ಸುದ್ದಿವಿಜಯ, ಜಗಳೂರು: ನನ್ನ ಅವಧಿಯ ಜನಪ್ರಿಯ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್ ಸೇರಿ ಅನೇಕ ಯೋಜನೆಗಳಿಗೆ ಬಿಜೆಪಿ ಸರಕಾರ ಎಳ್ಳು ನೀರು ಬಿಡುವ ಕೆಲಸ ಮಾಡ್ತಿದೆ. ಇವರ ಮನೆ ಹಾಳಾಗ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಡಿ ಶಾಪ ಹಾಕಿದರು.
ಜಗಳೂರು ಪಟ್ಟಣದ ಬಯಲುರಂಗ ಮಂದಿರದಲ್ಲಿ ಶುಕ್ರವಾರ ಸಂಜೆ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನ್ನ ಭಾಗ್ಯ ಯೋಜನೆ ಜಾರಿಗೆ ತಂದು ನಾನು ಬಡವರಿಗೆ ಏಳು ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಿದೆ. ಆದರೆ ಬಿಜೆಪಿ ಸರಕಾರ ಅದನ್ನು 5 ಕೆಜಿಗೆ ಇಳಿಸಿದರು ಏಕೆ? ಬಡವರ ಹೊಟ್ಟೆ ಮೇಲೆ ಒಡೆಯುವ ಕೆಲಸವನ್ನು ಬಿಜೆಪಿ ಸರಕಾರ ಮಾಡುತ್ತಿದೆ. ಈ ಬಗ್ಗೆ ಯಡಿಯೂರಪ್ಪನವರನ್ನು ಕೇಳಿದೆ. ಅದಕ್ಕೆ ಅವರು ನಮ್ಮತ್ರ ದುಡ್ಡಿಲ್ಲ. ಕೊರೋನಾ ಬಂದೆ ಎಂದರು.
ನಾವು ಅಧಿಕಾರಕ್ಕೆ ಬಂದರೆ ಹತ್ತು ಕೆಜಿ ಅಕ್ಕಿ ಕೊಟ್ಟೇ ಕೊಡುತ್ತೇವೆ. 200 ಯುನಿಟ್ ವಿದ್ಯುತ್, ಪ್ರತಿ ಮನೆಯ ಯಜಮಾನಿಗೆ ಎರಡು ಸಾವಿರ ಹಣ ಅವರ ಖಾತೆಗೆ ಜಮಾ ಮಾಡುತ್ತೇವೆ. ಇವು ನಮ್ಮ ಪಕ್ಷದ ಮೂರು ಗ್ಯಾರಂಟಿ ಯೋಜನೆಗಳು. ಈಗಾಗಲೇ ಎಲ್ಲ ಕಡೆ ಗ್ಯಾರಂಟಿ ಕಾರ್ಡ್ ಕೊಡುತ್ತಿದ್ದೇವೆ. ಈ ರಾಜ್ಯದ ಬಜೆಟ್ 3.9 ಲಕ್ಷ ಕೋಟಿಗೂ ಅಧಿಕ. ಅದರಲ್ಲಿ 8 ಸಾವಿರ ಕೋಟಿ ರೂ ಖರ್ಚು ಮಾಡಿ ಅಕ್ಕಿ ಭಾಗ್ಯ ಕೊಡಲು ಏಕೆ ಆಗಲ್ಲ ಎಂದರು.
ನನ್ನ ಅಧಿಕಾರವಧಿಯಲ್ಲಿ 5 ಲಕ್ಷ ಮನೆ ಕಟ್ಟಿಸಿದೆ. ಜಗಳೂರು ಕ್ಷೇತ್ರಕ್ಕೆ 15 ಸಾವಿರ ಮನೆ ಕೊಟ್ಟೆ. ಆದರೆ ಈಗಿನ ಸರಕಾರ ಒಂದೇ ಒಂದು ಮನೆ ಕೊಟ್ಟಿಲ್ಲ. ಬಡವರಿಗೆ ಮನೆ ಕಟ್ಟಲು ಅವಕಾಶ ಮಾಡಿಕೊಡದವರು ಅಧಿಕಾರದಲ್ಲಿ ಇರಲು ನಾಲಯಕ್. ನಮ್ಮ ಅವಧಿಯಲ್ಲಾದ ಯೋಜನೆಗಳನ್ನು ಉದ್ಘಾಟನೆ ಮಾಡಿ ನಾವೇ ಮಾಡಿದ್ದು ಎಂದು ಬೀಗುತ್ತಿದ್ದಾರೆ. ವಾಸಿಸುವವನೇ ಭೂಮಿಯ ಒಡೆಯ ಎಂಬ ಯೋಜನೆ ಮಾಡಿದವನು ನಾನು. ಆದರೆ ಈಗಿನ ಸರಕಾರ ಎಲ್ಲವನ್ನು ಮುಚ್ಚುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಮಯ್ಯ ಜಗಳೂರು ಶಾಸಕರನ್ನು ಸೋಲಿಸಿ: ‘ಜಗಳೂರು ಶಾಸಕ ಮಿಸ್ಟರ್ ಎಸ್.ವಿ.ರಾಮಚಂದ್ರ ಎಲ್ಲಪ್ಪ ಇಂದಿರಾ ಕ್ಯಾಂಟೀನ್’? ಬಡವರ, ಕಾರ್ಮಿಕರ ಹೊಟ್ಟೆ ತುಂಬಿಸುತ್ತಿದ್ದ ಕ್ಯಾಂಟೀನ್‍ನಲ್ಲಿ ಸರಿಯಾದ ನಿರ್ವಹಣೆ ಮಾಡುತ್ತಿಲ್ಲವಂತೆ. ಏನ್ ಮಾಡ್ತಿದ್ದೀಯ. ನಿಮ್ಮ ಆಡಳಿತದ ಅವ್ಯವಸ್ಥೆಯನ್ನು ಜನ ನೋಡುತ್ತಿದ್ದಾರೆ. ದಮ್ಮಯ್ಯ ದಯಮಾಡಿ ರಾಮಚಂದ್ರ ಅವರನ್ನು ಸೋಲಿಸಿ ನಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕಿ ಎಂದು ಜನರಲ್ಲಿ ಮನವಿ ಮಾಡಿದರು.
ಮೋದಿ ಏನು ಕೊಟ್ರು?: ಈ ದೇಶದ ಪ್ರಧಾನಿ ಅಚ್ಚೇದಿನ್ ಆಗಯಾ ಎನ್ನುತ್ತಾ 7 ವರ್ಷ ಪ್ರಧಾನಿ ಆದರು. ನಾ ಕಾವೋಂಗ ನಾ ಕಾನೇದೊಂಗಾ ಎಂದು ಹೇಳುವ ಪ್ರಧಾನಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ತಿನ್ನಲು ಏಕೆ ಬಿಟ್ಟಿದ್ದೀರಿ. ಎಸ್‍ಸಿ ಎಸ್‍ಟಿ ವರ್ಗದ ಜನರಿಗೆ ಅವರ ಕೊಡುಗೆ ಏನು? ತಳ ಸಮುದಾಯಗಳು ಬಿಜೆಪಿಗೆ ಏಕೆ ವೋಟ್ ಹಾಕಬೇಕು ಹೇಳಿ. ನಾನು ಸಿಎಂ ಆಗಿದ್ದಾಗ ಎಸ್‍ಸಿಪಿ, ಟಿಎಸ್‍ಪಿಗಾಗಿ ಪ್ರತ್ಯೇಕವಾಗಿ ಹಣವನ್ನು ಮೀಸಲಿಟ್ಟೆ.
ಆದರೆ ಈಗಿನ ಸರಕಾರ ಎಸ್‍ಸಿ ಎಸ್‍ಟಿ ಜನರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ. ನರೇಂದ್ರ ಮೋದಿ ಅವರು ಸಬ್‍ಕಾ ಸಾಥ್ ಸಬ್‍ಕಾ ವಿಕಾಸ್ ಎಂದು ಹೇಳುತ್ತಾರೆ. ತುಳಿತಕ್ಕೆ ಒಳಗಾದವರೆ ವಿಶೇಷ ಸೌಲಭ್ಯ ಕೊಡದೇ ಇದ್ದರೆ ಅಭಿವೃದ್ಧಿ ಹೇಗೆ ಆಗುತ್ತದೆ ಎಂದು ಪ್ರಶ್ನಿಸಿದರು.
ಬಿಜೆಪಿ ಅಧಿಕಾರಲ್ಲಿ ಎಸ್‍ಸಿಪಿ ಟಿಎಸ್‍ಪಿಗೆ ಖರ್ಚಾಗಿದ್ದ ಹಣ 22 ಸಾವಿರ ಕೋಟಿ. ನಾನು ಸಿಎಂ ಆಗಿದ್ದಾಗ 5 ವರ್ಷದಲ್ಲಿ ಖರ್ಚಾದ ಹಣ 88 ಸಾವಿರ ಕೋಟಿ. ಇವರಿಗೆ ರಾಜಕೀಯ ಇಚ್ಛಾಶಕ್ತಿ ಇಲ್ಲ. ಬಡವರ ಬಗ್ಗೆ ಬದ್ಧತೆ ಇಟ್ಟುಕೊಂಡ ಪಕ್ಷಕ್ಕೆ ಮತಹಾಕಿ ಎಂದರು.
ಭ್ರಷ್ಟ ಪಕ್ಷ ಬಿಜೆಪಿ: ಶಾಸಕ ಮಾಡಾಳ್ ವಿರೂಪಕ್ಷ ಅವರ ಮನೆಯಲ್ಲಿ 8 ಕೋಟಿ ರೂ ಪತ್ತೆಯಾಗಿದೆ. ಅವರ ಮಗ ಪ್ರಶಾಂತ್ ಭ್ರಷ್ಟಾಚಾರದಲ್ಲಿ ರೆಡ್‍ಹ್ಯಾಂಡ್ ಆಗಿ ಸಿಕ್ಕಬಿದ್ದಿದ್ದಾನೆ. ಇನ್ನು ಮುಖ್ಯಮಂತ್ರಿಗಳ ಮನೆಯಲ್ಲಿ ಎಷ್ಟು ಭ್ರಷ್ಟಾಚಾರದ ಹಣವಿರಬಹುದು ಹೇಳಿ. ಇದಕ್ಕಿಂತಾ ಸಾಕ್ಷಿ ಬೇಕಾ? ನಿಮ್ಮ ಭ್ರಷ್ಟಾಚಾರಕ್ಕೆ ಕಾಂಟ್ರ್ಯಾಕ್ಟರ್ ಸಂತೋಷ್ ಬಲಿಯಾದ.
ಕೆಂಪಣ್ಣ ಅವರು ನರೇಂದ್ರ ಮೋದಿಗೆ ಪತ್ರಬರೆದು ಶೇ.40ರಷ್ಟು ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸಿದ್ದಕ್ಕೆ ಅವರನ್ನೇ ಜೈಲಿಗೆ ಕಳುಹಿಸಿದಿರಿ. ಇದೇ ನಿಮ್ಮ ಸ್ವಚ್ಛ ಆಡಳಿತ ಎಂದು ಆಕ್ರೋಶ ಹೊರಹಾಕಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮಾತನಾಡಿ, ಈಗಿನ ಸರಕಾರ ಆಪರೇಷನ್ ನಿಂದ ಜನಿಸಿದ ಸರಕಾರ. ಶೇ.40 ಕಮಿಷನ್ ಸರಕಾರ. ಸರಕಾರ ನಡೆಸುವರಿಗೆ ನಾಚಿಕೆಯಾಗಬೇಕು. ರೈತರಿಗೆ, ಬಡವರಿಗೆ ಅನ್ಯಾಯ ಮಾಡಿದಕ್ಕೆ ನೀವು ವಿಜಯ ಸಂಕಲ್ಪ ಯಾತ್ರೆ ಯಾಡುತ್ತೀರಿ. ಯಾವ ಪುರುಷಾರ್ಥಕ್ಕೆ. ಭ್ರಷ್ಟಾಚಾರ ಮಾಡಿಕ್ಕೆ ನಿಮಗೆ ಜನ ಆಶೀರ್ವಾದ ಮಾಡಬೇಕೆ. ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ರಾಜ್ಯಕ್ಕೆ ನೂರು ಸಾರಿ ಬರಲಿ ಆದರೆ ಜನ ಮಾತ್ರ ಬಿಜೆಪಿಗೆ ಸೋಲಿಸುವುದು ಕಟ್ಟಿಟ್ಟ ಬುತ್ತಿ ಎಂದರು.
ಯಾರಿಗೆ ಟಿಕೆಟ್ ಕೊಟ್ಟರೂ ಅವರನ್ನು ಗೆಲ್ಲಿಸಿ:
ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮಾತನಾಡಿ, ಜಗಳೂರು ಕ್ಷೇತ್ರದಲ್ಲಿ ಆರು ಜನ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಪಕ್ಷ ಯಾರಿಗೇ ಟಿಕೆಟ್ ಕೊಟ್ಟರೂ ಎಲ್ಲರೂ ಟಿಕೆಟ್ ಕೊಟ್ಟ ಅಭ್ಯರ್ಥಿಗೆ ದುಡಿಯಬೇಕು. ಪಕ್ಷವನ್ನು ಅಧಿಕಾರಕ್ಕೆ ತರಬೇಕಾದರೆ ನೀವು ಮೊದಲು ಒಗ್ಗಟ್ಟಿನಿಂದ ಕೆಲಸ ಮಾಡಿ ಎಂದರು.
ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡ್ತೀವಿ:
ವೇದಿಕೆಯಲ್ಲಿ ಮಾಜಿ ಶಾಸಕ ಎಚ್.ಪಿ.ರಾಜೇಶ್, ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ಕೆ.ಪಿ.ಪಾಲಯ್ಯ ಮಾತನಾಡಿ, ನಾವೆಲ್ಲ ಟಿಕೆಟ್‍ಗಾಗಿ ಅರ್ಜಿ ಹಾಕಿದ್ದೇವೆ. ಹೈಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರೂ ನಾವು ಸಿದ್ಧರಾಗಿ, ಬದ್ಧರಾಗಿ ಒಗ್ಗಟ್ಟಾಗಿ ದುಡಿಯುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಠೋಡ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಸಗೋಡು ಜಯಸಿಂಹ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಕೆಪಿಸಿಸಿ ಜಗಳೂರು ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್, ಯುವ ಮುಖಂಡ ರಕ್ಷಾ ರಾಮಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಷಂಷೀರ್‍ಅಹ್ಮದ್, ಮಂಜುನಾಥ್ ಸೇರಿ ಅನೇಕರು ಇದ್ದರು.