಾಯಿಲೆಗೆ ತುತ್ತಾಗಿದ್ದು ಗಮನಕ್ಕೆ ಬಂದಿತ್ತು.

ಶಾಸಕರಾದ ನಂತರ ನಾನು ತುಳಸಿಯನ್ನು ದತ್ತು ಪಡೆದು ಜೀವನ ಪೂರ್ತಿ ಆಕೆಯ ವಿದ್ಯಾಭ್ಯಾಸ, ಆರೋಗ್ಯ ಸಂಬಂಧಿಸಿದ ಖರ್ಚು ಭರಿಸುತ್ತೇನೆ. ಮಗುವನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ಸೇರಿಸಿ ಕೃತಕ ಪಾದ ಜೋಡಣೆ ಮಾಡಿಸಿ ಓಡಾಡುವಂತೆ ಮಾಡಿದ್ದೇನೆ. ಮುಂದೆಯೂ ಆಕೆಯ ಎಲ್ಲ ಖರ್ಚುಗಳನ್ನು ನಾನೇ ಭರಿಸುತ್ತೇನೆ ಎಂದು ಘೋಷಿಸಿದರು.

ಭಾವುಕರಾದ ಮಹೇಶ್ವರಪ್ಪ:

33 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಮಹೇಶ್ವರಪ್ಪ ಮಾತು ಆರಂಭಿಸುತ್ತಿದ್ದಂತೆ ಭಾವುಕರಾದರು. ನಾನು 1995 ರಲ್ಲಿ ಜಗಳೂರಿಗೆ ಬಂದಾಗ ಕುಡಿಯುವ ನೀರಿಗೂ ತತ್ವರವಾಗಿತ್ತು. ಆದರೆ ಆಗ ಕಾಯಿಲೆ ಇರುತ್ತಿರಲಿಲ್ಲ.

ಆದರೆ ಈಗ ಬಿಸ್ಲೆರಿ ನೀರು ಕುಡಿದರೂ ಕಾಯಿಲೆ ಬರುತ್ತಿವೆ. 33 ವರ್ಷಗಳ ಕಾಲ ಕಾರ್ಯನಿರ್ವಹಿಸಿದ ನನಗೆ ಆತ್ಮತೃಪ್ತಿಯಿದೆ. ನಾನು ಕರುಳಿನ ಗ್ಯಾಂಗ್ರೀನ್ ಕಾಯಿಲೆಯಿಂದ ಆಸ್ಪತ್ರೆ ಸೇರಿದ್ದು ಬಿಟ್ಟರೆ ನಾನು ಎಂದೂ ರಜೆ ತೆಗೆದುಕೊಂಡಿಲ್ಲ. ನಿಮ್ಮ ಋಣ ತೀರಿಸಲು ಅವಕಾಶಕ್ಕಾಗಿಯೇ ದೇವರು ನನ್ನನ್ನು ಬದುಕಿಸಿದ ಎಂದು ಹೇಳುವಾಗ ಅವರ ಕಣ್ಣಾಲಿಗಳು ತೇವಗೊಂಡಿದ್ದವು.

ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಮಾತನಾಡಿ, ಮಹೇಶ್ವರಪ್ಪ ಅವರು ಒಬ್ಬ ಜನಪ್ರಿಯ ಅಧಿಕಾರಿ ಎಂದು ಹೇಳಿಕೊಳ್ಳಲು ಹೆಮ್ಮೆ ಎನ್ನಿಸುತ್ತದೆ. ಬಡವರ ಕಷ್ಟಗಳಿಗೆ ಸ್ಪಂದಿಸುವ ಸಹೃದಯಿ ಅಧಿಕಾರಿ. ನನ್ನ ಕಾರ್ಯ ಅವಧಿಯಲ್ಲಿ ಇಂತಹ ಅಧಿಕಾರಿಯನ್ನು ನಾನು ಎಲ್ಲಿಯೂ ನೋಡಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ನಾಗರಾಜ್, ಸಿಪಿಐ ಎಂ.ಶ್ರೀನಿವಾಸ್‍ರಾವ್, ತಾಪಂ ಇಒ ವೈ.ಎಚ್.ಚಂದ್ರಶೇಖರ್, ನಿವೃತ್ತ ಇಓ ಲಕ್ಷ್ಮೀಪತಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಿಡಿಪಿಒ ಬೀರೇಂದ್ರಕುಮಾರ್, ಕೃಷಿ ಅಧಿಕಾರಿ ಮಿಥುನ್‍ಕಿಮಾವತ್, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ್‍ಮೂರ್ತಿ, ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಲಿಂಗರಾಜು, ನಿವೃತ್ತ ಅಧಿಕಾರಿ ನಾಗರಾಜ್,

ಅಶೋಕ್, ಅಜ್ಜಪ್ಪ, ಪಲ್ಲಾಗಟ್ಟೆ ಶೇಖರಪ್ಪ, ಮೋಹನ್‍ಕುಮಾರ್ ಮಹೇಶ್ವರಪ್ಪ ಅವರ ಪತ್ನಿ ಗಂಗಮ್ಮ, ಪುತ್ರಿ ಕೀರ್ತಿನಾ, ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್, ಟಿಎಚ್‍ಒ ನಾಗರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!