ಸುದ್ದಿವಿಜಯ,ಜಗಳೂರು: ವ್ಯಕ್ತಿತ್ವ ನಿರ್ಮಾಣಕ್ಕೆ ಕ್ರೀಡೆ ಅತ್ಯಂತ ಸಹಕಾರಿಯಾಗಿದೆ. ಕೋವಿಡ್‍ನಿಂದ ಕಳೆದ ಎರಡು ವರ್ಷಗಳಲ್ಲಿ ಕ್ರೀಡಾ ಕ್ಷೇತ್ರ ನಲುಗಿ ಹೋಗಿತ್ತು. ಪ್ರಸ್ತುತ ಕ್ರೀಡಾ ಕ್ಷೇತ್ರ ಪುನಶ್ಚೇತನಗೊಳ್ಳುತ್ತಿದೆ ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.
ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ರಾಜ್ಯ ಸರಕಾರ, ಜಿಪಂ, ತಾಪಂ, ಪಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಡಿಸೆಂಬರ್ ಕೊನೆಯವಾರದಲ್ಲಿ ತಾಲೂಕಿನಲ್ಲಿ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಕ್ರೀಡಾಕೂಟಕ್ಕೆ ಸಕಲ ಸಿದ್ದತೆಗೆಳು ನೆರವೇರುತ್ತಿವೆ. ನಾನು ರಾಜ್ಯಮಟ್ಟದ ಕ್ರೀಡಾ ಕೂಟದಲ್ಲಿ ಮತ್ತು ದಸರಾ ಕ್ರೀಡಾಕೂಟದಲ್ಲಿ ಭಾಗಿಯಾಗಿ ಸ್ಪರ್ಧಾತ್ಮಕ ಗುಣಗಳನ್ನು ಬೆಳಸಿಕೊಂಡಿದ್ದರಿಂದ ರಾಜಕೀಯ ಜೀವನಕ್ಕೆ ಕ್ರೀಡೆ ಸಹಕಾರಿಯಾಯಿತು. ವಿದ್ಯಾರ್ಥಿಗಳು ಸೋಲು ಗೆಲುವಿನ ಬಗ್ಗೆ ಯೋಚಿಸದೇ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ ಎಂದು ಪ್ರೋತ್ಸಾಹಿಸಿದರು.
ಇಲ್ಲಿ ಗೆದ್ದವರು ದಸರಾ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಅಲ್ಲಿಯೂ ಜಗಳೂರು ತಾಲೂಕಿನ ಪ್ರತಿಭೆಗಳು ಅನಾವರಣಗೊಳ್ಳಲಿ. ಅಲ್ಲಿಯೂ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿ ಎಂದು ಹೇಳಿದರು. ಕಬಡ್ಡಿಯಲ್ಲಿ ಪ್ರಥಮ ಸ್ಥಾನಗಳಿಸಿದ ಮಾಲತಿ ಕಾಲೇಜಿನ ಕ್ರೀಡಾಪಟುಗಳಾದ ಡಿ.ಎಸ್.ಪರಿಮಳ ಅವರಿಗೆ ಶಾಸಕ ಎಸ್.ವಿ.ರಾಮಚಂದ್ರ ಪ್ರಶಸ್ತಿ ವಿತರಿಸಿದರು.
ಕಾರ್ಯಕ್ರಮದಲ್ಲಿ ಪಪಂ ಅಧ್ಯೆಕ್ಷರಾದ ಸಿ.ವಿಶಾಲಾಕ್ಷಿ, ಪಪಂ ಉಪಾಧ್ಯಕ್ಷರಾದ ನಿರ್ಮಲಾ ಕುಮಾರಿ, ತಹಶೀಲ್ದಾರ್ ಸಂತೋಷ್‍ಕುಮಾರ್, ಪಪಂ ಚೀಫ್ ಆಫೀಸರ್ ಲೋಕಾನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.