suddivijayanews31/08/2024
ಸುದ್ದಿವಿಜಯ, ಜಗಳೂರು: ಬದುಕಿನ ಮಾರ್ಗ ಬದಲಿಸುವ ಅಸ್ತ್ರವಾಗಿರುವ ಶಿಕ್ಷಣ ಎಲ್ಲ ವರ್ಗದ ಜನರಿಗೆ ಸಮಾನವಾಗಿ ಲಭ್ಯವಾದಾಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಬಿ.ಸಿದ್ದೇಶ್ ಪ್ರತಿಪಾದಿಸಿದರು.
ತಾಲೂಕಿನ ಕೆಚ್ಚೇನಾಹಳ್ಳಿ ಗ್ರಾಮದಲ್ಲಿ ಗ್ರೀನ್‍ಸ್ಟಾರ್ ಇಂಡಿಯಾ (ಲಿ)ನ ಸ್ಪಿಕ್ ರಸಗೊಬ್ಬರ ಕಂಪನಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 100 ವಿದ್ಯಾರ್ಥಿಗಳಿಗೆ ಶನಿವಾರ ಉಚಿತ ಬ್ಯಾಗ್ ಮತ್ತಿತರ ಪಠ್ಯ ಸಾಮಾಗ್ರಿಗಳನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಿಕ್ಷಣ ದಿನದಿಂದ ದಿನಕ್ಕೆ ದುಭಾರಿಯಾಗುತ್ತಿದೆ. ಸರಕಾರ ಸರಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಉಚಿತವಾಗಿ ಎಲ್ಲವನ್ನೂ ನೀಡುತ್ತಿದ್ದರೂ ಖಾಸಗಿ ಶಾಲೆಗಳತ್ತ ಪೋಷಕರ ಚಿತ್ತ ಹರಿಸುತ್ತಿದ್ದಾರೆ. ಸರಕಾರಿ ಶಾಲೆಗಳು ಉಳಿದರೆ ಮಾತ್ರ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಮುಂದೆ ಬರಲು ಸಾಧ್ಯ.ಮಹಾನ್ ವ್ಯಕ್ತಿಗಳೆಲ್ಲಾ ಓದಿರುವುದು ಸರಕಾರಿ ಶಾಲೆಗಳಲ್ಲಿ. ಅಂತಹ ಸರಕಾರಿ ಶಾಲೆಗಳ ಸ್ಥಿತಿ ಮೂಲಸೌಕರ್ಯಗಳಿಂದ ನಲುಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ವೇಳೆ ಗ್ರಾಪಂ ಅಧ್ಯಕ್ಷ ಹರೀಶ್, ಗ್ರಾಮದ ಮುಖಂಡರಾದ ಎಂ.ಬಿ.ಬಸವರಾಜ್, ಕೆ.ಬಿ.ಶಿವಕುಮಾರ್, ಆರ್.ಜಿ.ಮಂಜುನಾಥ್, ಕಂಪನಿಯ ಆರ್‍ಓ ಶ್ರೀಕಾಂತ್, ಆರ್.ಎಂ. ಭರಮಪ್ಪ, ಅರುಣ್, ರವೀಂದ್ರ, ಸೊಕ್ಕೆ ಭೀಮಣ್ಣ ಸೇರಿದಂತೆ ಶಿಕ್ಷಕ ವರ್ಗ ಉಪಸ್ಥಿತರಿದ್ದರು.