ಸುದ್ದಿವಿಜಯ, ಜಗಳೂರು: ಪಟ್ಟಣದ ಬೆಸ್ಕಾಂ ಎಇಇ ಗಿರೀಶ್ ನಾಯ್ಕ್ ಬೇಜವಾಬ್ದಾರಿ ಖಂಡಿಸಿ ಗುರುವಾರ ಇಲ್ಲಿನ ಬೆಸ್ಕಾಂ ಕಚೇರಿಗೆ ರೈತರು ಮುತ್ತಿಗೆಹಾಕಿ ಪ್ರತಿಭಟನೆ ನಡೆಸಿದರು.
ಕೃಷಿ ಪಂಪ್‍ಸೆಟ್ ಸಂಪರ್ಕದ ವಿದ್ಯುತ್ ಪರಿವರ್ತಕಗಳನ್ನು ದುರಸ್ಥಿಪಡಿಸಿ ವಿತರಣೆ ಮಾಡಲು ವಿಳಂಬ ಮಾಡುತ್ತಿರುವ ಅಧಿಕಾರಿಗಳ ನಿರ್ಲಕ್ಷ ಧೋರಣೆಯನ್ನು ಖಂಡಿಸಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಹತ್ತಾರು ಹಳ್ಳಿ ರೈತರು ಆಗಮಿಸಿ ಬೆಸ್ಕಾಂ ಕಚೇರಿಯ ಎಇಇ ಕೊಠಡಿಗೆ ನುಗ್ಗಿದರು. ಆದರೆ ಅಧಿಕಾರಿಗಳು ಬಾರದೇ ಇದ್ದಿದ್ದರಿಂದ ಇಲಾಖೆಯ ಎಲ್ಲಾ ಸಿಬ್ಬಂದಿಗಳನ್ನು ಹೊರಗೆ ಕಳಿಸಿ ಬಾಗಿಲು ಮುಚ್ಚಿದರು ಅಧಿಕಾರಿಗಳ ವರ್ತನೆಗೆ ಕಿಡಿಕಾರಿದರು.
ಟಿಸಿ ಸುಟ್ಟು 24 ತಾಸಿನೊಳಗೆ ದುರಸ್ಥಿಪಡಿಸಿ ಕೊಡಬೇಕು ಎನ್ನುವುದು ಸರಕಾರದ ಆದೇಶವಿದೆ. ಆದರೆ ಟಿಸಿ ಕೊಟ್ಟು ಹತ್ತು ದಿನಗಳಾದರೂ ಸರಿಪಡಿಸಿ ರೈತರಿಗೆ ವಿತರಣೆ ಮಾಡಿಲ್ಲ. ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಜಮೀನುಗಳಲ್ಲಿ ಬೆಳೆಗಳೆಲ್ಲಾ ನೀರಿನಲ್ಲದೇ ಒಣಗಿ ಹೋಗುತ್ತಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ತಾಲೂಕು ಕಾರ್ಯಕದರ್ಶಿ ಬೈರಾನಾಯಕನಳ್ಳಿ ರಾಜು ಮಾತನಾಡಿ, ತಾಲೂಕಿನ ಕೃಷಿ ಪಂಪ್‍ಸೆಟ್‍ಗಳಿಗೆ ಸಂಬಂಧಿಸಿ ವಿದ್ಯುತ್ ಪರಿವರ್ತಕಗಳು ಸಾಕಷ್ಟು ಸುಡುತ್ತಿವೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಕಳೆದ ಹತ್ತು ದಿನಗಳಿಂದಲೂ ರೈತರಿಗೆ ಟಿಸಿ ನೀಡದೇ ಸುಳ್ಳು ಹೇಳಿಕೊಂಡು ಕಾಲ ಕಳೆಯುತ್ತಿದ್ದಾರೆ ಎಂದು ದೂರಿದರು.
ತಾಲೂಕಿನ ಯಾವುದೇ ಹಳ್ಳಿಯಲ್ಲೂ ಟಿಸಿ ಸುಟ್ಟರೇ ಬೆಸ್ಕಾಂ ಇಲಾಖೆಯವರೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ದಿನದ 24 ತಾಸಿನೊಳಗೆ ಸರಿಪಡಿಸಿ ಕೊಡಬೇಕು. ಕೆಲವು ಗ್ರಾಮಗಳಲ್ಲಿ ರೈತರು ಟಿಸಿ ಕೊಟ್ಟು ಹತ್ತಾರು ದಿನಗಳಾದರು ಅವುಗಳನ್ನು ದುರಸ್ಥಿಪಡಿಸದೇ ನಿರ್ಲಕ್ಷ ತೋರಿದ್ದಾರೆ.
ರೈತರು ಬಂದು ಪ್ರಶ್ನಿಸಿದಾಗ ಮಾತ್ರ ಆದಷ್ಟು ಬೇಗ ಕೊಡುತ್ತೇವೆಂದು ಸಬೂಬು ಹೇಳಿ ಕಳಿಸುತ್ತಾರೆ ಎಂದರು ಆರೋಪಿಸಿದರು.
ಈಗಾಗಲೇ ರೈತರು ಕೊಟ್ಟಿರುವ ಟಿಸಿಗಳನ್ನು ಕೊಡುವವರೆಗೂ ಕಚೇರಿ ಬಿಟ್ಟು ಹೋಗುವುದಿಲ್ಲ. ಸಮಸ್ಯೆ ಬಗೆಹರಿಯುವ ತನಕ ಹೋರಾಟ ನಿಲ್ಲುವುದಿಲ್ಲ. ಇಂದೇ ಟಿಸಿ ಕೊಡಬೇಕು ಎಂದು ಪಟ್ಟು ಹಿಡಿದರು.
ಸ್ಥಳಕ್ಕಾಗಮಿಸಿದ ಅಧಿಕಾರಿಗಳು:
ಪ್ರತಿಭಟನೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಎಇಇ ಗಿರೀಶ್ ನಾಯ್ಕ ಅವರಿಗೆ ರೈತರು ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡರು. ಇಲಾಖೆಯಲ್ಲಿ ಸಾಕಷ್ಟು ಅಧಿಕಾರಿಗಳು ಬಂದು ಕೆಲಸ ಮಾಡಿ ಹೋಗಿದ್ದಾರೆ ಆದರೆ ನಿಮ್ಮಂತಹ ಸೋಮಾರಿತ, ನಿರ್ಲಕ್ಷ ಭಾವನೆ, ರೈತರ ಬಗ್ಗೆ ಕಾಳಜಿ ಇಲ್ಲದ ಅಧಿಕಾರಿಗಳನ್ನು ನಾವೆಂದು ಕಂಡಿಲ್ಲ. ಇಷ್ಟವಿದ್ದರೆ ಕೆಲಸ ಮಾಡಿ ಇಲ್ಲ ಅಂದ್ರೆ ಬಿಟ್ಟು ಹೋಗಿ. ಯಾರದರೂ ಬಂದು ಕೆಲಸ ಮಾಡುತ್ತಾರೆ. ನಿಮ್ಮಿಂದ ಬೆಳೆಗಳೆಲ್ಲಾ ಹಾನಿಯಾಗಿವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಟಿಸಿ ವಿತರಣೆ ಭರವಸೆ:
ಎಇಇ ಗಿರೀಶ್‍ನಾಯ್ಕ ಮಾತನಾಡಿ, 24 ತಾಸಿನೊಳಗೆ ಟಿಸಿ ದುರಸ್ಥಿ ಪಡಿಸಿ ಕೊಡಬೇಕು ಎಂದು ಸರ್ಕಾರದ ಆದೇಶವಿದೆ ಆದರೆ ವಾಸ್ತವ ಸ್ಥಿತಿನೇ ಬೇರೆ ಇದೆ. ಇಲ್ಲಿ ತಾಂತ್ರಿಕ ತೊಂದರೆಗಳಿವೆ. ಕೆಲವೊಮ್ಮ ಆಯಿಲ್ ಇಲ್ಲದೇ ಬರಿಗೈಯಲ್ಲಿ ಕೂರುವಂತಾಗಿದೆ. ಹಾಗಾಗಿ ರೈತರು ಅಧಿಕಾರಿಗಳ ಕಷ್ಟಗಳನ್ನು ಅರ್ಥ ಮಾಡಿಕೊಳ್ಳಬೇಕು. ಸಾದ್ಯವಾದಷ್ಟು ಶನಿವಾರದಿಂದ ಟಿಸಿ ವಿತರಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೈತರ ಸಂಘದ ಜಿಲ್ಲಾ ಕಾರ್ಯದರ್ಶಿ ಸತೀಶ್, ಚಿಕ್ಕಬನ್ನಿಹಟ್ಟಿ ಬಿ. ಬಸವರಾಜ್, ಮುಚ್ಚನೂರು ತಿಮ್ಮಪ್ಪ,ಗೌರಿಪುರ ಮಂಜುನಾಥ್, ಮಲೆಮಾಚಿಕೆರೆ ವಿರೂಪಾಕ್ಷಿ, ಬೈರಾನಾಯಕನಹಳ್ಳಿ ಹಾಲೇಶ್, ಗೌಡಗೊಂಡನಹಳ್ಳಿ ಕಿರಣ್‍ಕುಮಾರ್, ಮಹಮದ್, ಹನುಮಂತಾಪರು ಹಜರತ್ ಅಲಿ ಸೇರಿದಂತೆ ಮತ್ತಿತರಿದ್ದರು.
ರೈತರ ಪರ ಕಾಳಜಿ ಇಲ್ಲದ ಎಇಇ ಗಿರೀಶ್ ನಾಯ್ಕ್:
ರೈತರ ಪರ ಕಾಳಜಿ ಇಲ್ಲದ ಎಇಇ ಗಿರೀಶ್ ನಾಯ್ಕ್ ವಿರುದ್ಧ ಕಳೆದ ಎರಡು ತಿಂಗಳಲ್ಲಿ ರೈತರು ನಾಲ್ಕು ಬಾರಿ ಪ್ರತಿಭಟಿಸಿದ್ದಾರೆ. ಆದರೂ ಬೆಸ್ಕಾಂ ಅಧಿಕಾರಿಗಳು ಅವರಿಗೆ ಬುದ್ಧಿ ಹೇಳುವ ಕೆಲಸ ವಾಗಿಲ್ಲ. ಪ್ರಭಾವಿ ರಾಜಕಾರಣಿಯ ಕೃಪಾಕಟಾಕ್ಷದಿಂದ ಅವರು ಇಲಾಖೆಯಲ್ಲಿ ಉಳಿದಿದ್ದಾರೆ. ಅವರನ್ನು ವರ್ಗಾವಣೆ ಮಾಡದಿದ್ದರೆ ಉಗ್ರಹೋರಾಟ ಮಾಡುತ್ತೇವೆ ಎಂದು ರೈತರ ಸಂಘದ ಜಿಲ್ಲಾ ಕಾರ್ಯದರ್ಶಿ ಸತೀಶ್ ಆಕ್ರೋಶ ವ್ಯಕ್ತಪಡಿಸಿದರು.