ಸುದ್ದಿವಿಜಯ, ಜಗಳೂರು: ಮನುಷ್ಯರ ಪಾಪಗಳನ್ನು ಕ್ಷಮಿಸಲು ಪಾಪಿಗಳನ್ನು ಹುಡುಕಿಕೊಂಡು ಪರಿಶುದ್ದ ಆತ್ಮನಾಗಿ ಯೇಸು ಕ್ರಿಸ್ತನು ಭೂಮಿಯ ಮೇಲೆ ಜನಿಸಿ ಬಂದಿದ್ದಾನೆ ಎಂದು ಪಾಸ್ಟರ್ ಪೀಟರ್ ಬಾಬು ಹೇಳಿದರು.
ಇಲ್ಲಿನ ಶಕೀನಾ ಅಂತ್ಯಕಾಲ ಪ್ರಾರ್ಥನಾ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಯೇಸು ಕ್ರಿಸ್ತನ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು. ಆತನನ್ನು ನಂಬುವ ಒಬ್ಬನಾದರೂ ನಾಶವಾಗದೇ ಎಲ್ಲರೂ ನಿತ್ಯ ಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು. ದೇವರ ತನ್ನ ಮಗನ ಮುಖಾಂತರ ಲೋಕಕ್ಕೆ ರಕ್ಷಣೆ ಯಾಗಬೇಕೆಂದು ಆತನನ್ನು ಕಳಿಸಿಕೊಟ್ಟನು.
ಕೆಟ್ಟು ಹೋದವರನ್ನು ರಕ್ಷಿಸಲಿಕ್ಕೆ ಯೇಸು ಬಂದನು. ಆತನು ಒಂದು ಜಾತಿ, ಧರ್ಮಕ್ಕಾಗಿ ಅಲ್ಲದೇ ಎಲ್ಲಾ ಜನಾಂಗದವರ ಶಾಪ,ಪಾಪ ಅಳಿಸಲು ಕಲ್ವಾರಿ ಶಿಲುಬೆಯಲ್ಲಿ ತನ್ನ ರಕ್ತವನ್ನು ಸುರಿಸಿ ಪ್ರಾಣ ತ್ಯಾಗ ಮಾಡಿದನು. ಸತ್ತ ಮೂರನೇ ದಿನದಲ್ಲಿ ಜೀವಂತವಾಗಿ ಎದ್ದು ಬಂದನು ಎಂದರು.
ಇದೇ ವೇಳೆ ಮಕ್ಕಳು ಕಿರುನಾಟಕದ ಮೂಲಕ ಕ್ರಿಸ್ತನ ಜನನ ಮತ್ತು ಮರಣವನ್ನು ಪರಿಚಯಿಸಿದರು. ಕೆಲವು ಹಾಡುಗಳಿಗೆ ನೃತ್ಯ ಮಾಡಿ ನೆರದಿದ್ದವರ ಗಮನ ಸೆಳೆದರು.