ಸುದ್ದಿವಿಜಯ, ಜಗಳೂರು: ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆಯಿಂದ ಅಧಿಕ ಲಾಭದ ಜೊತೆಗೆ ಖರ್ಚು ಕಡಿಮೆಯಾಗಲಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಮಿಥುನ್ ಕಿಮಾವತ್ ತಿಳಿಸಿದರು.
ತಾಲೂಕಿನ ಪ್ರಗತಿಪರ ಕೃಷಿಕ ಹಾಗೂ ಪಪಂ ಸದಸ್ಯ ರಮೇಶ್ ರೆಡ್ಡಿ ಅವರ ಜಮೀನಿನನಲ್ಲಿ ಶುಕ್ರವಾರ ರೈತರ ದಿನಾಚರಣೆ ಅಂಗವಾಗಿ ಕಿಸಾನ್ ಗೋಷ್ಠಿ, ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಐದನೇ ಪ್ರಧಾನಿ ಚೌದರಿ ಚರಣ್‍ಸಿಂಗ್ ಅವರ ಹುಟ್ಟುಹಬ್ಬದ ದಿನವಾದ ಡಿ.23ರಂದು ರೈತ ದಿನವನ್ನಾಗಿ ದೇಶದಾದ್ಯಂತ ಆಚರಿಸಲಾಗುತ್ತಿದೆ. ರೈತರ ಆದಾಯ ದ್ವಿಗುಣ ಮತ್ತು ರೈತರ ಅಭ್ಯುದಯಕ್ಕೆ ಅವರು ನೂತನ ಕಾಯ್ದೆಗಳನ್ನು ಜಾರಿಗೆ ತಂದು ಅನ್ನದಾತರ ಸಭ್ಯುದಯಕ್ಕೆ ಅವರು ಕೊಟ್ಟ ಕೊಡುಗೆ ಅನನ್ಯವಾದುದು ಎಂದು ಸ್ಮರಿಸಿದರು.
ಕೃಷಿ ಇಲಾಖೆಯಲ್ಲಿ ಸರಕಾರದ ಮಾರ್ಗಸೂಚಿ ಪ್ರಕಾರ ಡ್ರೋಣ ಆಧಾರಿತ ಸ್ಪೇಯರ್ ಮತ್ತು ಸಾಮಾನ್ಯ ಔಷಧ ಉಪಕರಣಗಳನ್ನು ಖರೀದಿಸಲು ಕೃಷಿ ಪದವಿಧರರಿಗೆ ಶೇ.50ರಷ್ಟು ಸಹಾಯಧನ ನೀಡಲಾಗುತ್ತಿದೆ. ಎಫ್‍ಪಿಒ ಮತ್ತು ಸ್ವಸಾಯ ಸಂಘಗಳಿಗೆ ಶೇ.40 ರಷ್ಟು ಸಹಾಯಧನ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವೆಂಕಟೇಶ್ ಮೂರ್ತಿ ಮಾತನಾಡಿ, ತೋಟಗಾರಿಕೆ ಮಿಷನ್ ಅಡಿಯಲ್ಲಿ ಸಹಾಯಧನ ಮತ್ತು ಸಮುದಾಯ ಕೃಷಿ ಹೊಂಡಗಳಿಗೆ 4ಲಕ್ಷ, ವೈಯಕ್ತಿಕ ಕೃಷಿ ಹೊಂಡಗಳ ನಿರ್ಮಾಣಕ್ಕೆ 75 ಸಾವಿರ ಹಣ ನೀಡಲಾಗುತ್ತಿದೆ, ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ಶೇ.75 ರಷ್ಟು ಅನುದಾನ ಸದ್ಭಳಕೆ ಮಾಡಿಕೊಳ್ಳಿ ಸರಕಾರ ಅನುಮೋದಿತ ಕಂಪನಿಗಳಿಂದ ಮಾತ್ರ ಹನಿ ನೀರಾವರಿ ಯೋಜನೆಗೆ ಅಳವಡಿಸಿಕೊಳ್ಳಿ. ಋತುವಿನ ಬೆಳೆಯನ್ನು ಕ್ರಾಪ್ ಸರ್ವೆಯಲ್ಲಿ ನಮೂದಿಸಿ ಎಂದು ಸಲಹೆ ನೀಡಿದರು.
ರೈತ ಸಂಘದ ಪ್ರದಾನ ಕಾರ್ಯದರ್ಶಿ ಲಕ್ಷಣ್ ನಾಯಕ ಮಾತನಾಡಿ, ಪ್ರಾಚೀನ ಕಾಲದಿಂದಲೂ ಕೃಷಿ ಪದ್ದತಿ ಅವಲಂಬಿಸಿ ಕೊಂಡು ಬರುತ್ತಿದ್ದೇವೆ. ಕೃಷಿಯಲ್ಲಿ ಸಗಣಿ ಗೊಬ್ಬರ ಬಳಕೆ ವಿರಳವಾಗುತ್ತಿದ್ದಂತೆ ರೋಗ ಲಕ್ಷಣಗಳು ಹೆಚ್ಚಾಗುತ್ತಿವೆ. ಗೋವು ಆಧಾರಿತ ಕಾಲದ ಕೃಷಿಯಲ್ಲಿ ದೇಶ ಅರೋಗ್ಯಕರವಾಗಿತ್ತು.
ಪ್ರಸ್ತುತ ಶಾರೀರಿಕ, ಭೌತಿಕವಾಗಿ, ಮಾನಸೀಕವಾಗಿ ಸಮಾಜ ಕುಗ್ಗಿ ಹೋಗಿದೆ. ಕೃಷಿ ಉದ್ಯೋಗವಲ್ಲ ಅದು ಧರ್ಮ. ಪಾರದರ್ಶಕ ಕೃಷಿ ಕರ್ಮವೇ ವ್ಯವಸಾಯ ಎಂದು ಮಹಾತ್ಮ ಗಾಂಧಿಜೀ ಸ್ವಾಲವಂಬನೆ ಬಗ್ಗೆ ಹೇಳಿದ್ದರು ಎಂದು ಸ್ಮರಿಸಿದರು.
ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಲಿಂಗರಾಜ್ ಮತ್ತು ಮೀನುಗಾರಿಕೆ ಸಹಾಯಕ ನಿರ್ದೇಶಕ ಮಂಜುನಾಥ್, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಅವರು ಇಲಾಖೆಯಲ್ಲಿರುವ ಸಹಾಯ ಧನಗಳ ಬಗ್ಗೆ ಮಾಹಿತಿ ನೀಡಿದರು.
ಆತ್ಮಯೋಜನೆ ಅಡಿಯಲ್ಲಿ 2020-21 ಮತ್ತು 2021-22 ನೇ ಸಾಲಿನ ಸಾಧಕ ಕೃಷಿಕರಾದ ಕೆ.ಬಿ.ಶಿವಕುಮಾರ್, ಎ.ಟಿ.ಪ್ರಭಾಕರ್, ಎಸ್.ಬಿ.ಬಸವರಾಜ್, ಪ್ರಭುದೇವ್ ಜಿ.ಎಚ್., ಎಸ್.ಡಿ ಶಾಂತಕುಮಾರಿ, ಬಸವರಾಜಪ್ಪ, ರಷ್ಮಿ, ಉಮೇಶ್, ಮಂಜಮ್ಮ, ಕೆ.ಎಂ.ಸಿದ್ದಲಿಂಗಯ್ಯ ಅವರನ್ನು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಹಾಗೂ ಪಪಂ ಸದಸ್ಯ ರಮೇಶ್ ರೆಡ್ಡಿ, ಕೃಷಿ ಇಲಾಖೆ ಅಧಿಕಾರಿ ಕೆ.ಬೀರಪ್ಪ, ಎಚ್.ಎಂ.ರೇಣುಕುಮಾರ್, ಕೃಷಿ ಸಮಾಜದ ಅಧ್ಯಕ್ಷರಾದ ಜೆ.ಬಿ.ನಾಗರತ್ನಮ್ಮ, ಹನುಮಂತಾಪುರ ಗ್ರಾಪಂ ಅಧ್ಯಕ್ಷ ಮಾರುತಿ, ರೈತ ಮುಖಂಡರ ಗುರುಸಿದ್ದಪ್ಪ ಸೇರಿದಂತೆ ಅನೇಕರು ಇದ್ದರು.