ಸುದ್ದಿವಿಜಯ, ಜಗಳೂರು: ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಡಬಲ್ ಎಂಜಿನ್ ಸರಕಾರಗಳಿಂದ ಯಾವುದೇ ಅಭಿವೃದ್ಧಿಯಾಗಿಲ್ಲ. ಆಡಳಿತ ವ್ಯವಸ್ಥೆ ಸಂಪೂರ್ಣ ವೈಫಲ್ಯವಾಗಿದ್ದು ಹೀಗಾಗಿ ದೇಶಕ್ಕೆ ಮತ್ತೊಮ್ಮೆ ಕಾಂಗ್ರೆಸ್ ಆಡಳಿತ ಅನಿವಾರ್ಯವಾಗಿದೆ ಎಂದು ಕೆಪಿಸಿಸಿ ಕ್ಷೇತ್ರ ಉಸ್ತುವಾರಿ ಅಮೃತೇಶ್ ಸ್ವಾಮಿ ಹೇಳಿದರು.
ಪಟ್ಟಣದ ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷ ಸಂಘಟನೆಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ದಾವಣಗೆರೆ-ಚಿತ್ರದುರ್ಗ ಅವಳಿ ಜಿಲ್ಲೆಗಳಲ್ಲಿ ಕಾಂಗ್ರೆಸ್ ಭದ್ರ ಕೋಟೆಯಾಗಿದೆ. ಆದರೆ ಕೆಲ ಸಣ್ಣಪುಟ್ಟ ಲೋಪ ದೋಷಗಳಿಂದ ಅಧಿಕಾರ ಕಳೆದುಕೊಂಡಿದೆ. ಮುಂಬರುವ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರ ಹಿಡಿಯಲು ಸಾಥ್ ನೀಡಬೇಕು ಎಂದರು.
ಚುನಾವಣೆ ಯಾವ ಸಮಯದಲ್ಲಾದರೂ ಬರಬಹುದು, ಕಾರ್ಯಕರ್ತರು ಈಗಿನಿಂದಲೇ ತಳಮಟ್ಟದಿಂದ ಪಕ್ಷ ಸಂಘಟಿಸಬೇಕು. ಕಾಂಗ್ರೆಸ್ ಸರ್ಕಾರದ ಅವದಿಯಲ್ಲಿ ಸಿದ್ದರಾಮಯ್ಯನವರು ಜನತೆಗೆ ನೀಡಿದ ಕಾರ್ಯಕ್ರಮಗಳನ್ನು ಮನ ಮುಟ್ಟುವಂತೆ ತಿಳಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ವೀಕ್ಷಕ ವಿಜಯ್ ಕುಮಾರ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ತಳಹದಿಯ ಮೇಲೆ ಕೇಡೆರ್ ಬೇಸ್ ಪಕ್ಷವನ್ನ ಸಂಘಟಿಸುವ ಮೂಲಕ ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕಿದೆ. ಹಿಂದೂ, ಮುಸ್ಲಿಂ ಎಂಬ ಕೋಮುಭಾವನೆ ಮೂಡಿಸಿ ಯುವಕರನ್ನ ದಾರಿ ತಪ್ಪಿಸುತ್ತಿದ್ದಾರೆ. ಇಡೀ ದೇಶವೇ ಕೆಲ ವ್ಯಕ್ತಿಗಳ ಕೈನಲ್ಲಿ ಇರುವುದನ್ನ ತಪ್ಪಿಸಿ ಜಾತ್ಯಾತೀಯ ತತ್ವದ ತಳಹದಿಯ ಮೇಲೆ ಸರಕಾರ ರಚಿಸಬೇಕಿದೆ ಎಂದರು.
ಜಿಲ್ಲಾ ದ್ಯಕ್ಷ ಹೆಚ್.ಬಿ.ಮಂಜಪ್ಪ ಮಾತನಾಡಿ, ಕ್ಷೇತ್ರದಲ್ಲಿ ಮಾಜಿ ಶಾಸಕ ಎಚ್.ಪಿ.ರಾಜೇಶ್ ಅವರು ಮಾಡಿದ ರಸ್ತೆಗಳಿಗೆ ಕನಿಷ್ಠ ಗುಂಡಿ ಮುಚ್ಚುವ ಕೆಲಸ ಈಗಿನ ಶಾಸಕರದ ಕೈಲಾಗಿಲ್ಲ. ಇನ್ನುನೇ ನಿರೀಕ್ಷಿಸಲು ಏನು ಸಾದ್ಯ ಎಂದು ವ್ಯಂಗ್ಯ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಚ್.ಪಿ.ರಾಜೇಶ್, ಕೆಪಿಸಿಸಿ ಎಸ್ಟಿ ಘಟಕ ರಾಜ್ಯಾಧ್ಯಕ್ಷರು ಕೆ.ಪಿ.ಪಾಲಯ್ಯ, ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ, ಬ್ಲಾಕ್ ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್, ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ ಗೌಡ್ರು ಇದ್ದರು.