ಸುದ್ದಿವಿಜಯ, ಜಗಳೂರು: ಪಟ್ಟಣದಲ್ಲಿ ಚಲ್ಲಾಪಿಲ್ಲಿ ಕಸದ ರಾಶಿ, ಗಬ್ಬು ನಾರುತ್ತಿರುವ ಚರಂಡಿಗಳ ಬಗ್ಗೆ ಪಪಂ ಅಧಿಕಾರಿಗಳಿಗೆ ಕಣ್ಣು ಕಾಣ್ತಿಲ್ಲ, ಕಿವಿಗಳು ಕೇಳ್ತಿಲ್ಲ! ಎಂಬ ಶೀರ್ಷಿಕೆ ಅಡಿ ನ್ಯೂಸ್ ಸುದ್ದಿವಿಜಯದಲ್ಲಿ ಪ್ರಕಟವಾಗುತ್ತಿದ್ದಂತೆ ಪಪಂ ಅಧಿಕಾರಿಗಳು ಎಚ್ಚೆತ್ತಿದ್ದಾರೆ. ಪಟ್ಟಣದ ಬಹುತೇಕ ಕಟ್ಟಿಕೊಂಡಿದ್ದ ಚರಂಡಿಗಳನ್ನು ಸ್ವಚ್ಛಗೊಳಿಸಲು ಅಧಿಕಾರಿಗಳು ಗಮನ ಹರಿಸಿದ್ದಾರೆ.
ತಾಲೂಕು ಕಚೇರಿಗೆ ಬುಧವಾರ ತಹಶೀಲ್ದಾರ್ ಜಿ.ಸಂತೋಷ್ ಕುಮಾರ್ ಅವರು ಪಪಂ ಚೀಫ್ ಆಫೀಸರ್ ಮತ್ತು ಆರೋಗ್ಯಾಧಿಕಾರಿ ಮೊಹಮ್ಮದ್ ಕಿಫಾಯತ್ ಅವರನ್ನು ಕರೆಸಿ ಸ್ವಚ್ಛತೆ ಕಾಪಾಡದ ಬಗ್ಗೆ ವರದಿಯನ್ನು ಪ್ರಸ್ತಾಪಿಸಿದರು.
ಸ್ಚಚ್ಛತೆ ಕಾಪಾಡದಿದ್ದರೆ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಗಂಭೀರವಾದ ಸೂಚನೆ ನೀಡಿದರು. ತಕ್ಷಣವೇ ಲೋಕ್ಯಾನಾಯ್ಕ್ ಅವರು ಕಚೇರಿಯ ಮುಂದಿರುವ ಬಾಕ್ಸ್ ಚರಂಡಿಯಲ್ಲಿ ಕಟ್ಟಿಕೊಂಡಿದ್ದ ಕಸವನ್ನು ಸಿಬ್ಬಂದಿಗಳ ನೆರವಿನಿಂದ ಸ್ಥಳದಲ್ಲೇ ನಿಂತಿದ್ದು ಸ್ವಚ್ಛಗೊಳಿಸಿದರು. ಎಲ್ಲೆಂದರಲ್ಲಿ ಟೀಕಪ್‍ಗಳನ್ನು ಎಸೆದಿದ್ದ ಗೂಡಂಗಡಿ ಮಾಲೀಕರ ನೆರವಿನಿಂದಲೇ ಸ್ವಚ್ಛತೆಗೊಳಿಸಿ, ಸ್ವಚ್ಛತೆಯ ಪಾಠ ಹೇಳಿದರು.
ದೇವೇಗೌಡ ಬಡಾವಣೆಯ ಅಶ್ವಿನಿ ಲೇಔಟ್‍ನಲ್ಲಿ ಇರುವ ಸೇತುವೆ ದುರಸ್ತಿ ಬಗ್ಗೆ ತಹಶೀಲ್ದಾರ್ ವಿಚಾರಿಸಿದರು. ಅದಕ್ಕೆ ಉತ್ತರಿಸಿದ ಅವರು, ಅನುದಾನದ ಕೊರತೆಯಿಂದ ಕಾರ್ಯ ಮಾಡಲು ಆಗಿಲ್ಲ ಎಂದರು. ನಿರ್ಮಾಣ ಸಾಧ್ಯವಾಗದೇ ಆ ರಸ್ತೆಯನ್ನೇ ಬಂದ್ ಮಾಡಿ. ಸಾರ್ವಜನಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಿ ಎಂದು ಸೂಚನೆ ನೀಡಿದರು.
ಪಟ್ಟಣದಲ್ಲಿರುವ ಬಾಕ್ಸ್‍ಚರಂಡಿ, ಕಸದ ನಿರ್ವಹಣೆ ಬಗ್ಗೆ ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಸೂಚನೆ ನೀಡಿದರು. ಈ ವೇಳೆ ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್, ಆರೋಗ್ಯಾಧಿಕಾರಿ ಮೊಹಮ್ಮದ್ ಕಿಫಾಯತ್ ಉಪಸ್ಥಿತರಿದ್ದರು.